ADVERTISEMENT

ಸಕ್ಕರೆ ಕಾರ್ಖಾನೆ: ಮುತ್ತಿಗೆ 16ರಂದು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 10:05 IST
Last Updated 13 ಅಕ್ಟೋಬರ್ 2012, 10:05 IST

ಯಾದಗಿರಿ: ಶಹಶಪುರ ತಾಲ್ಲೂಕಿನ ತುಮಕೂರಿನಲ್ಲಿ ಸ್ಥಾಪಿಸಿರುವ ಸಕ್ಕರೆ ಕಾರ್ಖಾನೆಗಾಗಿ ಜಮೀನನ್ನು ಕಳೆದುಕೊಂಡ ತುಮಕೂರ ಹಾಗೂ ವಡಗೇರಾ ಗ್ರಾಮದ ನಿವಾಸಿಗಳಿಗೆ ನೀಡಿದ ಭರವಸೆ ಈಡೇರಿಸುವಲ್ಲಿ ಕಾರ್ಖಾನೆ ವ್ಯವಸ್ಥಾಪಕ ಮಂಡಳಿ ವಿಫಲರಾಗಿರುವುದನ್ನು ಖಂಡಿಸಿ, ಗ್ರಾಮಸ್ಥರು ಹಾಗೂ ಕರವೇ ಕಾರ್ಯಕರ್ತರು ಅ.16ರಂದು ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕುವುದಾಗಿ ತಿಳಿಸಿದ್ದಾರೆ.

ಕಾರ್ಖಾನೆಯಲ್ಲಿ ಉತ್ಪಾದಿಸುವ ವಿದ್ಯುತ್ ಅನ್ನು ಈ ಗ್ರಾಮಗಳಿಗೆ ನಿರಂತರವಾಗಿ ನೀಡಲಾಗುವುದು. ಎರಡು ಗ್ರಾಮಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯವರು ಗುಲ್ಬರ್ಗ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ  ಆಶ್ವಾಸನೆ ನೀಡಿದ್ದರು. ಆದರೆ ಕಾರ್ಖಾನೆ ಪ್ರಾರಂಭವಾಗಿ ನಾಲ್ಕು ವರ್ಷ ಕಳೆದರೂ ಎರಡು ಗ್ರಾಮಗಳಿಗೆ ಯಾವುದೇ ಸೌಲಭ್ಯ ಒದಗಿಸಿಲ್ಲ.
 
ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ. ಇದರಿಂದ ಬೇಸತ್ತ ತುಮಕೂರ ಹಾಗೂ ವಡಗೇರಾ ಗ್ರಾಮದ ರೈತರು ಮತ್ತು ಕರವೇ ಹೋಬಳಿ ಘಟಕದ ವತಿಯಿಂದ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್ ಭೀಮುನಾಯಕ ನೇತೃತ್ವದಲ್ಲಿ ಅ.16 ರಂದು ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಹೋಬಳಿ ಘಟಕದ ಅಧ್ಯಕ್ಷ ಶಿವುಕುಮಾರ ಕೊಂಕಲ್, ರಂಗಯ್ಯ ಮುಸ್ತಾಜೀರ, ಅಬ್ದುಲ್ ಚಿಗಾನೂರ, ಹಣಮಂತ ಟೇಕರಾಳ, ಭೀಮು ಕೊಡಾಲ, ಅಬ್ದುಲ್ ಅರ್ಜುಣಗಿ, ಅಯ್ಯಪ್ಪ ಹಾಲಗೇರಾ, ಪ್ರಭು ಬೇನಕನಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.