ADVERTISEMENT

ಸರ್ಕಾರಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2017, 6:39 IST
Last Updated 27 ಡಿಸೆಂಬರ್ 2017, 6:39 IST
ಯಾದಗಿರಿಯಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿ ಸದಸ್ಯರು ಅಕ್ರಮ ನೇಮಕಾತಿ ಖಂಡಿಸಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೆಶಕರ ಕಚೇರಿ ಬೀಗ ಹಾಕಿ ಪ್ರತಿಭಟನೆ ನಡೆಸಿದರು
ಯಾದಗಿರಿಯಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿ ಸದಸ್ಯರು ಅಕ್ರಮ ನೇಮಕಾತಿ ಖಂಡಿಸಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೆಶಕರ ಕಚೇರಿ ಬೀಗ ಹಾಕಿ ಪ್ರತಿಭಟನೆ ನಡೆಸಿದರು   

ಯಾದಗಿರಿ: ‘ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಸಮಗ್ರ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದ ರಾಜ್ಯ ದಲಿತ ಸಂಘರ್ಷ ಸಮಿತಿ ಸದಸ್ಯರು ಮಂಗಳವಾರ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

‘ಜಿಲ್ಲೆಯ ಶಹಾಪುರ, ಸುರಪುರ, ಗುರುಮಠಕಲ್ ತಾಲ್ಲೂಕು ಕೇಂದ್ರಗಳಲ್ಲಿ ದಲಿತರಿಗೆ ಮತ್ತು ಇತರೆ ಜಾತಿಯವರಿಗೆ ಸಿಗಬೇಕಾದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳಲ್ಲಿ ಅಕ್ರಮ ನೇಮಕಾತಿ ನಡೆದಿದೆ. ಅಕ್ರಮ ನೇಮಕಾತಿ ಬಗ್ಗೆ ಪ್ರಶ್ನಿಸಿದರೆ ಉಪ ನಿರ್ದೇಶಕರು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಸುರಪುರ ತಾಲ್ಲೂಕಿನ ದೇವತ್ಕಲ್ ಗ್ರಾಮದ ಅಂಬೇಡ್ಕರ್ ನಗರದಲ್ಲಿ ಪರಿಶಿಷ್ಟ ಜಾತಿಗೆ ಮಂಜೂರಾದ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಸ್ಥಳೀಯ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಗೆ ಸಿಗಬೇಕಾದ ಹುದ್ದೆಯನ್ನು ಪಕ್ಕದ ಹಾಲಬಾವಿ ಗ್ರಾಮದ ಮಹಿಳೆಗೆ ಅವಕಾಶ ಕಲ್ಪಿಸಿಕೊಡುವ ಮೂಲಕ ಭ್ರಷ್ಟಾಚಾರ ನಡೆಸಲಾಗಿದೆ. ತಾಲ್ಲೂಕುಮಟ್ಟದ ಅಧಿಕಾರಿಗಳು ಮತ್ತು ಆಯ್ಕೆ ಸಮಿತಿಯವರು ಸರ್ಕಾರದ ಆದೇಶ ಉಲ್ಲಂಘಿಸಿ ಅಕ್ರಮ ಎಸಗುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಯಾದಗಿರಿ ತಾಲ್ಲೂಕಿನ ಮೈಲಾಪುರ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯ ನಿವೃತ್ತಿಗಿಂತ ಮೊದಲೇ ಆ ಹುದ್ದೆಯನ್ನು ತುಂಬಿದ್ದಾರೆ. ಪರಿಶಿಷ್ಟ ಜಾತಿಯವರಿಗೆ ಮೀಸಲಿದ್ದ ಹುದ್ದೆಯನ್ನು ಸಾಮಾನ್ಯ ವರ್ಗವರಿಗೆ ನೇಮಕಾತಿ ನಡೆಸಿ ಅಲ್ಲೂ ಅಕ್ರಮ ಮಾಡಿದ್ದಾರೆ. ಜಿಲ್ಲಾಧಿಕಾರಿ ಈ ಕುರಿತು ಸಮಗ್ರ ತನಿಖೆಗೆ ಮುಂದಾಗಬೇಕು. ಇಲ್ಲದಿದ್ದರೆ ಜ.3ರಂದು ಭೀಮಾಬ್ರಿಡ್ಜ್‌ ಸಂಪರ್ಕ ಸೇತುವೆಯಲ್ಲಿ ರಸ್ತೆ ತಡೆ ನಡೆಸಲಾಗುವುದು’ ಎಂದು ಸಮಿತಿ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಕ್ರಾಂತಿ ಎಚ್ಚರಿಸಿದರು.

ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ನಡೆಸುತ್ತಿರುವ ಅಕ್ರಮ ಖಂಡಿಸಿ ಪ್ರತಿಭಟನಾಕಾರರು ಇಲಾಖೆ ಕಚೇರಿಗೆ ಮುಳ್ಳುಬೇಲಿ ಹಾಕುಲು ಯತ್ನಿಸಿದರು. ಪ್ರತಿಭಟನಾಕಾರರ ಯತ್ನವನ್ನು ಪೊಲೀಸರು ವಿಫಲಗೊಳಿಸಿದರು.

ನಂತರ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಮುಳ್ಳಬೇಲಿಯನ್ನು ಜಿಲ್ಲಾಡಳಿತದ ಹೊರಗಡೆಯೇ ಬಿಟ್ಟು ಕಚೇರಿಗೆ ಬೀಗ ಹಾಕಿ ಅಧಿಕಾರಿಗಳ ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಮುತ್ತರಾಜ ದೇವತ್ಕಲ್, ತಿಪ್ಪಣ್ಣ ಶೆಳ್ಳಿಗಿ, ದೇವಿಂದ್ರಪ್ಪ, ಮರಲಿಂಗಪ್ಪ, ಬಸಲಿಂಗಪ್ಪ, ಮಲ್ಲಪ್ಪ ಅರಿಕೇರ, ಮಹೇಶ, ಚಂದ್ರಶೇಖರ ಅಸನಾಪೂರ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.