ADVERTISEMENT

ಸಿಗದ ಶಿಕ್ಷಣ ಸೌಕರ್ಯ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 11:25 IST
Last Updated 10 ಸೆಪ್ಟೆಂಬರ್ 2011, 11:25 IST

ಯಾದಗಿರಿ: ಜಿಲ್ಲೆಯ ಬಹುತೇಕ ಪದವಿಪೂರ್ವ ಕಾಲೇಜುಗಳಲ್ಲಿ ಸೌಲಭ್ಯಗಳೇ ಇಲ್ಲದೇ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ವಿಜ್ಞಾನ ಬೋಧಿಸುವ ಪದವಿಪೂರ್ವ ಕಾಲೇಜುಗಳಲ್ಲಿ ಉಪಕರಣಗಳಿಲ್ಲದೇ, ಪ್ರಾಯೋಗಿಕ ಶಿಕ್ಷಣಕ್ಕೂ ಬೇರೆ ಕಾಲೇಜುಗಳಿಗೆ ಹೋಗುವಂತಾಗಿದೆ.

ಜಿಲ್ಲೆಯ ಬಹುತೇಕ ಪದವಿಪೂರ್ವ ಕಾಲೇಜುಗಳ ಸ್ಥಿತಿ ಇದೇ ರೀತಿಯದ್ದಾಗಿದೆ. ಸುಮಾರು ಏಳು ಕಾಲೇಜುಗಳಲ್ಲಿ ವಿಜ್ಞಾನವನ್ನು ಬೋಧಿಸಲಾಗುತ್ತಿದ್ದು, ಈ ಕಾಲೇಜುಗಳಲ್ಲಿ ಶಿಕ್ಷಕರಿದ್ದರೂ, ಉಪಕರಣಗಳಿಲ್ಲದೇ ಕೊರಗುವಂತಾಗಿದೆ. ವಿಜ್ಞಾನ ವ್ಯಾಸಂಗಕ್ಕೆ ಪ್ರಾಯೋಗಿಕ ಅಧ್ಯಯನ ಅತ್ಯವಶ್ಯಕವಾಗಿದ್ದು, ಪ್ರಯೋಗಾಲಯದಲ್ಲಿ ಸಲಕರಣೆಗಳೇ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ದಿಕ್ಕೇ ತೋಚದಂತಾಗಿದೆ.

ಕೇವಲ ಪದವಿಪೂರ್ವ ಕಾಲೇಜುಗಳನ್ನೇ ನಂಬಿ ಕುಳಿತರೇ ಆಗದು ಎಂದು ಬೇರೆ ವೃತ್ತಿಪರ ಕೋರ್ಸ್‌ಗಳನ್ನಾದರೂ ಮಾಡಬೇಕೆಂದರೆ ಅದೂ ಸಾಧ್ಯವಾಗುತ್ತಿಲ್ಲ. ಐಟಿಐ, ಜೆಓಸಿಯಂತಹ ಕೋರ್ಸ್‌ಗಳನ್ನು ಕಲಿಸುವ ಸಂಸ್ಥೆಗಳೂ ಬೆರಳೆಣಿಕೆಯಷ್ಟಿವೆ. ಹೀಗಾಗಿ ಜಿಲ್ಲೆಯ ವಿದ್ಯಾರ್ಥಿಗಳು ಪಕ್ಕದ ರಾಯಚೂರು ಇಲ್ಲವೇ ಗುಲ್ಬರ್ಗಕ್ಕೆ ಹೋಗುವುದು ಅನಿವಾರ್ಯವಾಗಿದೆ. ಬಡತನ ಇರುವ ಕುಟುಂಬದ ಮಕ್ಕಳಂತೂ ಅರ್ಧಕ್ಕೆ ಶಿಕ್ಷಣವನ್ನು ಮೊಟಕುಗೊಳಿಸಿ, ಹೊಲದ ಕೆಲಸಕ್ಕೋ ಇಲ್ಲವೇ ಗ್ರಾಮದಲ್ಲಿಯೇ ವ್ಯಾಪಾರ ಆರಂಭಿಸುತ್ತಿದ್ದಾರೆ.

ಜಿಲ್ಲೆಯ ವಿದ್ಯಾರ್ಥಿಗಳಿಗೆ ಸಿಗದ ಪ್ರಯೋಜನ: ಶಹಾಪುರ ತಾಲ್ಲೂಕಿನ ಭೀಮರಾಯನಗುಡಿಯಲ್ಲಿ ಕೃಷಿ ಮಹಾವಿದ್ಯಾಲಯ ಇದೆಯಾದರೂ, ಕೃಷಿಯಲ್ಲಿ ಬಿಎಸ್ಸಿ ಪದವಿಗೆ ಸೇರುವ ಅರ್ಹತೆಯೂ ಜಿಲ್ಲೆಯ ವಿದ್ಯಾರ್ಥಿಗಳಿಗೆ ದೊರೆಯದಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೃಷಿ ಮಹಾವಿದ್ಯಾಲಯವಿದ್ದರೂ, ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳೇ ಅದರ ಪ್ರಯೋಜನ ಪಡೆಯುವಂತಾಗಿದೆ.

ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು, ಕೃಷಿ ಮಹಾವಿದ್ಯಾಲಯದಲ್ಲಿ ಪ್ರವೇಶ ಪಡೆಯಬಹುದು. ಆದರೆ ಸದ್ಯಕ್ಕೆ ಜಿಲ್ಲೆಯಲ್ಲಿನ ವಿಜ್ಞಾನ ಬೋಧಿಸುವ ಪದವಿಪೂರ್ವ ಕಾಲೇಜುಗಳು ದುಸ್ಥಿತಿಯಲ್ಲಿವೆ. ಹೀಗಾಗಿ ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು, ಹೊರಗಿನ ವಿದ್ಯಾರ್ಥಿಗಳ ಜೊತೆಗೆ ಪೈಪೋಟಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಪಾಲಕರು ಹೇಳುತ್ತಿದ್ದಾರೆ.

ಪ್ರಾಯೋಗಿಕ ಶಿಕ್ಷಣ ಬೇರೆ ಕಾಲೇಜಿನ್ಲ್ಲಲಿ: ಜಿಲ್ಲೆಯ ಪದವಿಪೂರ್ವ ಕಾಲೇಜುಗಳಲ್ಲಿ ವಿಜ್ಞಾನದ ಪ್ರಯೋಗಕ್ಕೆ ಬೇಕಾದ ಸಲಕರಣೆಗಳು ಇಲ್ಲದೇ ಇರುವುದರಿಂದ ಈ ಕಾಲೇಜುಗಳ ವಿದ್ಯಾರ್ಥಿಗಳು, ಪ್ರಾಯೋಗಿಕ ಶಿಕ್ಷಣಕ್ಕಾಗಿ ಬೇರೆ ಜಿಲ್ಲೆಯ ಕಾಲೇಜುಗಳಿಗೆ ಹೋಗುವಂತಾಗಿದೆ.

ಶಹಾಪುರ ತಾಲ್ಲೂಕಿನ ಪದವಿಪೂರ್ವ ವಿಜ್ಞಾನ ಕಾಲೇಜುಗಳ ವಿದ್ಯಾರ್ಥಿಗಳು, ಪ್ರಾಯೋಗಿಕ ಶಿಕ್ಷಣಕ್ಕಾಗಿ ಪಕ್ಕದ ಜೇವರ್ಗಿಗೆ ಹೋಗಬೇಕಾಗಿದೆ. ಕಾಲೇಜುಗಳ ಉಪನ್ಯಾಸಕರೂ, ಅಸಹಾಯಕತೆ ವ್ಯಕ್ತಪಡಿಸುತ್ತಿದ್ದು, ಅನ್ಯ ಮಾರ್ಗವಿಲ್ಲದೇ, ವಿದ್ಯಾರ್ಥಿಗಳು ಪ್ರಾಯೋಗಿಕ ಶಿಕ್ಷಣವನ್ನು ಬೇರೆ ಕಾಲೇಜುಗಳಲ್ಲಿ ಪೂರೈಸುವ ದುಸ್ಥಿತಿ ಬಂದಿದೆ ಎಂದು ಜೆಡಿಎಸ್ ಮುಖಂಡ ಶಂಕ್ರಣ್ಣ ವಣಿಕ್ಯಾಳ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಾಗಿ ಎರಡು ವರ್ಷ ಕಳೆದರೂ, ಇಲ್ಲಿನ ವಿದ್ಯಾರ್ಥಿಗಳು ವಿಜ್ಞಾನ ಕಲಿಯದಂತಹ ಸ್ಥಿತಿ ಇದೆ. ಇದರಿಂದಾಗಿ ಜಿಲ್ಲೆಯಲ್ಲಿ ಯಾವುದೇ ಉನ್ನತ ಶಿಕ್ಷಣ ಕೇಂದ್ರಗಳನ್ನು ತೆರೆದರೂ ಅದರ ಪ್ರಯೋಜನ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸಿಗುವುದಿಲ್ಲ. ಕೇವಲ ಇಲ್ಲಿನ ಸಂಪನ್ಮೂಲಗಳನ್ನಷ್ಟೇ ಕೊಟ್ಟು ಕುಳಿತುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ ಎಂಬ ಹೇಳಿಕೆಗಳು ಧಾರಾಳವಾಗಿ ಬರುತ್ತಿವೆ. ಆದರೆ ಶೈಕ್ಷಣಿಕ ರಂಗದ ಅಭಿವೃದ್ಧಿಗೂ ವಿಶೇಷ ಗಮನ ನೀಡಬೇಕು. ಇದೀಗ ಜಿಲ್ಲೆಯವರೇ ಸಚಿವರಾಗಿದ್ದಾರೆ. ಜಿಲ್ಲೆಯ ಪದವಿಪೂರ್ವ ಕಾಲೇಜುಗಳಲ್ಲಿ ವಿಜ್ಞಾನ ಶಿಕ್ಷಣವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ. ದೂರದೃಷ್ಟಿಯನ್ನಿಟ್ಟು ಈ ಬಗ್ಗೆ ಕೂಡಲೇ ಕ್ರಮಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಜೆಡಿಎಸ್ ಪಕ್ಷ ವಿದ್ಯಾರ್ಥಿಗಳೊಂದಿಗೆ ಉಗ್ರ ಸ್ವರೂಪದ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.