ADVERTISEMENT

ಸೇತುವೆ ಕಾಮಗಾರಿ ಕೈಗೊಳ್ಳಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 8:27 IST
Last Updated 12 ಡಿಸೆಂಬರ್ 2013, 8:27 IST

ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ಅನ್ವರ ಗ್ರಾಮದ ಹಳ್ಳ ಹಾಗೂ ತಡಬಿಡಿ ಗ್ರಾಮದ ಕಾಲುವೆಗೆ ನಿರ್ಮಿಸಿರುವ ಸೇತುವೆಗಳು ಶಿಥಿಲ­ಗೊಂಡಿವೆ. ಅವುಗಳ ನಿರ್ಮಾಣ ಕಾಮಗಾರಿಯನ್ನು ಕೂಡಲೇ ಕೈಗೆತ್ತಿ­ಕೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ಹಯ್ಯಾಳ(ಬಿ) ಹೋಬಳಿ ಘಟಕವು, ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಕಾರ್ಯನಿರ್ವಾ­ಹಕ ಎಂಜಿನಿಯರ್‌ಗೆ ಸೋಮವಾರ ಮನವಿ ಸಲ್ಲಿಸಿದೆ.

ಶಹಾಪುರ ತಾಲ್ಲೂಕಿನ ಅನ್ವರ ಗ್ರಾಮದ ಹಳ್ಳಕ್ಕೆ ಕಟ್ಟಿರುವ ಸೇತುವೆಯು ಸುಮಾರು ನೂರು ವರ್ಷ ಹಳೆಯದಾಗಿದೆ. ಈಗ ಅದು ಶಿಥಿಲಾವಸ್ಥೆ ತಲುಪಿದೆ. ಈ ಸೇತುವೆಯ ಮೂಲಕವೇ ಯಾದಗಿರಿ, ಹೈದರಾ­ಬಾದ್‌, ಸುರಪುರಕ್ಕೆ ನಿತ್ಯ ನೂರಾರು ವಾಹನಗಳು ಸಂಚರಿಸು­ತ್ತವೆ. ಸೇತುವೆಯು ಕಿರಿದಾಗಿ­ರುವುದರಿಂದ ವಾಹನಗಳು ಎದು­ರಾದಾಗ ತೀವ್ರ ತೊಂದರೆ ಅನುಭವಿ­ಸುವಂತಾಗಿದೆ.

ತಡಬಿಡಿ ಗ್ರಾಮದ ಅನತಿ ದೂರದಲ್ಲಿ ವಿತರಣಾ ಕಾಲುವೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯು ಶಿಥಿಲಾವಸ್ಥೆ ತಲುಪಿದೆ. ಇದರಿಂದಾಗಿ ಈ ಭಾಗದಲ್ಲಿ ವಾಹನ ಚಾಲಕರು ಜೀವಭಯದಲ್ಲಿ ವಾಹನ ಓಡಿಸು­ವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶೀಘ್ರ ಕಾಮಗಾರಿ ಕೈಗೊಳ್ಳದೇ ಇದ್ದಲ್ಲಿ ಗ್ರಾಮಸ್ಥರ ಜೊತೆಗೂಡಿ ಕಚೇರಿಯ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಕರವೇ ಹೋಬಳಿ ಘಟಕದ ಅಧ್ಯಕ್ಷ ರವಿಕುಮಾರ ದೇವರಮನಿ, ಸಾಬಣ್ಣ ಬಬಲಾದ, ವೆಂಕಟೇಶ, ಶಿವಶಂಕರ, ಕಾಸಿಂಪಟೇಲ್, ಮರಲಿಂಗ, ಕುಮಾರ, ಭೀಮು ಪೂಜಾರಿ, ಶಿವು, ಶೇಖಪ್ಪ, ಸದ್ದಾಂ, ಗೋವಿಂದ, ಹಣಮಂತ, ರಾಮು, ರವಿ ತುಮಕೂರ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.