ADVERTISEMENT

ಸೌಲಭ್ಯವಂಚಿತ ತಾಂಡಾಗಳಿಗೆ ನೆರವು ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2012, 7:50 IST
Last Updated 18 ಆಗಸ್ಟ್ 2012, 7:50 IST
ಸೌಲಭ್ಯವಂಚಿತ ತಾಂಡಾಗಳಿಗೆ ನೆರವು ನೀಡಲು ಆಗ್ರಹ
ಸೌಲಭ್ಯವಂಚಿತ ತಾಂಡಾಗಳಿಗೆ ನೆರವು ನೀಡಲು ಆಗ್ರಹ   

ಶಹಾಪುರ: ಭೀಮರಾಯನಗುಡಿಯಿಂದ ಕೂಗಳತೆಯ ದೂರದಲ್ಲಿರುವ ಹೊತಪೇಟ ಮೇಲಿನ ತಾಂಡಾ, ನಡುವಿನ ತಾಂಡಾ, ದಿಬ್ಬಿತಾಂಡಾ, ಸುಟ್ಟಿ ತಾಂಡಾ ಹೀಗೆ ನಾಲ್ಕು ತಾಂಡಾಗಳು ಹೊತಪೇಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತವೆ. ಇಂದಿಗೂ ಕನಿಷ್ಠ ಸೌಲಭ್ಯಗಳಿಲ್ಲದೆ ಇಲ್ಲಿನ ಜನತೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಗ್ರಾಮ ಘಟಕದ ಮುಖಂಡರಾದ ಅನಿಲಕುಮಾರ ರಾಠೋಡ, ವಿಜಯ ಚವ್ಹಾಣ ಆರೋಪಿಸಿದ್ದಾರೆ.

ನಾಲ್ಕು ತಾಂಡಾಗಳಲ್ಲಿ 1,000 ಜನಸಂಖ್ಯೆಯಿದೆ. ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಮೂರು ತಾಂಡಾಗಳಿಗೆ 1ರಿಂದ 5ನೇ ತರಗತಿ ವರೆಗಿನ ಶಾಲೆಯಿದೆ. ಶಿಕ್ಷಕರು ಮಾತ್ರ ನೆನಪಾದಗೊಮ್ಮೆ ಶಾಲೆಗೆ ಆಗಮಿಸಿ ಹಾಜರಿ ಪುಸ್ತಕಕ್ಕೆ ಸಹಿ ಹಾಕಿ ಮಾಯವಾಗುತ್ತಾರೆ. ಅಲ್ಲಿ ಅಭ್ಯಾಸ ಮಾಡುವ ಮಕ್ಕಳ ಪಾಠದ ಬಗ್ಗೆ ವಿಚಾರ ನಡೆಸಿ ಎಂದು ಗಂಗಾರಾಮ ನಾಯಕ ಹೇಳಿದ್ದಾರೆ.

ತಾಂಡಾಗಳಿಗೆ ಕನಿಷ್ಠ ಪಕ್ಷ ಶುದ್ಧ ಕುಡಿಯುವ ನೀರು ಇಲ್ಲ. ನಿರ್ಮಿಸಲಾದ ಟ್ಯಾಂಕರ್‌ಗಳು ಕಳಪೆ ಮಟ್ಟದಿಂದ ಕೂಡಿವೆ. ಅರೆಬರೆಯಾಗಿ ಪೈಪ್‌ಲೈನ್ ಮಾಡಿ ಅರ್ಧಕ್ಕೆ ಗುಂಡಿ ತೋಡಿ ಹಾಕಿದ್ದಾರೆ. ಕೊಳವೆ ಬಾವಿ ಕೆಟ್ಟಾಗ ದುರಸ್ಥಿ ಕಾರ್ಯಕ್ಕೂ ಮುಂದಾಗುತ್ತಿಲ್ಲ ಇದರಿಂದ ತುಂಬಾ ತೊಂದರೆಯಾಗಿದೆ. ಯಾರು ನಮ್ಮ ಸಮಸ್ಯೆಯ ಬಗ್ಗೆ ಕೇಳುತ್ತಿಲ್ಲವೆಂದು ತಾಂಡಾದ ನಿವಾಸಿಗಳು ದೂರಿದ್ದಾರೆ.

ತಾಂಡಾದಿಂದ ಬೇರೆಡೆ ತೆರಳಲು ಉತ್ತಮ ರಸ್ತೆ ಇಲ್ಲವಾಗಿದೆ. ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಹಾಗೂ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು ಕ್ಯಾರೇ ಅನ್ನುತ್ತಿಲ್ಲ. ಇದರ ಸರಿಯಾದ ರಸ್ತೆ ಹಾಗೂ ಕುಡಿಯುವ ನೀರು ಒದಗಿಸದಿದ್ದರೆ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.