ADVERTISEMENT

ಹಂದಿಗಳ ಹಾವಳಿ ಕಡಿವಾಣಕ್ಕೆ ಆಗ್ರಹ

ಸುರಪುರ: ನಾಗರಿಕ ಹಿತರಕ್ಷಣಾ ಸಮಿತಿಯಿಂದ ಮನವಿ

​ಪ್ರಜಾವಾಣಿ ವಾರ್ತೆ
Published 25 ಮೇ 2018, 4:50 IST
Last Updated 25 ಮೇ 2018, 4:50 IST

ಸುರಪುರ:  ನಿಫಾ ವೈರಸ್, ಚಿಕುನ್‍ಗುನ್ಯಾ ಸೇರಿದಂತೆ ಹಂದಿ ಗಳಿಂದ ಪಸರಿಸುವ ಇತರೆ ಮಾರಕ ರೋಗ ತಡೆಗಟ್ಟಲು ಹಂದಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ನಾಗರಿಕ ಹಿತರಕ್ಷಣಾ ಹೋರಾಟ ಸಮಿತಿ ಕಾರ್ಯಕರ್ತರು ಗುರುವಾರ ನಗರಸಭೆ ಪೌರಾಯುಕ್ತ ದೇವಿಂದ್ರ ಹೆಗಡೆ ಅವರಿಗೆ ಮನವಿ ಸಲ್ಲಿಸಿದರು.

ಮುಖಂಡ ವೇಣುಗೋಪಾಲ ಜೇವರ್ಗಿ ಮಾತನಾಡಿ, ‘ನಗರದಲ್ಲಿ ಹಂದಿಗಳ ಹಾವಳಿ ವ್ಯಾಪಕವಾಗಿದೆ. ಬಸ್ ನಿಲ್ದಾಣ, ತರಕಾರಿ ಮಾರುಕಟ್ಟೆ, ಹಣ್ಣಿನ ಅಂಗಡಿ, ಹೊಟೇಲ ಸೇರಿದಂತೆ ಸಂದಿ, ಗೊಂದಿ, ಗಲ್ಲಿ ಗಲ್ಲಿ ಒಳಗೊಂಡಂತೆ ಎಲ್ಲೆಂದರಲ್ಲಿ ಹಂದಿಗಳು ವಾಸವಾಗಿವೆ. ಮನೆ ಬಾಗಿಲು ತೆಗೆದರೆ ಸಾಕು ಮನೆಯಲ್ಲಿ ನುಗ್ಗಿ ಬಿಡುತ್ತವೆ. ಹಂದಿಗಳ ವೈರಸ್‍ನಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಕಾರಣ ಹಂದಿಗಳನ್ನು ದೂರ ಸಾಗಿಸಬೇಕು’ ಎಂದು ಒತ್ತಾಯಿಸಿದರು.

‘ಈ ಹಿಂದೆ ನಗರದಲ್ಲಿ ಹಂದಿಗಳ ವೈರಸ್‍ಗಳಿಂದಲೆ ಡೆಂಗೆ, ಚಿಕುನ್‍ಗುನ್ಯಾ ರೋಗ ಹರಡಿ ಅನೇಕ ಪ್ರಕರಣಗಳು ಪತ್ತೆಯಾಗಿದ್ದವು. ಈ ರೋಗದಿಂದ ನಗರದ ಜನತೆ ತಲ್ಲಣಗೊಂಡಿತ್ತು. ಈಗ ನಿಫಾ ಎನ್ನುವ ವೈರಸ್ ರೋಗ
ಕೂಡಾ ಹಂದಿಗಳಿಂದಲೆ ಬರುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ರೋಗ ಈಗಾಗಲೆ ಗದಗಿನಲ್ಲಿ ಕಾಣಿಸಿಕೊಂಡಿರುವುದು ನಾಗರಿಕ ವಲಯದಲ್ಲಿ ಆತಂಕ ಸೃಷ್ಠಿಸಿದೆ.  ರೋಗ ಹರಡುವ ಮುನ್ನವೇ ನಗರಸಭೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಹಂದಿಗಳನ್ನು ಜನವಾಸವಿಲ್ಲದೆ ಇರುವ ಪ್ರದೇಶಗಳಿಗೆ ಸಾಗಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ನಗರದ ಎಲ್ಲಡೆ ಹಂದಿಗಳ ಕಾಟ ಹೆಚ್ಚಾಗಿದೆ. ತರಕಾರಿ ಮಾರುಕಟ್ಟೆಯಲ್ಲಿ ತರಕಾರಿಗೆ, ಹಣ್ಣಿನ ಪೊಟ್ಟಣಗಳಿಗೆ ಬಾಯಿ ಹಾಕುತ್ತಿವೆ. ಮಕ್ಕಳನ್ನು ಹಿಡಿದೆಳೆದು ಗಾಯಗೊಳಿಸಿರುವ ಅನೇಕ ಪ್ರಕರಣಗಳು ಜರುಗಿವೆ. ಆದ್ದರಿಂದ ಹಂದಿಗಳ ಮಾಲೀಕರನ್ನು ಕರೆಯಿಸಿ ತಾಕೀತು ಮಾಡಬೇಕು ಅಥವಾ ಅವುಗಳನ್ನು ತ್ವರಿತವಾಗಿ ಹಿಡಿದು ದೂರ ಸಾಗಿಸಲು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಇದೇ 27 ರಂದು ಸಾರ್ವಜನಿಕರೊಂದಿಗೆ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಮಹ್ಮದ್‍ಸಲೀಂ ವರ್ತಿ. ಧರ್ಮರಾಜ ಪಿಳಿಬಂಟ್, ಸುರೇಶ ಮಾಮಡಿ, ರಮೇಶ ಶಹಾಪುರಕರ್, ವಕೀಲರಾದ ಶಿವಾನಂದ ಅವಂಟಿ, ಜಿ.ಆರ್, ಬನ್ನಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.