ADVERTISEMENT

ಹಣ ದುರುಪಯೋಗ: ಗ್ರಾಮಸ್ಥರ ಆರೋಪ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2014, 6:23 IST
Last Updated 15 ಮಾರ್ಚ್ 2014, 6:23 IST

ಹುಣಸಗಿ:  ಗ್ರಾಮೀಣ ಭಾಗದ ಪ್ರಾಥ­ಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿ­ಗಳ ಉತ್ತಮ ಶಿಕ್ಷಣಕ್ಕಾಗಿ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿ, ಶೈಕ್ಷಣಿಕ ಪ್ರಗತಿಗೆ ಪ್ರಯತ್ನಿ­ಸುತ್ತಿದೆ. ಅನುದಾನವನ್ನು ಸಮರ್ಪ­ಕವಾಗಿ ಬಳಸದೇ ಶೌಚಾಲಯದ ಹಣವನ್ನು ಮುಖ್ಯಾಧ್ಯಾಪಕರು  ದುರ್ಬ­ಳಕೆ ಮಾಡಿಕೊಂಡಿದ್ದಾರೆ ಎಂದು ಜೋಗುಂಡಬಾವಿ ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಕುರಿತು ತನಿಖೆ ನಡೆಸಿ ಮುಖ್ಯಾಧ್ಯಾಪಕರನ್ನು ಅಮಾನತು ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಶಾಲಾ ಆವರಣದಲ್ಲಿ ನಿರ್ಮಿ­ಸಿರುವ ಶೌಚಾಲಯವು ಗುಣಮಟ್ಟ­ದ್ದಾಗಿಲ್ಲ. ನಿರ್ವಹಣೆವಿಲ್ಲದೆ ಮುಳ್ಳು­ಕಂಟಿ­ಗಳಿಂದ ಆವೃತ್ತವಾಗಿದೆ. ನೀರಿನ ಸಂಪರ್ಕ ಕಲ್ಪಿಸುವುದಾಗಿ ಬ್ಯಾಂಕ್ ಖಾತೆ­ಯಿಂದ ₨ 20 ಸಾವಿರಕ್ಕೂ ಹೆಚ್ಚು ಹಣ ದುರುಪಯೋಗ ಮಾಡಿಕೊಂಡಿ­ದ್ದಾರೆ ಎಂದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಹುಲಗಪ್ಪ ಗಡ್ಡಿ ಆರೋಪಿಸಿದ್ದಾರೆ. 
ಬಿಸಿಯೂಟದಲ್ಲಿಯೂ ಸಾಕಷ್ಟು ಅಕ್ರಮ ಎಸಗಿದ್ದಾರೆ. ಈ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಗ್ರಾಮದ ಮುಖಂಡ ಹಣಮಂತ ಗುರಿಕಾರ ಒತ್ತಾಯಿಸಿದ್ದಾರೆ.

ಪ್ರಾಥಮಿಕ ಹಾಗೂ ಪ್ರೌಢಶಾಲೆ­ಗಳ ಅಭಿವೃದ್ಧಿಗಾಗಿ ಶಿಕ್ಷಣ ಇಲಾಖೆ ಹಾಗೂ ಆರ್.ಎಂ.ಎಸ್. ಯೋಜನೆ ಮೂಲಕ ಲಕ್ಷಾಂತರ ಅನುದಾನದ ದುರ್ಬಳಕೆಯಾಗಿದೆ ಎಂದು ಗುಂಡು ಹುಡೇದ ಆರೋಪಿಸಿದ್ದಾರೆ.

ಶಿಕ್ಷಣ ಇಲಾಖೆಯ ಆಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಶಾಲೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಶರಣು ಪೂಜಾರಿ, ಸಂಗಯ್ಯ ಗರಸಂಗಿ, ಸಾಯಬಣ್ಣ ಮಾಮನಿ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.