ADVERTISEMENT

ಹಾಳುಬಿದ್ದ ಕೆಬಿಜೆಎನ್‌ಎಲ್ ವಸತಿ ಗೃಹಗಳು

ನಿರ್ವಹಣೆ ಇಲ್ಲದೆ ಅಕ್ರಮ ಚಟುವಟಿಕೆಗಳ ತಾಣವಾದ ಕಟ್ಟಡಗಳು

ನರಸಿಂಹ ಮೂರ್ತಿ ಕುಲಕರ್ಣಿ
Published 28 ಅಕ್ಟೋಬರ್ 2016, 5:56 IST
Last Updated 28 ಅಕ್ಟೋಬರ್ 2016, 5:56 IST
ಶಹಾಪುರ ತಾಲ್ಲೂಕಿನ ದೋರನಳ್ಳಿ ಗ್ರಾಮದ ಬಳಿ ಕೃಷ್ಣಾ ಜಲಭಾಗ್ಯ ನಿಗಮದ ಸಿಬ್ಬಂದಿಗೆ ನಿರ್ಮಿಸಿರುವ ವಸತಿ ಗೃಹಗಳು ಹಾಳು ಬಿದ್ದಿರುವುದು
ಶಹಾಪುರ ತಾಲ್ಲೂಕಿನ ದೋರನಳ್ಳಿ ಗ್ರಾಮದ ಬಳಿ ಕೃಷ್ಣಾ ಜಲಭಾಗ್ಯ ನಿಗಮದ ಸಿಬ್ಬಂದಿಗೆ ನಿರ್ಮಿಸಿರುವ ವಸತಿ ಗೃಹಗಳು ಹಾಳು ಬಿದ್ದಿರುವುದು   

ಯಾದಗಿರಿ: ಶಹಾಪುರ ತಾಲ್ಲೂಕಿನ ದೋರನ ಹಳ್ಳಿಯಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ  ಕೆಬಿಜೆಎನ್ಎಲ್ ವಸತಿ ನಿಲಯಗಳು ಸೂಕ್ತ ನಿರ್ವಹಣೆಯಿಲ್ಲದೆ ಹಾಳು ಬಿದ್ದಿವೆ. ಪಾಳು ಬಿದ್ದ ಈ ಕಟ್ಟಡಗಳನ್ನು ಪುಂಡ ಪೋಕರಿಗಳು ಅಕ್ರಮ ಚಟುವಟಿಕೆ ನಡೆಸುವ ತಾಣವನ್ನಾಗಿಸಿಕೊಂಡಿದ್ದಾರೆ.

ಕಳೆದ ಹಲವು ವರ್ಷಗಳ ಹಿಂದ  ಕೃಷ್ಣಾ ಜಲಭಾಗ್ಯ ನಿಗಮದ ಸಿಬ್ಬಂದಿಗಾಗಿ ದೋರನಹಳ್ಳಿಯಲ್ಲಿ ನೂರಕ್ಕೂ ಹೆಚ್ಚು ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ, ಕಾರಣಾಂತರಗಳಿಂದ  ಕೆಲವರು ಅಲ್ಲಿ ವಾಸ ಮಾಡಿದರೆ, ಉಳಿದ ಸಿಬ್ಬಂದಿಗಳ್ಯಾರು ವಾಸ ಮಾಡುತ್ತಿಲ್ಲ.

ಯಾರೂ ವಾಸವಿಲ್ಲದ  ವಸತಿ ನಿಲಯಗಳ ಬಾಗಿಲು, ಕಿಟಕಿ ಸೇರಿದಂತೆ ಕಟ್ಟಡದ ಕೆಲ ಸಾಮಾಗ್ರಿಗಳನ್ನು ಕಳ್ಳತನ ಮಾಡಲಾಗಿದೆ.  ಇಲ್ಲಿ ಎನು ಮಾಡಿದರೂ ಯಾರು ಪ್ರಶ್ನಿಸುವವರಿಲ್ಲ ಎನ್ನುವ ಕಾರಣಕ್ಕೆ ಕೆಲವರು ಇದನ್ನು ಅನೈತಿಕ ಚಟುವಟಿಕೆಗಳ ಅಡ್ಡೆಯಾಗಿ ಮಾರ್ಪಾಡು ಮಾಡಿಕೊಂಡಿದ್ದಾರೆ ಎನ್ನುತ್ತಾರೆ ದೋರನ ಹಳ್ಳಿಯ ಸೋಮಶೇಖರ್.

ವಾಸ ಮತ್ತು ನಿರ್ವಹಣೆ ಇಲ್ಲದ ಕಾರಣ ಕೆಲ ವಸತಿ ಗೃಹ  ಗೋಡೆಗಳು ಬಿರುಕು ಬಿಟ್ಟರೆ, ಇನ್ನೂ ಕೆಲವು ಗೋಡೆಗಳು ಕುಸಿದು ಬಿದ್ದಿವೆ.  ಕಟ್ಟಡಗಳ ಸುತ್ತಲು ಗಿಡಗಂಟೆಗಳು ಬೆಳದಿರು­ವುದರಿಂದ ಇಲ್ಲಿಗೆ ಹೋಗಲು ಸೂಕ್ತ ಮಾರ್ಗವು ಇಲ್ಲದಂತಾಗಿದೆ. ಹೀಗಾಗಿ ಲಕ್ಷಾಂತರ ರೂಪಾಯಿ  ವೆಚ್ಚದಲ್ಲಿ ನಿರ್ಮಾಣ ಮಾಡಿದ  ವಸತಿ ಗೃಹಗಳು ಹಾಳುಬಿದ್ದಿವೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾತ್ರ ಇತ್ತ ಕಡೆ ಗಮನ ಹರಿಸುತ್ತಿಲ್ಲ. ಇದಕ್ಕೆ ಕಾರಣ ಸರ್ಕಾರದಿಂದ ಹಲವು ವರ್ಷಗಳಿಂದ ನಿರ್ವಹಣಾ ವೆಚ್ಚ ಬಂದಿಲ್ಲ ಎನ್ನುವುದಾಗಿದೆ.

ಜೂಜಾಟದ ಅಡ್ಡೆ: ನಿರ್ಜನ ಪ್ರದೇಶವಾ­ಗಿರುವುದರಿಂದ ಕೆಲವು ಕಟ್ಟಡಗಳ ಹಿಂಭಾಗದಲ್ಲಿ ಪ್ರತಿನಿತ್ಯ ಇಲ್ಲಿ ಜೂಜಾಟ­ವಾಡುವುದನ್ನು ಕೆಲವರು ಅಭ್ಯಾಸ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ವಸತಿ ಗೃಹಗಳನ್ನು ಶೌಚಾಲಯಕ್ಕೆ ಬಳಸುತ್ತಿದ್ದು, ಇಲ್ಲಿಯ ವಾತಾವರಣ ಸಂಪೂರ್ಣವಾಗಿ ಕಲುಷಿತ­ಗೊಂಡಿದೆ.  ಇಷ್ಟೆಲ್ಲ ಅವಾಂತರ ನಡೆಯುತ್ತಿದ್ದರೂ, ಕೆಬಿಜೆಎನ್ಎಲ್ ಅಧಿಕಾರಿಗಳು ಮಾತ್ರ ತಮಗೆ  ಸಂಬಂಧವಿಲ್ಲ ಎನ್ನುವಂತೆ ಇದ್ದಾರೆ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ. 

ಜಿಲ್ಲೆಯಲ್ಲಿ ಸರ್ಕಾರಿ ನೌಕರರಿಗೆ ವಸತಿಗಳ ಕೊರತೆ ಹಿನ್ನೆಲೆಯಲ್ಲಿ ಅದೆಷ್ಟೋ ಜನರು ಕಲಬುರ್ಗಿ ಮತ್ತು ರಾಯಚೂರಿನಲ್ಲಿ ಮನೆ ಮಾಡಿಕೊಂಡು ಯಾದಗಿರಿ ಮತ್ತು ಶಹಾಪುರಗಳಿಗೆ ಕೆಲಸಕ್ಕೆ ಬರುತ್ತಾರೆ. ಆದರೆ, ಇಲ್ಲಿ ಕಟ್ಟಡಗಳಿದ್ದರೂ, ಅವುಗಳ ಸಮರ್ಪಕ ಬಳಕೆ ಮತ್ತು ನಿರ್ವಹಣೆ ಇಲ್ಲದೇ  ಹಾಳಾಗುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಹೆಸರು ಹೆಳಲಿಚ್ಚಿಸದ ಸರ್ಕಾರಿ ನೌಕರರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು. 
ನಿರ್ವಹಣೆ ಮಾಡದಿದ್ದಲ್ಲಿ ಈ ಜಾಗ ಒತ್ತುವರಿ­ಯಾಗುವ ಅಪಾಯ ಇದೆ. ಹೀಗಾಗಿ ಅಧಿಕಾರಿಗಳು ಎಚ್ಚತ್ತು­ಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

*
ವಸತಿ ನಿಲಯಗಳು ನಿರ್ವಹಣೆಯಿಲ್ಲದೆ ಪುಂಡಪೋಕರಿಗಳ ಅಕ್ರಮ ಚಟುವಟಿಕೆಗಳ ತಾಣವಾಗಿವೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು
–ಚಂದ್ರಶೇಖರ,
ದೋರನಹಳ್ಳಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT