ADVERTISEMENT

‘ಹಿಂದುಳಿದವರ ಅಭಿವೃದ್ಧಿಗೆ ಕಾಂಗ್ರೆಸ್ ಬದ್ಧ’

​ಪ್ರಜಾವಾಣಿ ವಾರ್ತೆ
Published 4 ಮೇ 2018, 12:49 IST
Last Updated 4 ಮೇ 2018, 12:49 IST

ಯಾದಗಿರಿ: ‘ಬಡವರ, ದಲಿತರ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಕಾಂಗ್ರೆಸ್ ಎಂದಿಗೂ ಬದ್ಧತೆಯಿಂದ ನಡೆದುಕೊಂಡು ಬಂದಿದೆ’ ಎಂದು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಗನಾಥ ಜಮದಾರ್ ಅಭಿಪ್ರಾಯಪಟ್ಟರು.

ಸಮೀಪದ ಸೈದಾಪುರನಲ್ಲಿ ಹಿಂದುಳಿದ ಸಮಾಜಗಳ ಸಭೆಯಲ್ಲಿ ಭಾಗವಹಿಸಿ ಅವರು ಕಾಂಗ್ರೆಸ್ ಪರ ಪ್ರಚಾರ ಮಾಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಅನ್ನಭಾಗ್ಯ, ಕ್ಷೀರ ಭಾಗ್ಯ ಸೇರಿದಂತೆ ಬಡವರ ಪರವಾದ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕ ತರುವುದರ ಮೂಲಕ ಹಿಂದುಳಿದ ವರ್ಗದವರ ಪರವಾಗಿ ಆಡಳಿತ ನೀಡಿದೆ’ ಎಂದು ಹೇಳಿದರು.

ADVERTISEMENT

‘ಗುರುಮಠಕಲ್ ಕ್ಷೇತ್ರದ ಶಾಸಕ ಬಾಬುರಾವ್ ಚಿಂಚನಸೂರ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿ ನಡೆಸಿದ್ದಾರೆ. ಕೆರೆ ತುಂಬಿಸುವ ಬೃಹತ್‌ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ. ಕೆರೆತುಂಬಿಸುವ ಯೋಜನೆ ಪೂರ್ಣಗೊಳ್ಳಬೇಕು ಎಂದರೆ ಅವರಿಗೆ ಈ ಚುನಾವಣೆಯಲ್ಲಿ ಆಯ್ಕೆ ಮಾಡಬೇಕು’ ಎಂದರು.

ಜಿಲ್ಲಾ ಕೋಲಿ ಸಮಾಜದ ಜಿಲ್ಲಾ ಅಧ್ಯಕ್ಷ ಉಮೇಶ ಮುದ್ನಾಳ ಮಾತನಾಡಿ,‘ಜಿಲ್ಲೆಯಲ್ಲಿ ಕಬ್ಬಲಿಗ ಸಮುದಾಯ ತೀರಾ ಹಿಂದುಳಿದಿದೆ. ಮುಖ್ಯವಾಗಿ ಶೈಕ್ಷಣಿಕ ಅಭಿವೃದ್ಧಿ ಇಲ್ಲದಾಗಿದೆ. ಚಿಂಚನಸೂರ ಅವರು ಸಮುದಾಯದ ನಿಷ್ಠಾವಂತ ವ್ಯಕ್ತಿಯಾಗಿದ್ದು, ಅವರನ್ನು ಗೆಲ್ಲಿಸುವ ಮೂಲಕ ಸಮಾಜದ ಧ್ವನಿಯಾಗುವಂತೆ ಉಳಿಸಿಕೊಳ್ಳಬೇಕಿದೆ’ ಎಂದು ಸಲಹೆ ನೀಡಿದರು.

ಕೋಲಿ ಸಮಾಜದ ಮುಖಂಡ ಹಣಮಂತ ವಡವಟ್, ಸಮಾಜದ ಅಧ್ಯಕ್ಷ ತಾಯಪ್ಪ ಚಿಗರಿ, ಶರಣಪ್ಪ ಬೈರಂಕೊಂಡಿ, ಶರಣಪ್ಪ ಬಾಗ್ಲಿ, ಸಾಬಣ್ಣ ಬಾಗ್ಲಿ, ಅಂಜನೇಯ ಕಾವಲಿ, ಪ್ರಭು ಗೂಗಲ್, ಶ್ರೀಶೈಲ ಬಾಗ್ಲಿ, ಸುಭಾಷ ಹೆಗ್ಗಣಗೇರ, ಬನ್ನಪ್ಪ ಬೈರಂಕೊಂಡಿ, ಶರಣಮ್ಮ ವಡವಟ್, ಸುಭದ್ರ ಕಾವಲಿ, ಸರಜನಮ್ಮ ಗಡದ್, ವಿಶ್ವನಾಥ ಬಳಿಚಕ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.