ADVERTISEMENT

ಹುಬ್ಬಳ್ಳಿ ಎಂಟರಪ್ರೈಸೆಸ್ ಡಬಲ್ ಟಿನ್ ನಂಬರ ಬಿಲ್ ಪತ್ತೆ!

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 9:25 IST
Last Updated 14 ಅಕ್ಟೋಬರ್ 2011, 9:25 IST

ಶಹಾಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 67 ಲಕ್ಷ ಮೌಲ್ಯದ ಸಾಮಗ್ರಿ ಖರೀದಿ ಹಗರಣಕ್ಕೆ ಸಂಬಂಧಿಸಿಂತೆ ಶಹಾಪುರ ಪಟ್ಟಣದ ದೇವಿನಗರ ಬಡಾವಣೆಯ ವಿಳಾಸ ನಮೂದಿಸಿರುವ ಹುಬ್ಬಳ್ಳಿ ಎಂಟರಪ್ರೈಸೆಸ್ ಹಾಗೂ ಪುಸ್ತಕ ಮಳಿಗೆಯಲ್ಲಿ ರೂ. 22.5ಲಕ್ಷ ಮೌಲ್ಯದ ಸಾಮಗ್ರಿ ಖರೀದಿಸಲಾಗಿದೆ.

ವಿಚಿತ್ರವೆಂದರೆ ಡಬಲ್ ಟಿನ್ ನಂಬರಿನ ಬಿಲ್ ಪತ್ತೆಯಾಗಿದೆ. ಇದರ ಬಗ್ಗೆ ವಾಣಿಜ್ಯ ತೆರಿಗೆ ಕಚೇರಿಗೆ ತೆರಳಿ ಪರಿಶೀಲಿಸಿದಾಗ ಗೋಲ್‌ಮಾಲ್ ಹೂರಣ ಹೆಚ್ಚು ಪುಷ್ಠಿ ನೀಡುತ್ತಲಿದೆ ಎಂದು ತಿಳಿದು ಬಂದಿದೆ. ಈ ಕುರಿತು ತನಿಖೆ ನಡೆಯಬೇಕಾಗಿದೆ.

2011 ಫೆಬ್ರವರಿ 12ರಂದು ಡುಯೇಲ್ ಡೆಸ್ಕ್ ಖರೀದಿಸಲಾಗಿದ್ದು ಅವುಗಳ ಒಟ್ಟು ಮೌಲ್ಯ 99,096 ರೂಪಾಯಿ. ಬಿಲ್ ನಂಬರ 121. ಅಲ್ಲದೆ ಒಟ್ಟು ಏಳು ಆಲ್‌ಮಾರ ಕೊಂಡುಕೊಳ್ಳಲಾಗಿದ್ದು ಮೊತ್ತ 99,400 ರೂಪಾಯಿ ಬಿಲ್ ನಂಬರ 122 ಇದೆ. ಇವೆರಡರ ಖರೀದಿ ರಸೀದಿಯಲ್ಲಿ  ಟಿನ್ ನಂಬರ 28610514347 ಇದೆ. ಆದರೆ ಉಳಿದ ಸಾಮಗ್ರಿಯನ್ನು ಇದೇ ಮಳಿಗೆಯಲ್ಲಿ  ಖರೀದಿಸಲಾಗಿದ್ದು ನೀಡಲಾದ ರಸೀದಿಯಲ್ಲಿ ಟಿನ್ ನಂಬರ  29460828624 ನಮೂದಿಸಲಾಗಿದೆ.

ಇದರಲ್ಲಿ ಅಸಲಿ ಅಥವಾ ನಕಲಿ ಯಾವುದು ಎಂದು ವಿಚಾರಿಸಿದಾಗ (29460828624) ಹುಬ್ಬಳ್ಳಿ ಎಂಟರಪ್ರೈಸೆಸ್ ಮಾಲೀಕನ ಹೆಸರು ವಿಳಾಸವಿದೆ. ಆದರೆ ಇನ್ನೊಂದರ ವಿಳಾಸವಿಲ್ಲ, ಇದರ ಬಗ್ಗೆ ಪರಿಶೀಲಸಬೇಕಾಗುತ್ತದೆ. ಯಾವುದೇ ಮಳಿಗೆ ಕೇಂದ್ರಕ್ಕೆ ಒಂದೇ ಟಿನ್ ನಂಬರ ನೀಡುವುದು ನಿಯಮ.

ಒಂದೇ ಮಳಿಗೆಗೆ ಎರಡು ಟಿನ್ ನಂಬರ ಇರಲು ಸಾಧ್ಯವಿಲ್ಲ. ಅಲ್ಲದೆ 2010ರಿಂದ ಇಂದಿಗೂ ವಾಣಿಜ್ಯ ತೆರಿಗೆಯನ್ನು ಪಾವತಿಸಿಲ್ಲವೆಂದು ವಾಣಿಜ್ಯ ತೆರಿಗೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ತಾಲ್ಲೂಕು ಸಿಪಿಐ(ಎಂ) ಕಾರ್ಯದರ್ಶಿ ದಾವಲಸಾಬ್ ನದಾಫ್ ದೂರಿದ್ದಾರೆ.

ಇದರ ಬಗ್ಗೆ ಜನತೆಗೆ ತಪ್ಪು ಮಾಹಿತಿ ನೀಡುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರ ವಿರುದ್ದ ಸಮಗ್ರ ತನಿಖೆ ನಡೆಸಿದಾಗ ಸತ್ಯಾಂಶ ಹೊರ ಬರುತ್ತದೆ.  ಮಾಹಿತಿ ಹಕ್ಕು ಕಾಯ್ದೆ ಅಡಿ ಪ್ರಾಚಾರ್ಯರೇ ನೀಡಿದ ಸಮಗ್ರ ದಾಖಲೆಗಳ ಸಮೇತ ಯಾದಗಿರಿ ಜಿಲ್ಲಾ ಲೋಕಾಯುಕ್ತರಿಗೆ  ದೂರು ಸಲ್ಲಿಸಲಾಗುವುದು.

ಶಹಾಪುರ ಪಟ್ಟಣದ ದೇವಿನಗರದ ಬಡಾವಣೆಯಲ್ಲಿ ಇರುವ ಸಾರ್ವಜನಿಕರನ್ನು ವಂಚಿಸುತ್ತಿರುವ ಹುಬ್ಬಳ್ಳಿ ಎಂಟರಪ್ರೈಸೆಸ್ ಮಳಿಗೆ ವಿರುದ್ದ ಸಹ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದೆಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.