ADVERTISEMENT

‘ಗರಡಿ ಮನೆಗೆ ರೂ. 10 ಲಕ್ಷ ಅನುದಾನ’

ಸುರಪುರ: ದಸರಾ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 7:13 IST
Last Updated 14 ಸೆಪ್ಟೆಂಬರ್ 2013, 7:13 IST

ಸುರಪುರ: ಸುರಪುರ ಸಂಸ್ಥಾನ ಕುಸ್ತಿ ಪಂದ್ಯಗಳಿಗೆ ವಿಶೇಷ ಆದ್ಯತೆ ನೀಡಿತ್ತು. ಇಲ್ಲಿ ಅಂತರರಾಷ್ಟ್ರೀಯ ಮಟ್ಟದ ಜಟ್ಟಿಗಳು ಇದ್ದರು. ಈ ಹಿನ್ನೆಲೆಯಲ್ಲಿ ಕುಸ್ತಿಯನ್ನು ಉತ್ತೇಜಿಸುವ ಸಲುವಾಗಿ ಸಂಘ, ಸಂಸ್ಥೆಗಳ, ಮುಖಂಡರು ಮುಂದೆ ಬಂದು ಸ್ಥಳಾವಕಾಶ ಒದಗಿಸಿದಲ್ಲಿ ತಮ್ಮ ಇಲಾಖೆಯಿಂದ ರೂ. ಹತ್ತು ಲಕ್ಷ ಅನುದಾನವನ್ನು ಒದಗಿಸುವುದಾಗಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸೂಗಪ್ಪ ಪಾಟೀಲ ಭರವಸೆ ನೀಡಿದರು.

ಇಲ್ಲಿನ ಪ್ರಭು ಕಾಲೇಜು ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನಾ ಸಮಾ­ರಂಭದಲ್ಲಿ ಮಾತನಾಡಿದರು.

ಸುರಪುರದಲ್ಲಿ ತಾಲ್ಲೂಕು ಕ್ರೀಡಾಂಗಣ ಇಲ್ಲ. ಈ ಬಗ್ಗೆ ಶಾಸಕ ರಾಜಾ ವೆಂಕಟಪ್ಪನಾಯಕ ಅವ­ರೊಂದಿಗೆ ಚರ್ಚಿಸಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ತಾಲ್ಲೂಕು ಕ್ರೀಂಡಾಗಣ ನಿರ್ಮಾಣಕ್ಕೆ ತಮ್ಮ ಇಲಾಖೆಯಿಂದ ಎಲ್ಲ ಸಹಕಾರ ನೀಡುವುದಾಗಿ ತಿಳಿಸಿದರು.

ಮೊದಲು ನಮ್ಮ ರಾಜ್ಯದ ರಾಜಧಾನಿ ಮೈಸೂರು ಆಗಿತ್ತು. ಮೈಸೂರು ಅರಸರ ಕಾಲದಲ್ಲಿ ದಸರಾ ಉತ್ಸವದಲ್ಲಿ ಕ್ರೀಡೆಗಳು ಆದ್ಧೂರಿಯಾಗಿ ನಡೆಯುತ್ತಿದ್ದವು. ಇದನ್ನು ರಾಜ್ಯ ಸರ್ಕಾರ ಮುಂದುವರೆಸಿಕೊಂಡು ಬರುತ್ತಿದೆ. ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಪಂದ್ಯಾಟಗಳು ನಡೆಯುತ್ತವೆ. ರಾಜ್ಯ ಮಟ್ಟವನ್ನು ಪ್ರತಿನಿಧಿಸುವ ಕಿ್ರೀಡಾಪಟುಗಳನ್ನು ಪ್ರೋತ್ಸಾಹಿಸಲಾಗುತ್ತದೆ ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ಪ್ರೋ. ವೇಣುಗೋಪಾಲ ಜೇವರ್ಗಿ ಮಾತನಾಡಿ, ಈಚೆಗೆ ಕ್ರೀಡೆಗಳು ಸೊರಗುತ್ತಿವೆ. ಇವತ್ತು ನಡೆಯುತ್ತಿರುವ ಪಂದ್ಯಗಳಲ್ಲಿ ಭಾಗವಹಿಸಲು ಹೆಚ್ಚಿನ ಕ್ರೀಡಾ­ಪಟುಗಳು ಆಗಮಿಸದಿರುವುದು ವಿಷಾದ. ಹಿಂದೆ ಕಾಲೇಜು ಮೈದಾನ ತುಂಬಿ ತುಳುಕುತ್ತಿತ್ತು.  ಕ್ರೀಡೆಗಳನ್ನು ಉತ್ತೇಜಿಸುವ ಕೆಲಸವನ್ನು ಮಾಡ­ಬೇಕಿದೆ. ತಾಲ್ಲೂಕು ಕ್ರೀಡಾಂಗಣ ಶೀಘ್ರದಲ್ಲಿ ನಿರ್ಮಾಣ ಆಗಬೇಕು. ಇಲ್ಲಿನ ಶ್ರೀದೇವಿ ಮತ್ತು ಮಲ್ಲಮ್ಮ ಮಾತ್ರ ರಾಷ್ಟ್ರೀಯ ತಂಡಗಳನ್ನು ಪ್ರತಿನಿಧಿಸಿದ್ದು ಬಿಟ್ಟರೆ ಉಳಿದವರಿಂದ ಸಾಧನೆ ಬಂದಿಲ್ಲ  ಎಂದು ವಿಷಾದಿಸಿದರು.

ಎಪಿಎಂಸಿ ಸದಸ್ಯ ರಾಜಾ ಮೌನೇಶ್ವರನಾಯಕ ಕ್ರೀಡಾಜ್ಯೋತಿ ಸ್ವೀಕರಿಸುವ ಮೂಲಕ ಕ್ರೀಡಾಕೂಟ ಉದ್ಘಾಟಿಸಿದರು. ಪುರಸಭೆ ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ಪಾಟೀಲ, ಸಣ್ಣದೇಸಾಯಿ, ಸೋಮನಾಥ ಡೊಣ್ಣಿಗೇರಿ, ಲಾಡ್ಲೆ ಪಟೇಲ, ವೆಂಕಟೇಶ ಕುಲಕರ್ಣಿ ಉಪಸ್ಥಿತರಿದ್ದರು.

ಚಂದ್ರಶೇಖರ ಶಹಾಪುರಕರ ಸ್ವಾಗತಿಸಿದರು. ಜೋಗಪ್ಪ ಕ್ರೀಡಾ ಪ್ರಮಾಣ ವಚನ ಬೋಧಿಸಿದರು. ಶರಣಗೌಡ ಮಾಲಗತ್ತಿ ನಿರೂಪಿ­ಸಿದರು. ಭೀಮರಾಯ ಯಕ್ತಾಪುರ ವಂದಿಸಿದರು.

ನಿಂಗಣ್ಣ ಪುಜಾರಿ, ಮಹೇಶ ಜಾಗೀರದಾರ, ರಮೇಶ ಶಹಾಪುರಕರ, ಸತ್ಯನಾರಾಯಣ ದರಬಾರಿ, ಭೀಮರಾಯ ಹುಣಸಿಹೊಳೆ, ನಜೀರ ನಾಯಕ, ಮಲ್ಹಾರಿ, ಸುಭಾಷ, ಗುರುರಾಜ, ಶ್ರೀಶೈಲ ನಿರ್ಣಾಯಕ­ರಾಗಿದ್ದರು.

ಕಬಡ್ಡಿ, ಕೊಕ್ಕೊ, ವಾಲಿಬಾಲ್, ಷಟಲ್ ಬ್ಯಾಡ್ಮಿಂಟನ್, ಅಥ್ಲಿಟೆಕ್ಸ್ ಪಂದ್ಯಗಳು ನಡೆದವು. ವಿವಿಧ ಗ್ರಾಮಗಳ 20 ಕ್ಕೂ ಹೆಚ್ಚು ತಂಡಗಳು, 100ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.

ಪಟ್ಟಣದ ಮಹರ್ಷಿ ವಾಲ್ಮೀಕಿ ಸಂಘ ಕ್ರೀಡಾಕೂಟದ ವ್ಯವಸ್ಥೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.