ಹುಣಸಗಿ: ಸಮೀಪದ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಗೆ ನೀರು ಸ್ಥಗಿತಗೊಳಿಸುವ ಹಿನ್ನೆಲೆಯಲ್ಲಿ ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಗುರುವಾರ ಬಸವ ಸಾಗರ ಜಲಾಶಯಕ್ಕೆ ಭೇಟಿ ನೀಡಿ ನೀರು ಹರಿವಿನ ಪ್ರಮಾಣವನ್ನು ವೀಕ್ಷಿಸಿದರು.
ನಂತರ ಸ್ಥಳದಲ್ಲಿಯೇ ಹಾಜರಿದ್ದ ನಿಗಮದ ಅಧೀಕ್ಷಕ ಎಂಜಿನಿಯರ್ ಡಿ.ಆರ್.ಕೃಷ್ಣಮೂರ್ತಿ ಅವರೊಂದಿಗೆ ಮಾತನಾಡಿದ ಶಾಸಕ ರಾಜಾ ವೆಂಕಟಪ್ಪ ನಾಯಕ, ಎಡದಂಡೆ ಕಾಲುವೆಯ ಗೇಟ್ ಬಳಿ ನೀರಿನ ಹರಿವಿನ ಪ್ರಮಾಣವಿದ್ದರೂ, ಕಾಲುವೆಗೆ ನೀರು ಸ್ಥಗಿತಗೊಳಿಸುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು. ಅಲ್ಲದೇ ಕಾಲುವೆಗೆ ನೀರು ಸ್ಥಗಿತಗೊಳಿಸಿದಲ್ಲಿ ಕೋಟ್ಯಂತರ ಮೌಲ್ಯದ ಬೆಳೆ ಹಾನಿಯಾಗಲಿದೆ ಎಂದು ತಿಳಿಸಿದರು.
ಯಾವುದೇ ಕಾರಣಕ್ಕೂ ಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಬಾರದು ಎಂದು ಆಗ್ರಹಿಸಿದರು.
ಡಿ.ಆರ್.ಕೃಷ್ಣಮೂರ್ತಿ ಮಾತನಾಡಿ, ಜಲಾಶಯದಲ್ಲಿ ಕೇವಲ 2.33 ಟಿಎಂಸಿ ನೀರಿನ ಸಂಗ್ರಹವಿದೆ. ಈಗಾಗಲೇ ನೀರಾವರಿಗಾಗಿ ನಿಗದಿಪಡಿಸಿದ ಎಲ್ಲ ನೀರನ್ನು ಬಳಕೆ ಮಾಡಿಕೊಳ್ಳಲಾಗಿದೆ. ಇನ್ನುಳಿದ ನೀರು ಇಳಕಲ್ಲ, ಹುನಗುಂದ, ಕುಷ್ಟಗಿ, ಮುದ್ದೇಬಿಹಾಳ ಸೇರಿದಂತೆ 40 ಗ್ರಾಮಗಳಿಗೆ ಕುಡಿಯಲು ನೀರು ಒದಗಿಸುವ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಾಲುವೆಗೆ ನೀರು ಹರಿಸುವುದು ಅಸಾಧ್ಯ ಎಂದು ಸ್ಪಷ್ಟಪಡಿಸಿದರು.
ಜಲಾಶಯದ ವಿಭಾಗೀಯ ಕಾರ್ಯ ನಿರ್ವಾಹಕ ಎಂಜಿನಿಯರ್ ಎಸ್.ರಂಗಾರಾಂ, ಜಲಾಶಯದಲ್ಲಿನ ನೀರಿನ ಲಭ್ಯತೆ ಕುರಿತು ಮಾಹಿತಿ ನೀಡಿದರು.
ಗುರುವಾರ ಬೆಳಿಗ್ಗೆ ಕಾಲುವೆಯಲ್ಲಿ ನೀರಿನ ಹರಿವಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿತ್ತು. ಇದನ್ನು ಗಮನಿಸಿ ಶಾಸಕ ಆರ್.ವಿ.ನಾಯಕ, ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿ ಎಂದು ಆಗ್ರಹಿಸಿದ್ದರ ಹಿನ್ನೆಲೆಯಲ್ಲಿ ಕಾಲುವೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಯಿತು. ಶಾಸಕರು, ಅಧಿಕಾರಿಗಳು ಮತ್ತು ಮುಖಂಡರೊಂದಿಗೆ ಜಲಾಶಯದ ಹಿನ್ನೀರಿನ ವ್ಯಾಪ್ತಿಯಲ್ಲಿ ಅಳವಡಿಸಲಾದ ಕುಡಿವ ನೀರಿನ ಪಂಪ್‌ಹೌಸ್ ವೀಕ್ಷಿಸಿದರು.
ನಂತರ ನಾರಾಯಣಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಆರ್.ವಿ.ನಾಯಕ, ಯಾವುದೇ ಕಾರಣಕ್ಕೂ ಕಾಲುವೆಗೆ ನೀರು ಸ್ಥಗಿತಗೊಳಿಸಲು ಬಿಡುವುದಿಲ್ಲ. ಹಾಗೇನಾದರೂ ಕಂಡು ಬಂದಲ್ಲಿ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದರು.
ಜಲಾಶಯದ ಮುಖ್ಯ ದ್ವಾರದ ಬಳಿ ಹುಣಸಗಿ ಸರ್ಕಲ್ ಇನ್‌ಸ್ಪೆಕ್ಟರ್ ವಿಜಯ ಮುರಗುಂಡಿ, ಸುರಪುರ ಸರ್ಕಲ್ ಇನ್‌ಸ್ಪೆಕ್ಟರ್ ಅಸ್ಲಂ ಪಾಷಾ, ಸಬ್ ಇನ್‌ಸ್ಪೆಕ್ಟರ್‌ಗಳಾದ ಸುನೀಲ್ ಮೂಲಿಮನಿ, ಗುರುಶಾಂತ ದಾಶ್ಯಾಳ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.
ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರಗೌಡ ವಜ್ಜಲ, ಮುಖಂಡರಾದ ಸೂಲಪ್ಪ ಕಮತಗಿ, ಯಂಕೋಬ ಯಾದವ, ಪ್ರಭುಗೌಡ ಪಾಟೀಲ, ಶಾಂತಪ್ಪ ಮೇಸ್ತಕ, ನಾಗರಾಜ ಜೋಗೂರ, ಅಲ್ಲಾಭಕ್ಷ, ಅಮರಣ್ಣ ಕುಂಬಾರ, ನಿಸಾರ್, ರಮೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.