ADVERTISEMENT

‘ಹೈ.ಕ. ನೇಮಕಾತಿ ಪ್ರಕ್ರಿಯೆ ಶೀಘ್ರ’

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 10:10 IST
Last Updated 6 ಡಿಸೆಂಬರ್ 2013, 10:10 IST

ಯಾದಗಿರಿ: ಸಂವಿಧಾನದ 371 ಜೆ  ವಿಧಿ ತಿದ್ದುಪಡಿ ನಂತರ ಮಾರ್ಗಸೂಚಿ ಸೂತ್ರಗಳನ್ನು ತಕ್ಷಣವೇ ರೂಪಿಸಿ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಾ. ಎ.ಬಿ. ಮಾಲಕರಡ್ಡಿ ವಿಧಾನಸಭೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿ­ವೇಶ­ನ­ದಲ್ಲಿ ಗುರುವಾರ ಮುಖ್ಯ­ಮಂತ್ರಿ­ಗಳ ಗಮನ ಸೆಳೆಯುವ ಸೂಚನೆ ಮಂಡಿಸಿ ಮಾತನಾಡಿದ ಅವರು, ಈ ಪ್ರದೇಶದ ಜಿಲ್ಲೆಗಳಿಗೆ, ಹಳೇ ಮೈಸೂರು ಭಾಗದ ಅಧಿಕಾರಿಗಳು ಹಾಗೂ ನೌಕರರು ಕೆಲಸ ಮಾಡಲು ಇಚ್ಛಿಸುವುದಿಲ್ಲ, ಬಂದವರು ಹಾಗೆಯೇ ವರ್ಗಾವಣೆ ಮೂಲಕ ಹೊರಟು ಹೋಗುತ್ತಾರೆ. ಹಾಗಾಗಿ ನಮ್ಮ ಭಾಗದಲ್ಲಿ ನೌಕರರ ಕೊರತೆ ಹೆಚ್ಚಾಗಿದ್ದು, ತಕ್ಷಣವೇ ನೇಮಕಾತಿ ಪ್ರಕ್ರಿಯೆ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದರು.

ಡಾ. ಮಾಲಕರಡ್ಡಿಯವರ ಗಮನ ಸೆಳೆಯುವ ಸೂಚನೆಗೆ ಬುಧವಾರ ರಾತ್ರಿ ಉತ್ತರ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಾದೇಶಿಕ ಅಸಮತೋಲನ ನೀಗಿಸುವ ದೃಷ್ಟಿಯಿಂದ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದ್ದು, ಕೆಲವೇ ದಿನಗಳಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ನೇಮಕಾತಿಗೆ ಅನುವು ಮಾಡಲಾಗು­ವುದು ಎಂದು ಭರವಸೆ ನೀಡಿದ್ದಾರೆ.

ಕಾರ್ಯನಿಮಿತ್ತ ಹೊರ ಹೋದ ಮುಖ್ಯಮಂತ್ರಿಗಳ ಪರವಾಗಿ ಉತ್ತರ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ಹೈದರಾಬಾದ್‌ ಕರ್ನಾಟಕ ಪ್ರದೇಶ­ದಲ್ಲಿ ಪ್ರಾದೇಶಿಕ ಅಭಿವೃದ್ಧಿ ಸಾಧಿಸುವಲ್ಲಿ ಸಮರ್ಥ ಸಿಬ್ಬಂದಿ ಕೊರತೆ ಇದ್ದು, ರಾಜ್ಯ ಸರ್ಕಾರಕ್ಕೆ ಇದೊಂದು ಸವಾಲಾಗಿದೆ ಎಂದು ಹೇಳಿದರು. 

ತಿದ್ದುಪಡಿ ನಿಯಮಗಳನ್ವಯ ಈ ಭಾಗದ ಅಭಿವೃದ್ಧಿ ಮತ್ತು ಪ್ರದೇಶದ ಸ್ಥಳೀಯರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡ­ಬೇಕಾಗಿದೆ. ಈ ಭಾಗಕ್ಕೆ ಇದರಲ್ಲಿ ಮೀಸಲಾತಿ ನೀಡಬೇಕೆಂಬ ದೃಷ್ಟಿ­ಯಿಂದ ರಾಜ್ಯದ ಎಲ್ಲ ಸರ್ಕಾರಿ ಇಲಾಖೆ, ನಿಗಮ, ಮಂಡಳಿ, ವಿಶ್ವವಿದ್ಯಾನಿಲಯಗಳಲ್ಲಿನ ಎಲ್ಲ ವರ್ಗಗಳ ಹುದ್ದೆಗಳ ಭರ್ತಿ ಪ್ರಕ್ರಿಯೆಗಳನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ. ಈಗ ಮೀಸಲಾತಿ ಪ್ರಮಾಣ ನಿಗದಿ ಮಾಡಲಾಗಿದ್ದು, ಇನ್ನು ನೇಮಕಾತಿಗೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಪ್ರತಿ ತಿಂಗಳೂ ಸಾಕಷ್ಟು ಸಿಬ್ಬಂದಿ ನಿವೃತ್ತರಾಗುತ್ತಿದ್ದು, ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿದೆ. ಎಷ್ಟು ದಿನಗಳಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಸದನಕ್ಕೆ ಉತ್ತರ ನೀಡಬೇಕು ಎಂದು ಡಾ. ಮಾಲಕರಡ್ಡಿ ಪಟ್ಟು ಹಿಡಿದರು.

ಯಾದಗಿರಿ ಜಿಲ್ಲೆಯ ಕೇವಲ ಮೂರು ತಾಲ್ಲೂಕುಗಳಲ್ಲಿ 1800 ಹುದ್ದೆಗಳು ಖಾಲಿ ಇವೆ. ಹೀಗಾದರೆ ಸಾರ್ವಜನಿಕ ಕೆಲಸಗಳು ಆಗುವುದು ಹೇಗೆ ಎಂದು ಪ್ರಶ್ನಿಸಿದರು.

ನೇಮಕಾತಿ ಪ್ರಕ್ರಿಯೆ ಆರಂಭವಾದರೆ ಅರ್ಜಿ ಆಹ್ವಾನಿಸಿ, ನೇಮಕಾತಿ ಆದೇಶ ನೀಡಲು ಕನಿಷ್ಠ 10 ತಿಂಗಳಾದರೂ ಬೇಕಾಗುತ್ತದೆ. ಹಾಗಾಗಿ ತಕ್ಷಣವೇ ನೇಮಕಾತಿ ಪ್ರಕ್ರಿಯೆ ಕೈಗೆತ್ತಿಕೊಳ್ಳಬೇಕು ಎಂದು ಮಾಲಕರಡ್ಡಿ ಆಗ್ರಹಿಸಿದರು.

ಸರ್ಕಾರ ಸ್ಪಷ್ಟ ಉತ್ತರ ನೀಡದಿದ್ದಾಗ, ಸಭಾಧ್ಯಕ್ಷರ ಪೀಠದಲ್ಲಿದ್ದ ಉಪಸಭಾಧ್ಯಕ್ಷ ಎನ್.ಎಚ್. ಶಿವಶಂಕರರಡ್ಡಿ, ಸದಸ್ಯ ಮಾಲಕ್ಪರಡ್ಡಿಯವರ ಕಳಕಳಿಯನ್ನು ಸರ್ಕಾರ ಅರ್ಥ ಮಾಡಿಕೊಂಡು ಸೂಕ್ತ ಉತ್ತರ ನೀಡಬೇಕು ಎಂದು ಸೂಚಿಸಿದರು. ಇದಕ್ಕೆ ಸ್ಪಂದಿಸಿದ ಸಚಿವ ಜಯಚಂದ್ರ, ಇನ್ನು ಮೂರು ತಿಂಗಳೊಳಗಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಮುಖ್ಯ­ಮಂತ್ರಿಗಳ ಪರವಾಗಿ ಉತ್ತರಿಸಿದರು.

ಆದೇಶದ ಉಪಬಂಧ 3ರನ್ವಯ ಅದೇಶ ರೂಪಣೆಯಾದಾಗಿನಿಂದ 3 ತಿಂಗಳೊಳಗೆ ರಾಜ್ಯ ಸರ್ಕಾರದ ಅಡಿಯಲ್ಲಿ ಹೈದರಾಬಾದ್‌ ಕರ್ನಾಟಕ ಪ್ರದೇಶದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳು ಹಾಗೂ ಸಿವಿಲ್ ಹುದ್ದೆಗಳು ಇಲ್ಲವೇ ರಾಜ್ಯ ಸರ್ಕಾರದ ನಿಯಂತ್ರಣದ ಅಡಿಯಲ್ಲಿನ ಹುದ್ದೆ­ಗಳನ್ನು, ಹಾಗೆಯೇ ರಾಜ್ಯಮಟ್ಟದ ಕಚೇರಿಗಳಲ್ಲಿನ ಹುದ್ದೆಗಳನ್ನು ಗುರುತಿಸಿ ಸ್ಥಳೀಯ ವೃಂದವನ್ನು ರಚಿಸಿ, ಅಧಿಸೂಚನೆ ಹೊರಡಿಸಬೇಕಾಗಿದೆ ಎಂದು ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ನಮ್ಮ ಭಾಗದಲ್ಲಿ ಕೆಲಸ ಮಾಡಲು ನಮ್ಮ ಭಾಗದ ಸಿಬ್ಬಂದಿಗೆ ಅವಕಾಶವಾದರೆ, ಅವರು ಉತ್ಸಾಹ­ದಿಂದ ಕೆಲಸ ಮಾಡುವುದರಿಂದ ತಕ್ಷಣವೇ ನಿಯಮಗಳನ್ನು ರೂಪಿಸಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಮಾಲಕರಡ್ಡಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.