ADVERTISEMENT

ಶಹಾಪುರ | 180 ಶಿಕ್ಷಕರಿಗೆ ಇನ್ನೂ ಬಾರದ ವೇತನ: ಪರದಾಟ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 16:06 IST
Last Updated 9 ಮಾರ್ಚ್ 2024, 16:06 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಶಹಾಪುರ: ಸರ್ವ ಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ 180 ಶಿಕ್ಷಕರು ಐದು ತಿಂಗಳಿಂದ ವೇತನವಿಲ್ಲದೆ ಪರದಾಡುತ್ತಿದ್ದಾರೆ. ಶಿವರಾತ್ರಿ ಹಬ್ಬ ನಮ್ಮ ಪಾಲಿಗೆ ಹಸಿದ ಹೊಟ್ಟೆಯಿಂದ ಜಾಗರಣೆ ಮಾಡುವಂತೆ ಆಗಿದೆ ಎಂದು ಶಿಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.

ವೇತನ ಬಾರದ ಕಾರಣ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಬಿಇಒ ಕಚೇರಿಯ ಮುಂದೆ ಧರಣಿ ನಡೆಸಲು ಮುಂದಾಗಿದ್ದರು. ಆಗ ಸಿಇಒ ಅವರು ಮಧ್ಯ ಪ್ರವೇಶಿಸಿ ಎರಡು ದಿನದಲ್ಲಿ ಸಮಸ್ಯೆ ಬಗೆಹರಿಸಿ ವೇತನ ನೀಡಲಾಗುವುದು ಎಂಬ ಭರವಸೆ ಮೇಲೆ ಧರಣಿ ಹಿಂಪಡೆದಿದ್ದರು.

ADVERTISEMENT

ವಡಗೇರಾ ತಾಲ್ಲೂಕು ರಚನೆಯಾಗಿದ್ದರೂ ಇನ್ನೂ ಶಹಾಪುರ ತಾಲ್ಲೂಕಿನಿಂದ ಶಿಕ್ಷಣ ಇಲಾಖೆಯು ಪ್ರತ್ಯೇಕಗೊಂಡಿಲ್ಲ. ವಡಗೇರಾ ಮತ್ತು ಶಹಾಪುರ ತಾಲ್ಲೂಕಿನ ಸರ್ವ ಶಿಕ್ಷಣ ಅಭಿಯಾನದ ಯೋಜನೆ ಅಡಿಯಲ್ಲಿರುವ ಶಿಕ್ಷಕರು ಪ್ರತಿ ತಿಂಗಳು ಶಹಾಪುರ ತಾಲ್ಲೂಕು ಪಂಚಾಯಿತಿ ಮೂಲಕ ವೇತನ ಪಡೆದುಕೊಳ್ಳುತ್ತಿದ್ದರು. ಆದರೆ ಐದು ತಿಂಗಳ ಹಿಂದೆ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ವಡಗೇರಾ ತಾಲ್ಲೂಕು ಪಂಚಾಯಿತಿ ಇಲಾಖೆಯ ಕೋಡ್‌ಗೆ ಅನುದಾನ ವರ್ಗಾವಣೆ ಮಾಡಿದ್ದರಿಂದ ವೇತನ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಶಿಕ್ಷಕರು ಹತಾಶೆ ವ್ಯಕ್ತಪಡಿಸಿದರು.

ಐದು ತಿಂಗಳಿಂದ ವೇತನ ಬಾರದ ಕಾರಣ ದಸರಾ, ದೀಪಾವಳಿ ಹಾಗೂ ಶಿವರಾತ್ರಿ ಹಬ್ಬವನ್ನು ನಮ್ಮ ಕುಟುಂಬದ ಸದಸ್ಯರು ಆಚರಿಸದಂತೆ ಆಗಿದೆ. ಮಕ್ಕಳ ವಿದ್ಯಾಭ್ಯಾಸದ ಫೀ, ಮನೆ ಬಾಡಿಗೆ, ಔಷಧಿ ವೆಚ್ಚ ಹೀಗೆ ಸಾಲು ಸಾಲು ಸಮಸ್ಯೆಗಳು ನಮ್ಮನ್ನು ಬೆಂಬತ್ತಿವೆ. ಹಲವರು ತಿಂಗಳಿಂದ ನಮ್ಮ ವೇತನ ನಾಳೆ ಎಂಬ ಭರವಸೆಯಲ್ಲಿಯೇ ಐದು ತಿಂಗಳು ಕಾಲ ಕಳೆದುಕೊಂಡು ಬಂದಿದ್ದೇವೆ ಎಂದು ವೇತನ ವಂಚಿತ ಶಿಕ್ಷಕರು ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.