ADVERTISEMENT

ಮಳೆ, ಪ್ರವಾಹ ಹಾನಿಯಿಂದ 2,470 ಹೆಕ್ಟೇರ್ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 16:55 IST
Last Updated 15 ಅಕ್ಟೋಬರ್ 2020, 16:55 IST
ಡಾ. ರಾಗಪ್ರಿಯಾ
ಡಾ. ರಾಗಪ್ರಿಯಾ   

ಯಾದಗಿರಿ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಭಾರಿ ಮಳೆಯಿಂದ ಸಂಭವಿಸಿದ ಹಾನಿ ಹಾಗೂ ಹಾನಿ ನಿರ್ವಹಣೆಗೆ ಕೈಗೊಂಡ ಕ್ರಮಗಳ ಕುರಿತು ಸಮಗ್ರ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್., ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮನೆ ಹಾನಿ, ಜೀವಹಾನಿಗೆ ಕೃಷಿ, ತೋಟಗಾರಿಕೆ, ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್‌ ರಾಜ್ ಎಂಜಿನಿಯರಿಂಗ್ ವಿಭಾಗದ ಕಾಮಗಾರಿಗಳಿಗೆ ಹಾನಿ ಸಂಭವಿಸಿದ ಕುರಿತು ನಡೆದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಅಂದಾಜು 2,163.82 ಹೆಕ್ಟೇರ್ ಹಾಗೂ ಪ್ರವಾಹದಿಂದ ಅಂದಾಜು 307 ಹೆಕ್ಟೇರ್ ಸೇರಿ ಅಂದಾಜು ಒಟ್ಟು 2470.82 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

ಜಿಲ್ಲೆಯಲ್ಲಿ 609 ಮನೆಗಳು ಹಾನಿಯಾಗಿದ್ದು, ಇದರಲ್ಲಿ ಯಾದಗಿರಿ ತಾಲ್ಲೂಕಿನಲ್ಲಿ 237, ಶಹಾಪುರ ತಾಲ್ಲೂಕಿನಲ್ಲಿ 27, ಗುರುಮಠಕಲ್‍ನಲ್ಲಿ 23, ವಡಗೇರಾದಲ್ಲಿ 44, ಹುಣಸಗಿಯಲ್ಲಿ 253 ಮನೆಗಳು ಹಾನಿಯಾಗಿವೆ. ಸುರಪುರ ತಾಲ್ಲೂಕಿನಲ್ಲಿ 25 ಕುರಿಗಳು ಸಾವನಪ್ಪಿವೆ ಎಂದು ಉಪವಿಭಾಗಾಧಿಕಾರಿ ಶಂಕರಗೌಡ ಎಸ್ ಸೋಮನಾಳ ಮಾಹಿತಿ ನೀಡಿದರು.

ಬ್ರೀಜ್ ಕಂ ಬ್ಯಾರೇಜ್‍ಗೆ ನೋಡಲ್ ಅಧಿಕಾರಿಗಳು ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಕೃಷ್ಣಾ ನದಿಗೆ ಸುಮಾರು 2.5ಲಕ್ಷ ಕ್ಯುಸೆಕ್ ನೀರು ಹರಿದು ಬಂದರೆ ಕೊಳ್ಳೂರು ಬ್ರಿಜ್ ಮುಳುಗಡೆಯಾಗುತ್ತದೆ. ಹೀಗಾಗಿ ನದಿ ಪಾತ್ರದ ಜನರು ಎಚ್ಚರ ವಹಿಸುವಂತೆ ತಿಳಿಸಿದರು.

ಜಿಲ್ಲೆಯ ಹಲವು ಗ್ರಾಮಗಳಲ್ಲಿ ಭಾರೀ ಮಳೆಯಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿದ ಬಗ್ಗೆ ಮಾಹಿತಿ ಇದ್ದು, ಅಂಥ ಮನೆಗಳ ಜನರನ್ನು ಗಂಜಿ ಕೇಂದ್ರ ಹಾಗೂ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಿ, ಪರಿಹಾರ ಧನವನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ರಸ್ತೆಗಳು ಹಾಗೂ ಸೇತುವೆಗಳು ಹಾನಿಯಾಗಿದ್ದು, ಅವುಗಳನ್ನು ಶೀಘ್ರವಾಗಿ ದುರಸ್ತಿ ಕಾರ್ಯ ಚುರುಕುಗೊಳಿಸಿ, ಹಾನಿಯ ಸಂಭವಿಸಿದ ಕುರಿತು ಅಂದಾಜು ಪಟ್ಟಿ ಸಿದ್ಧಪಡಿಸಿ ಕಳುಹಿಸುವಂತೆ ಲೋಕೋಪಯೋಗಿ ಹಾಗೂ ಪಂಚಾಯತ್ ರಾಜ್ ಎಂಜಿನಿ ಯರಿಂಗ್ ವಿಭಾಗದ ಅಧಿಕಾರಿಗಳಿಗೆ ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಲೋಕೋಪಯೋಗಿ ಕಾರ್ಯಪಾಲಕ ಎಂಜಿನಿಯರ್ ದೇವಿದಾಸ ಚವ್ಹಾಣ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿ ಯರ್ ಶಂಕರ ರುಬಿಕರ, ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಅಧಿಕಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.