ಶಹಾಪುರ: ನಗರದ ದಿಗ್ಗಿಬೇಸ್ ನಲ್ಲಿರುವ ದಿಗ್ಗಿ ಅಗಸಿ(ಕೋಟೆ) ಮೂರು ವರ್ಷದ ಹಿಂದೆ ಮಳೆಯಿಂದ ಹಾನಿಯಾಗಿ ಕೋಟೆಯ ಕೆಲ ಭಾಗದ ಕಲ್ಲುಗಳು ನೆಲಕ್ಕೆ ಉರುಳಿದ್ದವು. ಪ್ರವಾಸೋದ್ಯಮ ಇಲಾಖೆಯಿಂದ ₹98ಲಕ್ಷ ವೆಚ್ಚದಲ್ಲಿ ಪ್ರಾಚ್ಯವಸ್ತು ಇಲಾಖೆಯ ಆಶ್ರಯದಲ್ಲಿ ಕೋಟೆಯ ಮೂಲ ಸ್ವರೂಪ ಧಕ್ಕೆ ಆಗದಂತೆ ನಿರ್ಮಿಸುವುದರ ಮೂಲಕ ಕೋಟೆಗೆ ಮರು ಜೀವ ಬಂದಿದೆ.
ಎರಡು ವರ್ಷದ ಹಿಂದೆ ಪ್ರವಾಸೋದ್ಯಮ ಸಚಿವ ಎಚ್.ಎಕೆ ಪಾಟೀಲ ಶಹಾಪುರ ನಗರಕ್ಕೆ ಆಗಮಿಸಿದಾಗ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಖುದ್ದಾಗಿ ಕೋಟೆ ಸ್ಥಳಕ್ಕೆ ಕರೆದುಕೊಂಡು ಹೋಗಿ ಕೋಟೆ ದುರಸ್ತಿಗೆ ಅನುದಾನ ಬಿಡುಗಡೆಗೆ ಮನವಿ ಮಾಡಿದ್ದರು. ಕೊನೆಗೆ ಕೋಟೆ ದುರಸ್ತಿಗೆ ₹98ಲಕ್ಷ ಅನುದಾನ ಬಿಡುಗಡೆಗೊಂಡು ಕೆಲಸ ಆರಂಭಗೊಂಡಿತು.
ಮತ್ತೆ ಕೋಟೆಯು ಈಗ ನಳನಳಿಸುತ್ತಿದೆ ಎಂಬ ಖುಷಿಯನ್ನು ಇತಿಹಾಸ ಆಸಕ್ತರು ವ್ಯಕ್ತಪಡಿಸಿದರು.
ಕೋಟೆಯ ಇತಿಹಾಸ: ಸುರಪುರ ಸಂಸ್ಥಾನದ ರಾಜಾ ಪಾಮನಾಯಕ (1674-1693) ಅವಧಿಯಲ್ಲಿ ನಿರ್ಮಿಸಿದ ಕೋಟೆ ಇದಾಗಿದೆ. 1680 ಫೆಬ್ರವರಿ 20 ಹಾಗೂ 21 ರಂದು ಹಿಂದೂ ಸಾಮ್ರಾಟನಾಗಬೇಕು ಎಂಬ ಕನಸು ಹೊತ್ತ ಔರಂಗಜೇಬನ ಸೇನಾಧಿಪತಿ ಸರದಾಪರ ದಿಲೇರಖಾನ್ ಶಹಾಪುರ ಕೋಣೆಯ ಮೇಲೆ ಅಕ್ರಮಣ ಮಾಡಿದ. ದಿಲೇರಖಾನ್ ಆನೆ ಮೇಲೆ ಕುಳಿತು ತೋಪಿನಿಂದ ಕೋಟೆಯನ್ನು (ದಿಗ್ಗಿ ಅಗಸಿ) ಒಡೆಯುವಂತೆ ಸೈನಿಕರಿಗೆ ಅಪ್ಪಣೆ ನೀಡಿದ. ಮೊಘಲರ ಸೈನ್ಯದ ಹೊಡೆತಕ್ಕೆ ಕೋಟೆಯ ಬಾಗಲು ಮುರಿತು ಬಿದ್ದಿತು.
ಬೆಟ್ಟದ ಬದಿಯಲ್ಲಿ ಅಡಗಿಕುಳಿತ್ತಿದ್ದ ಬೇಡರ ಪಡೆಯು ಮೊಘಲರ ಸೈನ್ಯದ ಮೇಲೆ ಗುಂಡಿನ ದಾಳಿ ಮಾಡಿತು. ಪ್ರತಿದಾಳಿಗೆ ಬೆದರಿದ ಮೊಘಲರ ಸೈನ್ಯದ ಮನೋಬಲ ಕುಗ್ಗಿ ಹೋಗಿತ್ತು. ಇಂತಹ ರೋಚಕ ಇತಿಹಾಸವನ್ನು ಹೊಂದಿರುವ ಕೋಟೆಯು ಇಂದಿಗೂ ಇತಿಹಾಸದ ಕುರುಹುವಿನ ಸಾಕ್ಷಿಪ್ರಜ್ಞೆಯಾಗಿ ಉಳಿದುಕೊಂಡಿದೆ. ಅದನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಜೀರ್ಣೋದ್ದಾರ ಮಾಡುವ ಮೂಲಕ ಗತವೈಭವ ನೆನಪಿನಲ್ಲಿ ಉಳಿಯುವಂತೆ ಮಾಡಿದ್ದಾರೆ ಎನ್ನುತ್ತಾರೆ ನಗರದ ಜನತೆ.
‘ಮಾಹಿತಿ ಫಲಕ ಅಳವಡಿಸಿ’: ಪ್ರಾಚ್ಯವಸ್ತು ಇಲಾಖೆಯು ಕೋಟೆಗೆ ಹೊಂದಿಕೊಂಡ ಸ್ಥಳದಲ್ಲಿ ಕೋಟೆಯ ಇತಿಹಾಸದ ಬಗ್ಗೆ ಮಾಹಿತಿಯ ನಾಮಫಲಕ ಅಳವಡಿಸಬೇಕು. ಸ್ಥಾಪನೆಯ ಕಾಲ ರಾಜರ ಅವಧಿ ಹಾಗೂ ಇನ್ನಿತರ ಮಹತ್ವದ ದಾಖಲೆಗಳನ್ನು ನಮೂದಿಸಬೇಕು. ಅಲ್ಲದೆ ಕೋಟೆಯ ಎದುರಗಡೆ ರಾತ್ರಿ ಸಮಯಲ್ಲಿ ಎದ್ದು ಕಾಣುವಂತೆ ದೀಪಾಲಂಕಾರ ಮಾಡಬೇಕು ಎಂದು ಇತಿಹಾಸ ಆಸಕ್ತರಾದ ಉಮೇಶರಾವ ಮುಡಬೂಳ ಜಿಲ್ಲಾ ಪ್ರವಾಸೋದ್ಯಮಕ್ಕೆ ಮನವಿ ಮಾಡಿದ್ದಾರೆ.
ಸುರಪುರ ಸಂಸ್ಥಾನದ ಇತಿಹಾಸದ ಹೆಜ್ಜೆಗುರುತಿನ ಕೋಟೆ ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ (ದಿಗ್ಗಿ ಅಗಸಿ) ಉಳಿಸಿಕೊಳ್ಳಲು ಪ್ರವಾಸೋದ್ಯಮ ಇಲಾಖೆಯಿಂದ ದಿಗ್ಗಿ ಅಗಸಿಯನ್ನು ₹98ಲಕ್ಷ ವೆಚ್ಚದಲ್ಲಿ ಜೀರ್ಣೋದ್ದಾರ ಮಾಡಿದೆ. ಅದರ ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿಡಬೇಕು
-ಶರಣಬಸಪ್ಪ ದರ್ಶನಾಪುರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.