ADVERTISEMENT

ಈ ಸಲವೂ ಭಕ್ತರಿಗೆ ದೂಳಿನ ಮಜ್ಜನ

ಮಲ್ಲೇಶ್ ನಾಯಕನಹಟ್ಟಿ
Published 6 ಜನವರಿ 2018, 6:30 IST
Last Updated 6 ಜನವರಿ 2018, 6:30 IST
ಸ್ವಚ್ಛಗೊಳ್ಳದ ಮೈಲಾಪುರದ ಹೊನ್ನಕೆರೆಯ ನೋಟ
ಸ್ವಚ್ಛಗೊಳ್ಳದ ಮೈಲಾಪುರದ ಹೊನ್ನಕೆರೆಯ ನೋಟ   

ಯಾದಗಿರಿ: ಕಳೆದ ಬಾರಿ ದೂಳಿ ನಲ್ಲಿಯೇ ಮೈಲಾರಲಿಂಗನ ಜಾತ್ರಾ ಮಹೋತ್ಸವ ಆಚರಿಸಿದ್ದ ಭಕ್ತರು ದೂಳಿನಿಂದ ಬೇಸತ್ತು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕಿದ್ದರು. ಆಗ ಜಿಲ್ಲಾಧಿಕಾರಿಯಾಗಿದ್ದ ಖುಷ್ಬು ಗೋಯೆಲ್‌ ಚೌಧರಿ ಮುಂದಿನ ಜಾತ್ರೆಗೂ ಮುಂಚೆ ರಸ್ತೆಗೆ ಡಾಂಬರೀಕರಣ ನಡೆಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಈಗ ಮಲ್ಲಯ್ಯನ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ನಡೆದಿದೆ. ಆದರೆ, ರಸ್ತೆ ಮಾತ್ರ ಡಾಂಬರೀಕರಣಗೊಂಡಿಲ್ಲ. ದೂಳಿನ ಮಜ್ಜನ ಈ ಬಾರಿಯೂ ಭಕ್ತರಿಗೆ ತಪ್ಪಿದ್ದಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಹೈದರಾಬಾದ್‌ ಕರ್ನಾಟಕದ ಪ್ರಸಿದ್ಧ ಮೈಲಾರಲಿಂಗಸ್ವಾಮಿ ಜಾತ್ರಾ ಮಹೋತ್ಸವಕ್ಕೆ ತೆಲಂಗಾಣ, ಸೀಮಾಂಧ್ರ, ಮಹಾರಾಷ್ಟ್ರದಿಂದ ಭಕ್ತರು ಬರುತ್ತಾರೆ. ಜಾತ್ರೆಯಲ್ಲಿ ಅಂದಾಜು ಮೂರು ಲಕ್ಷ ಜನರು ಭಾಗವಹಿಸುತ್ತಾರೆ. ಭಕ್ತರಿಗೆ ನಿರ್ಮಿಸಿರುವ ಶೌಚಾಲಗಳು ಶಿಥಿಲ ಗೊಂಡಿದ್ದು, ಸ್ವಚ್ಛತೆ ಕಾಪಾಡಿಲ್ಲ. ಭಕ್ತರು ಗಂಗಾಸ್ನಾನ ಮಾಡುವ ಹೊನ್ನಕೆರೆಯನ್ನೂ ಕೂಡ ಸ್ವಚ್ಛ ಗೊಳಿಸಿಲ್ಲ. ಮೈಲಾಪುರದ ಚರಂಡಿಗಳು ತುಂಬಿವೆ. ಅದನ್ನೂ ಸ್ವಚ್ಛಗೊಳಿಸಿಲ್ಲ’ ಎಂದು ಗ್ರಾಮಸ್ಥರು ದೂರುತ್ತಾರೆ.

‘ಜಾತ್ರೆ ಬಂತೆಂದರೆ ಭಕ್ತರಿಗೆ ಯಾವ ಸಮಸ್ಯೆ ಉದ್ಭವಿಸುತ್ತದೆ ಎಂಬುದಾಗಿ ಅಧಿಕಾರಿಗಳಿಗೆ ಗೊತ್ತಿದೆ. ಆದರೂ ಜಾತ್ರೆ ಇನ್ನೆರಡು ವಾರ ಇರುವಂತೆ ಪೂರ್ವಸಿದ್ಧತೆಗೆ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಮುಂದಾಗುವುದಿಲ್ಲ. ಜಾತ್ರೆಯಲ್ಲಿ ಉಂಟಾಗುವ ಸಮಸ್ಯೆ ನಿವಾರಣೆಗೆ ಬಗ್ಗೆ ಊರಿನ ಮುಖಂಡರ ಸಲಹೆ ಪಡೆಯುವುದಿಲ್ಲ. ಕನಿಷ್ಠ ಗ್ರಾಮಸ್ಥರ ಸಭೆ ನಡೆಸಿ ಜಾತ್ರೆ ಯಶಸ್ವಿಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸುವುದಿಲ್ಲ. ಹೀಗಾಗಿ, ಪ್ರತಿ ಜಾತ್ರೆ ಸಂದರ್ಭಲ್ಲಿ ಸಮಸ್ಯೆಗಳು ಮರಳುತ್ತವೆ. ಜನರು ಸಂಕಷ್ಟ ಅನುಭವಿಸಿ ಹೋಗುತ್ತಾರೆ’ ಎಂದು ಊರಿನ ಯುವಕ ಶಿವಾನಂದ ಬೇಸರ ವ್ಯಕ್ತಪಡಿಸಿದರು.

ADVERTISEMENT

ಜಾತ್ರೆ ಮುಗಿದ ಮೇಲೆ: ಮೈಲಾಪುರ ಜಾತ್ರೆ ಬುಡಕಟ್ಟು ಪರಂಪರೆಯ ಪ್ರತೀಕವಾಗಿ ಆಚರಣೆಗೊಳ್ಳುವುದರಿಂದ ಹೆಚ್ಚು ಭಕ್ತರು ಸೇರುತ್ತಾರೆ. ಆದರೆ, ಭಕ್ತರೊಂದಿಗೆ ಜಾತ್ರೆಯ ಸಂಭ್ರಮ ಅನುಭವಿಸುವ ಸ್ಥಳೀಯರು ನಂತರ ನರಕವನ್ನು ಅನುಭವಿಸುವಂತಾಗುತ್ತದೆ. ಶೌಚಾಲಯ ಕೊರತೆಯಿಂದಾಗಿ ಭಕ್ತರು ಇಡೀ ಊರಲ್ಲಿ ಗಲೀಜು ಮಾಡಿರುತ್ತಾರೆ. ನಂತರ ದುರ್ವಾಸನೆಯನ್ನು ಸ್ಥಳೀಯರು ಸೇವಿಸಿ ಆರೋಗ್ಯ ಹಾಳುಮಾಡಿಕೊಳ್ಳುವಂತಹ ಸ್ಥಿತಿ ತಲೆದೋರುತ್ತದೆ. ಭಕ್ತರಿಗೆ ಸಮರ್ಪಕ ಶೌಚಾಲಯ ಹಾಗೂ ನೀರು ಪೂರೈಕೆ ಮಾಡಿದರೆ ಇಂಥಾ ಸ್ಥಿತಿ ಉಂಟಾಗುವುದಿಲ್ಲ. ಆದರೆ, ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯ ಪ್ರತಿವರ್ಷ ಮುಂದುವರಿಯುತ್ತದೆ ಎಂದು ಕಾಯಿ ವ್ಯಾಪಾರಿ ವೆಂಟಕೇಶ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಸ್ವಚ್ಛಗೊಳ್ಳದ ಮೈಲಾರಪ್ಪನ ಬೆಟ್ಟ

ಮೈಲಾರಲಿಂಗಸ್ವಾಮಿ ನೆಲೆ ಗೊಂಡಿರುವ ಬೆಟ್ಟ ಈ ಬಾರಿಯೂ ಸ್ವಚ್ಛಗೊಂಡಿಲ್ಲ. ಅಲ್ಲೂ ಸಹ ಭಕ್ತರು ಉಳಿದುಕೊಂಡು ಜಾತ್ರಾ ಮಹೋತ್ಸವ ಆಚರಿಸುವಂತಹ ಸೌಕರ್ಯಗಳನ್ನು ಕಲ್ಪಿಸಿಲ್ಲ. ಪ್ರಧಾನ ದೇವರ ಗರ್ಭಗುಡಿ ಎದುರಿಗೆ ಹಾಕಿರುವ ತ್ಯಾಜ್ಯವನ್ನೂ ತೆರವುಗೊಳಿಸಿಲ್ಲ. ಇದರಿಂದ ಬೆಟ್ಟದಲ್ಲಿರುವ ದೇಗುಲ ಸುತ್ತಮುತ್ತಲೂ ದುರ್ನಾತ ಬೀರುತ್ತಿದೆ. ರಸ್ತೆ ವಿಸ್ತರಣೆ ಕೂಡ ಈ ಬಾರಿ ನನೆಗುದಿಗೆ ಬಿದ್ದಿದೆ. ಕಿಷ್ಕಿಂಧೆಯಂತಿರುವ ಪ್ರಮುಖ ರಸ್ತೆಗಳಲ್ಲಿ ಈ ಬಾರಿಯೂ ಕಾಲ್ತುಳಿತ ಸಂಭವ ಹೆಚ್ಚಲಿದೆ ಎನ್ನುತ್ತಾರೆ ಗ್ರಾಮಸ್ಥರು.

* * 

ಜಿಲ್ಲಾಧಿಕಾರಿ ದೇಗುಲಕ್ಕೆ ಭೇಟಿ ನೀಡಿ ಜಾತ್ರಾ ಮಹೋತ್ಸವಕ್ಕೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದ್ದಾರೆ
ಚನ್ನಮಲ್ಲಪ್ಪ ಘಂಟಿ ತಹಶೀಲ್ದಾರ್, ಯಾದಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.