ADVERTISEMENT

ಯಾದಗಿರಿ | ಕೈಬೀಸಿ ಕರೆಯುವ ನಜರಾಪುರ ಫಾಲ್ಸ್

ಮಿನಿ ಮಲೆನಾಡಿನಂತೆ ಭಾಸವಾಗುವ ಸುಂದರ ಸೊಬಗಿನ ಜಲಪಾತ

ಬಿ.ಜಿ.ಪ್ರವೀಣಕುಮಾರ
Published 26 ಜುಲೈ 2020, 5:30 IST
Last Updated 26 ಜುಲೈ 2020, 5:30 IST
ಯಾದಗಿರಿ ಜಿಲ್ಲೆಯ ಗುರುಮಠಕಲ್‌ ತಾಲ್ಲೂಕಿನ ನಜರಾಪುರ ಜಲಪಾತದ ರಮಣೀಯ ನೋಟಪ್ರಜಾವಾಣಿ ಚಿತ್ರ: ರಾಜಕುಮಾರ ನಳ್ಳಿಕರ
ಯಾದಗಿರಿ ಜಿಲ್ಲೆಯ ಗುರುಮಠಕಲ್‌ ತಾಲ್ಲೂಕಿನ ನಜರಾಪುರ ಜಲಪಾತದ ರಮಣೀಯ ನೋಟಪ್ರಜಾವಾಣಿ ಚಿತ್ರ: ರಾಜಕುಮಾರ ನಳ್ಳಿಕರ   

ಯಾದಗಿರಿ: ಜಿಲ್ಲೆಯ ಗುರುಮಠಕಲ್‌ ತಾಲ್ಲೂಕಿನ ಮಿನಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ನಜರಾಪುರ ಜಲಪಾತ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, ಜಲಪಾತದಲ್ಲಿ ನೀರು ಧುಮ್ಮಿಕ್ಕುವ ದೃಶ್ಯಮನಸಿಗೆ ಮುದ ನೀಡುತ್ತದೆ.

ಗುರುಮಠಕಲ್‌ ಪಟ್ಟಣದಿಂದ 4 ಕಿ.ಮೀ. ದೂರದಲ್ಲಿರುವ ಬೆಟ್ಟಗುಡ್ಡದಲ್ಲಿ100ರಿಂದ 150 ಅಡಿಗಳಿಂದ ಧುಮ್ಮಿಕ್ಕುವ ನೀರು, ಹಾಲ್ನೊರೆಯಂತೆ ಕಾಣಿಸುತ್ತಿದ್ದು ಪ್ರವಾಸಿಗರನ್ನು ಮೋಡಿ ಮಾಡುತ್ತದೆ. ಹತ್ತಿರ ಹೋದಂತೆ ಜಲಪಾತದ ಭೋರ್ಗರೆತದ ಶಬ್ಧ ಕಿವಿಗೆ ಅಪ್ಪಳಿಸುತ್ತದೆ. ಮಳೆಗಾಲದಲ್ಲಿ ಮಾತ್ರ ಸುಂದರವಾಗಿ ಕಾಣುವ ಜಲಪಾಲ, ಬೇಸಿಗೆಯಲ್ಲಿ ಕ್ಷೀಣಿಸಿರುತ್ತದೆ.

ಗುರುಮಠಕಲ್‌ ತಾಲ್ಲೂಕಿನಲ್ಲಿ ಜುಲೈ 1ರಿಂದ 24 ರವರೆಗೆ 252 ಮಿಲಿ ಮೀಟರ್ ಮಳೆಯಾಗಿದೆ. ಇದರಿಂದ ಜಲಪಾತಕ್ಕೆ ವಿವಿಧ ಕಡೆಯಿಂದ ನೀರು ಹರಿದು ಬರುತ್ತಿದ್ದು, ಸೊಗಸಾಗಿ ಕಾಣುತ್ತಿದೆ.

ADVERTISEMENT

ಪ್ರವಾಸಿಗರ ದಂಡು: ನಜರಾಪುರ ಜಲಪಾತ ನೋಡಲು ಯುವಜನರ ದಂಡೇ ಬರುತ್ತಿದೆ. ಬೈಕ್‌, ಕಾರು, ಆಟೊಗಳಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಕೆಲವರು ಅಪಾಯವನ್ನು ಲೆಕ್ಕಿಸದೆ ಈಜಾಟಕ್ಕೂ ಇಳಿಯುತ್ತಿದ್ದಾರೆ. ಗುರುಮಠಕಲ್‌ ಪಟ್ಟಣ ಸುತ್ತಮತ್ತಲಿನ ಜನರಲ್ಲದೆ ನೆರೆಯ ತೆಲಂಗಾಣ ರಾಜ್ಯದಿಂದಲೂ ಪ್ರವಾಸಿಗರು ಬರುತ್ತಿದ್ದಾರೆ. ಇದು ಜಲಪಾತದ ಅಡಿಯಿಂದ ಕಂಡು ಬರುವ ದೃಶ್ಯವಾದರೆ ಮೇಲ್ಭಾಗದಲ್ಲಿ ನೀರು ಹರಿಯುವ ಚಿತ್ರಣ ಜಲಪಾತದ ಹುಟ್ಟುವಿಕೆಯನ್ನುತೋರ್ಪಡಿಸುತ್ತಿದೆ. ಇದು ಕೂಡ ಜನರನ್ನು ತನ್ನತ್ತ ಸೆಳೆಯುತ್ತಿದೆ.

ಹಸಿರಿನ ಹೊದಿಕೆ: ಜಲಪಾತದ ಸುತ್ತಮುತ್ತಲೂ ಹಚ್ಚಹಸಿರಿನ ಹೊದಿಕೆ ಹೊದ್ದಂತೆ ಕಾಣುತ್ತದೆ. ಎಲ್ಲಿ ನೋಡಿದರೂ ಹಸಿರಿನಿಂದ ಕೂಡಿದ ವಿವಿಧ ಜಾತಿಯ ಮರಗಿಡಗಳು ಹೂಗಳು ಬಿಟ್ಟು ಮತ್ತಷ್ಟು ಆಕರ್ಷಣೀಯವಾಗಿವೆ. ಗುಡ್ಡದಲ್ಲಿ ಸೀತಾಫಲ ಗಿಡಗಳು ಯಥೇಚ್ಛವಾಗಿ ಸಿಗುತ್ತಿವೆ.

ಎರಡು ಬೆಳೆಗೆ ನೀರಿನ ಆಸರೆ: ಜಲಪಾತದ ನೀರು ಕೆಳ ಭಾಗದಲ್ಲಿರುವ ನೂರಾರು ಎಕರೆಗಳ ಜಮೀನಿಗಳಿಗೆ ನೀರುಣಿಸುತ್ತದೆ. ಅಲ್ಲದೆಈ ನೀರಿನಿಂದ ಎರಡು ಬೆಳೆಗಳನ್ನು ಬೆಳೆಯಲಾಗುತ್ತಿದೆ ಎಂದು ಗ್ರಾಮಸ್ಥ ತಿಮ್ಮಪ್ಪ ತಿಳಿಸಿದರು.

***

ನಮ್ಮ ಭಾಗದಲ್ಲಿ ಇಂಥ ಜಲಪಾತ ಇರುವುದು ನಮ್ಮ ಹೆಮ್ಮೆ ಆಗಿದೆ. ಆದರೆ, ಅಭಿವೃದ್ಧಿ ವಿಷಯದಲ್ಲಿ ಮಾತ್ರ ಹಿಂದುಳಿದೆ. ಇದನ್ನು ಅಭಿವೃದ್ಧಿ ಮಾಡಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಬೇಕು.
-ತಾಯಪ್ಪ ಗುಡೆಮಲ್ಲವರ್ ಕರಣಗಿ, ಪ್ರವಾಸಿಗ

***

ಜಲಪಾತ ನೋಡಲು 20 ಜನರ ತಂಡ ಬಂದಿದ್ದೇವೆ. ನೀರು ಧುಮ್ಮಿಕ್ಕುತ್ತಿರುವ ದೃಶ್ಯ ಕಂಡು ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಸುಂದರ ವಾತಾವರಣ ಇರುವುದರಿಂದ ನೋಡಲು ಚೆಂದವಾಗಿದೆ.
-ನಿಂಗಪ್ಪ ನಾಯಕ, ಪ್ರವಾಸಿಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.