ADVERTISEMENT

ಶಹಾಪುರ: ಮುಷ್ಕರ ಕರೆಗೆ ನೀರಸ ಪ್ರತಿಕ್ರಿಯೆ

ದೇವದುರ್ಗ ಕ್ರಾಸ್ ಬಳಿ ರೈತ ಸಂಘದಿಂದ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 10:52 IST
Last Updated 9 ಜನವರಿ 2020, 10:52 IST
ಶಹಾಪುರದ ಬಸವೇಶ್ವರ ವೃತ್ತದಲ್ಲಿ ಬುಧವಾರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಭಾರತ ಬಂದ್‌ ಬೆಂಬಲಿಸಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಜಗನಾಥರಡ್ಡಿ ಅವರಿಗೆ ಮನವಿ ಸಲ್ಲಿಸಿದರು
ಶಹಾಪುರದ ಬಸವೇಶ್ವರ ವೃತ್ತದಲ್ಲಿ ಬುಧವಾರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಭಾರತ ಬಂದ್‌ ಬೆಂಬಲಿಸಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಜಗನಾಥರಡ್ಡಿ ಅವರಿಗೆ ಮನವಿ ಸಲ್ಲಿಸಿದರು   

ಶಹಾಪುರ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧ ನೀತಿ ಖಂಡಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಸಾರ್ವತ್ರಿಕ ಮುಷ್ಕರ ಕರೆಗೆ ಬುಧವಾರ ಇಲ್ಲಿ ಪ್ರತಿಕ್ರಿಯೆ ನೀರಸವಾಗಿತ್ತು.

ಕರ್ನಾಟಕ ಗ್ರಾಮೀಣ ಬ್ಯಾಂಕ್ ಬಂದ್‌ಗೆ ಬೆಂಬಲಿಸಿದ್ದರಿಂದ ಬ್ಯಾಂಕ್ ಬಂದ್‌ ಆಗಿತ್ತು. ಶಾಲಾ ಕಾಲೇಜುಗಳು ಎಂದಿನಂತೆ ಆರಂಭವಾಗಿದ್ದವು. ಅಂಗಡಿ ಮುಂಗ್ಗಟ್ಟುಗಳು ತೆರೆದಿದ್ದವು. ರಸ್ತೆ ಸಾರಿಗೆ ಸಂಚಾರ ಎಂದಿನಂತ್ತಿತ್ತು. ಯಾರಿಗೂ ಮುಷ್ಕರದ ಬಿಸಿ ತಟ್ಟಲಿಲ್ಲ.

ಮುಷ್ಕರ ಬೆಂಬಲಿಸಿ ಸಿಐಟಿಯು ಸಂಘಟನೆ ನೇತೃತ್ವದಲ್ಲಿ ನಗರದ ಬಸವೇಶ್ವರ ವೃತ್ತದಲ್ಲಿ ಬೀದರ್‌– ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಕೆಲ ಹೊತ್ತು ಪ್ರತಿಭಟನೆ ನಡೆಸಿದರು. ಎಲ್ಲ ಕಾರ್ಮಿಕರಿಗೆ ಸಮಾನ ವೇತನ ನೀಡಬೇಕು. ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಬಿಸಿಯೂಟದ ಕಾರ್ಯಕರ್ತರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ರೈತರಿಗೆ ಬೆಂಬಲ ಬೆಲೆ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುಂತೆ ಒತ್ತಾಯಿಸಿದರು.

ADVERTISEMENT

ಸಂಘಟನೆಯ ತಾಲ್ಲೂಕು ಸಂಚಾಲಕ ಮಲ್ಲಯ್ಯ ಪೊಲಂಪಲ್ಲಿ, ಬಸಲಿಂಗಮ್ಮ ನಾಟೇಕರ್, ಯಮನಮ್ಮ ದೋರನಹಳ್ಳಿ, ರಾಜೇಶ್ವರಿ ಶಿರವಾಳ, ಮಲ್ಲಣ್ಣ ಬಿರಾದಾರ, ಸುನಂದಾ ಹಿರೇಮಠ, ಹಣಮಂತಿ ಮೌರ್ಯ, ಈರಮ್ಮ ಹಯ್ಯಾಳಕರ್, ಮಂಜುಳಾ ಹೊಸ್ಮನಿ ಇದ್ದರು.

ದೇವದುರ್ಗ ಕ್ರಾಸ್

ತಾಲ್ಲೂಕಿನ ದೇವದುರ್ಗ ಕ್ರಾಸ್ ಬಳಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ರೈತ ಸಂಘ ಹಸಿರುಸೇನೆ ನೇತೃತ್ವದಲ್ಲಿ ಶಹಾಪುರ–ದೇವದುರ್ಗ ರಾಜ್ಯ ಹೆದ್ದಾರಿ ಬಂದ್ ಮಾಡಿ ಕೆಲ ಹೊತ್ತು ಪ್ರತಿಭಟನೆ ನಡೆಸಿದರು.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ಹಲ್ಲೆ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಕೊಂಗಂಡಿ ಏತ ನೀರಾವರಿಗೆ ಒಳಪಡುವ ಗೌಡೂರ, ಯಕ್ಷಿಂತಿ, ಬಿರನೂರ, ಟೊಣ್ಣುರ, ಕೊಳ್ಳೂರ ಗ್ರಾಮಗಳಿಗೆ ಸಮರ್ಕವಾಗಿ ನೀರು ಒದಗಿಸಬೇಕು. ನರೇಗಾ ಯೋಜನೆ ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಎಸ್.ಎಂ.ಸಾಗರ, ನಾಗರತ್ನ ಪಾಟೀಲ ಯಕ್ಷಿಂತಿ, ಲಕ್ಷ್ಮಿಕಾಂತ ನಾಯಕ ಕೊಳ್ಳೂರ, ಶರಣು ರಡ್ಡಿ ಹತ್ತಿಗೂಡೂರ, ಹನಮಂತರಾಯ ಕೊಂಗಂಡಿ, ಶರಣಪ್ಪ ಚಲವಾದಿ, ಗುರು ಮರಕಲ್, ಚಂದ್ರಶೇಖರ ನಾಟೇಕರ್, ಹನುಮಯ್ಯ ಮರಕಲ್ ಇದ್ದರು.

ಭೀಮರಾಯನಗುಡಿ

ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ತಾಲ್ಲೂಕಿನ ಭೀಮರಾಯಗುಡಿ ಬಳಿ ಮುಷ್ಕರ ಬೆಂಬಲಿಸಿ ಪ್ರತಿಭಟನೆ ನಡೆಯಿತು.

ಮುಖಂಡರಾದ ಚೆನ್ನಪ್ಪ ಆನೆಗುಂದಿ, ಮಲ್ಲಣ್ಣಗೌಡ ಮಾಲಿ ಪಾಟೀಲ್, ಯಲ್ಲಪ್ಪ ಗುಡಿಮನಿ, ಭಾಗೇಶ ಏವೂರ, ಜೆಟ್ಟೆಪ್ಪ ಗುಡಿಮನಿ, ಎನ್‌,ಎಂ.ನದಾಫ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.