ಯಾದಗಿರಿ: ಬಡ ಮತ್ತು ನಿರ್ಗತಿಕ ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಲು 25 ಹೊಲಿಗೆ ಯಂತ್ರಗಳನ್ನು ತಮ್ಮ ಕಡೆಯಿಂದ ವಿತರಿಸಲಾಗುವುದು ಎಂದು ಜೆಡಿಎಸ್ ರಾಜ್ಯ ಯುವ ಮುಖಂಡ ಶರಣಗೌಡ ಕಂದಕೂರ ಪ್ರಕಟಿಸಿದರು.
ಮಾತೋಶ್ರೀ ಬಸಮ್ಮ ಶರಬಣ್ಣ ಸೇವಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಸಹಾರಾ ಕಾಲೊನಿಯಲ್ಲಿರುವ ಬೀಚಿ ಉದ್ಯಾನ ವನದಲ್ಲಿ ಹಮ್ಮಿಕೊಂಡಿದ್ದ ಹಾಸ್ಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ತಾಯಿಯನ್ನು ನೆನಪು ಮಾಡಿಕೊಳ್ಳಲು ಹಾಸ್ಯೋತ್ಸವ ಏರ್ಪಡಿಸಿದ್ದು ಶ್ಲಾಘನೀಯ. ಈ ಮೂಲಕ ತಾಯಿಯನ್ನು ಗೌರವಿಸಿದಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಮಾತನಾಡಿ, ತಾಯಿಯ ಕುರಿತು ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಇಂಥ ಕಾರ್ಯಕ್ರಮ ಮಾಡಿರುವುದು ಸಂತಸದಾಯಕ ಎಂದು ಹೇಳಿ ತಾಯಿಯ ಕುರಿತು ತಾವೇ ರಚಿಸಿದ ಕವನ ವಾಚಿಸಿದರು.
ಹಿರಿಯ ಸಾಹಿತಿ ಎಚ್.ವಿಜಯ ಭಾಸ್ಕರ್ ಅವರು ರಚಿಸಿರುವ ‘ಇಬ್ಬರೂ ಪ್ರಚಂಡ ಪ್ರವಾದಿಗಳು ಮತ್ತು ಇಬ್ಬರು ಕುಷ್ಟರೋಗಿಗಳು’ ಕೃತಿ ಬಿಡುಗಡೆಗೊಳಿಸಲಾಯಿತು.
ನಿವೃತ್ತ ಪ್ರಾಂಶುಪಾಲ ವಿಜಯರತ್ನ ಕುಮಾರ ಕೃತಿ ಕುರಿತು ಮಾತನಾಡಿ, ಈ ಕೃತಿಯಲ್ಲಿ ವಾಸ್ತವತೆಗೆ ಹಿಡಿದ ಕೈಗನ್ನಡಿಯಾಗಿರುವ ಹಲವಾರು ಅಂಶಗಳು ಎದ್ದು ಕಾಣುತ್ತಿವೆ. ಜೊತೆಗೆ ಒಬ್ಬ ಸಾಹಿತಿಯ ಬದುಕು ಮತ್ತು ಬರಹ ಒಂದೇ ನೆಲೆಗಟ್ಟಿನಲ್ಲಿರಬೇಕು ಎಂಬುದನ್ನು ಈ ಕೃತಿ ಸಾಬೀತುಪಡಿಸಿದಂತಾಗಿದೆ ಎಂದು ಹೇಳಿದರು.
ಉದಯ ಟಿವಿ ಹರಟೆ ಖ್ಯಾತಿಯ ಇಂದುಮತಿ ಸಾಲಿಮಠ, ಎರಡಕ್ಷರ ಖ್ಯಾತಿಯ ಬಸವರಾಜ ಬೆಣ್ಣಿ, ಜವಾರಿ ಹಾಸ್ಯ ಖ್ಯಾತಿಯ ಕಲಬುರ್ಗಿ ಗುಂಡಣ್ಣ ಡಿಗ್ಗಿ ಅವರಿಂದ ಹಾಸ್ಯೋತ್ಸವ ಜರುಗಿತು. ಸಭಿಕರೆಲ್ಲರನ್ನು ನಗೆಗಡಲಲ್ಲಿ ತೇಲಿಸಿದ್ದು ವಿಶೇಷವಾಗಿತ್ತು.
ಅಮೂಲ್ಯ ಹಾಗೂ ಸಂಗಡಿಗರಿಂದ ಸಮೂಹ ನೃತ್ಯ ಹಾಗೂ ಮರೆಪ್ಪ ಶಿರವಾಳ ಅವರಿಂದ ಜಾನಪದ ಸಂಗೀತ ಕಾರ್ಯಕ್ರಮಗಳು ಜರುಗಿದವು. ಈ ವೇಳೆ ಕಾರ್ಯನಿರತರ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಇಂದುಧರ ಸಿನ್ನೂರು ಅವರನ್ನು ಸನ್ಮಾನಿಸಲಾಯಿತು.
ನಗರಸಭೆ ಪ‍್ರಭಾರಿ ಪೌರಾಯುಕ್ತ ಬಕ್ಕಪ್ಪ ಹೊಸಮನಿ, ನಗರಸಭೆ ಸದಸ್ಯ ಗಣೇಶ್ ದುಪ್ಪಲ್ಲಿ, ನೂರಾರು ಸಾರ್ವಜನಿಕರು ಇದ್ದರು. ಟ್ರಸ್ಟ್‌ನ ಅಧ್ಯಕ್ಷ ಬಸವರಾಜ ಮಹಾಮನಿ ಪ್ರಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಸಿನ್ನೂರ ನಿರೂಪಿಸಿದರು. ಅಶ್ವಿನಿ ಹೊಸಪೇಟೆ ಸ್ವಾಗತಿಸಿದರು. ಮಹೇಶ್ ಕಲಬುರ್ಗಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.