ADVERTISEMENT

ಯಾದಗಿರಿ: ಕೃಷಿ ಖುಷಿ–10 ಗುಂಟೆಯಲ್ಲಿ ಹತ್ತಾರು ಬೆಳೆ

ನಗರ ಹೊರವಲಯದಲ್ಲಿ 10 ವರ್ಷಗಳಿಂದ ತರಕಾರಿ ಬೆಳೆಯುತ್ತಿರುವ ರೈತ ಕುಟುಂಬ

ಬಿ.ಜಿ.ಪ್ರವೀಣಕುಮಾರ
Published 21 ಜನವರಿ 2022, 19:30 IST
Last Updated 21 ಜನವರಿ 2022, 19:30 IST
ಯಾದಗಿರಿ ನಗರ ಹೊರವಲಯದ ವರ್ಕನಹಳ್ಳಿ ರಸ್ತೆಯ 10 ಗುಂಟೆ ಜಮೀನನಲ್ಲಿ ವೈವಿಧ್ಯಮಯ ತರಕಾರಿ ಬೆಳೆದಿರುವುದುಪ್ರಜಾವಾಣಿ ಚಿತ್ರ: ರಾಜಕುಮಾರ ನಳ್ಳಿಕರ
ಯಾದಗಿರಿ ನಗರ ಹೊರವಲಯದ ವರ್ಕನಹಳ್ಳಿ ರಸ್ತೆಯ 10 ಗುಂಟೆ ಜಮೀನನಲ್ಲಿ ವೈವಿಧ್ಯಮಯ ತರಕಾರಿ ಬೆಳೆದಿರುವುದುಪ್ರಜಾವಾಣಿ ಚಿತ್ರ: ರಾಜಕುಮಾರ ನಳ್ಳಿಕರ   

ಯಾದಗಿರಿ: ಇಲ್ಲೊಬ್ಬ ರೈತ ತಮ್ಮ 10 ಗುಂಟೆ ಜಮೀನನಲ್ಲಿ ಕಳೆದ 10 ವರ್ಷಗಳಿಂದ ಹತ್ತಾರು ವೈವಿಧ್ಯಮಯ ತರಕಾರಿ ಬೆಳೆದು ಗಮನ ಸೆಳೆಯುತ್ತಿದ್ದಾರೆ.

ಬೆಳಿಗ್ಗೆಯಿಂದ ಸಂಜೆವರೆಗೆ ರೈತ ಶಂಕರ್ ಪಾಮಳ್ಳಿ ರೈತ ಕುಟುಂಬ ಜಮೀನನಲ್ಲಿಯೇ ಕಾಲ ಕಳೆಯುತ್ತಾರೆ.

ನಗರ ಹೊರವಲಯದ ವರ್ಕನಹಳ್ಳಿ ರಸ್ತೆಯಲ್ಲಿ 8 ಎಕರೆ ಜಮೀನು ಹೊಂದಿರುವ ಶಂಕರ್‌ ಪಾಮಳ್ಳಿ ಅವರು, ಕೇವಲ 10 ಗುಂಟೆಯಲ್ಲಿ ಮಾತ್ರ ತರಕಾರಿ ಬೆಳೆಯುತ್ತಾರೆ. ಇದರಿಂದ ಬರುವ ಆದಾಯದಲ್ಲಿ ಕುಟುಂಬವನ್ನು ಸರಿದೂಗಿಸಿಕೊಳ್ಳುತ್ತಾರೆ.

ADVERTISEMENT

ಕಳೆದ 10 ವರ್ಷಗಳಿಂದ ತರಕಾರಿ ಬೆಳೆಯಲು ಆರಂಭಿಸಿದ್ದು, ಲಾಭ ಕಂಡು ಪ್ರತಿವರ್ಷವೂ ಬೆಳೆಯುತ್ತಾರೆ. ರೋಗ ರುಜಿನ ಬಾರದಂತೆ ಉತ್ತಮ ಪೋಷಕಾಂಶ ನೀಡುತ್ತಿದ್ದು, ಕಾಲಕಾಲಕ್ಕೆ ನೀರುಣಿಸಬೇಕು. ಆಗ ಬೆಳೆಗೆ ಯಾವುದೇ ಸಮಸ್ಯೆ ಬರುವುದಿಲ್ಲ ಎಂದು ರೈತ ಅನುಭವದ ಮಾತು ಹೇಳುತ್ತಾರೆ.

ಏನೇನಿದೆ ತರಕಾರಿ:ಬದನೆಕಾಯಿ, ಟೊಮೆಟೊ,‌ ಪಾಲಕ್‌ ಸೊಪ್ಪು, ಬೆಂಡಿಕಾಯಿ, ಎರಡು ವಿಧದ ಹಿರೇಕಾಯಿ, ಚವಳೆಕಾಯಿ, ಪುಂಡೆಪಲ್ಲೆ, ರಾಜಗಿರಿ ಸೊಪ್ಪು, ಸಬ್ಬಸಗಿ, ಕೋತಂಬರಿ ಸೊಪ್ಪು, ಸೀತಾಫಲ ಹಣ್ಣಿನ ಗಿಡಗಳು, ಒಂದು ನಿಂಬೆ ಹಣ್ಣಿನ ಗಿಡ, ಮೂರು ತೆಂಗಿನಕಾಯಿ ಹೀಗೆ ತೋಟದಲ್ಲಿ ವೈವಿಧ್ಯಮಯ ಬೆಳೆ ಬೆಳೆದಿದ್ದಾರೆ. ಇದರ ಜೊತೆಗೆ ಸಾಸಿವೆ ಗಿಡಗಳನ್ನು ಬೆಳೆಸಿದ್ದಾರೆ.

‘ನನಗೆ 8 ಎರಕ ಜಮೀನು ಇದ್ದು, ನಾಲ್ಕು ಎಕರೆ ಹೆಸರು, ನಾಲ್ಕು ಎಕರೆ ಹತ್ತಿ ಬಿತ್ತನೆ ಮಾಡಲಾಗಿತ್ತು. ಇದರ ಜೊತೆಗೆ ವಿವಿಧ ತರಕಾರಿ ಬೆಳೆಯುತ್ತೇನೆ. ಮಳೆಗಾಲದಲ್ಲಿ ಕಳೆ ಹೆಚ್ಚಾಗಿದ್ದರೆ ಮಾತ್ರ ಕೂಲಿಯವರನ್ನು ಕರೆಸುತ್ತೇನೆ. ಇಲ್ಲದಿದ್ದರೆ ಕುಟುಂಬದವರೆ ದುಡಿಯುತ್ತೇವೆ’ ಎಂದು ಶಂಕರ್‌ ಪಾಮಳ್ಳಿ ಹೇಳುತ್ತಾರೆ.

ಜಮೀನಿನ ದಡದಲ್ಲಿ ತುಪ್ಪದ ಹಿರೇಕಾಯಿ ಬಳ್ಳಿ ಬೆಳೆಸಿದ್ದಾರೆ. ಈ ಮಾರ್ಗದಲ್ಲಿ ತೆರಳುವವರು ತರಕಾರಿ ಬೆಳೆಗಳನ್ನು ನೋಡಿ ಆಶ್ವರ್ಯ ಚಕಿತರಾಗುತ್ತಾರೆ. ಗಜ ನಿಂಬೆ ಹಣ್ಣಿನ ಗಿಡ ಇದ್ದು, ನೂರಾರು ಕಾಯಿಗಳು ರೆಂಬೆಗಳಲ್ಲಿ ತೂಗಾಡುತ್ತಿವೆ.

ಟೊಮೆಟೊ ಗಿಡಗಳಿಗೆ ಆಧಾರವಾಗಿ ಕಟ್ಟಿಗೆ ಕಟ್ಟಿದ್ದಾರೆ. ಈಗ ಕಾಯಿಯಾಗಿದ್ದು, ಇನ್ನು ಕೆಲವೇದಿನಗಳಲ್ಲಿ ಹಣ್ಣುಗಳಾಗಲಿವೆ.

‘ಮಳೆಗಾಲದಲ್ಲಿ 4 ಎಕರೆಯಲ್ಲಿ ಹೆಸರು ಬಿತ್ತನೆ ಮಾಡಲಾಗಿತ್ತು. ಮತ್ತೊಂದು ನಾಲ್ಕು ಎರಕೆಯಲ್ಲಿ ಹತ್ತಿ ಮಾಡಲಾಗಿತ್ತು. ಮತ್ತೆ ಈಗ ಹೆಸರು, ಆಲಸಂದಿ ಬಿತ್ತನೆ ಮಾಡಲಾಗಿದೆ. ಕೊಳವೆ ಬಾವಿ ಕೊರೆಸಲಾಗಿದೆ. ನೀರಿನ ಸಮಸ್ಯೆ ಇಲ್ಲ’ ಎನ್ನುತ್ತಾರೆ ರೈತ ಪಾಮಳ್ಳಿ.

‘ಕೃಷಿಯಲ್ಲಿ ಈ ಹಿಂದೆ ಎತ್ತುಗಳನ್ನು ಸಾಕಲಾಗಿತ್ತು. ತೊಡೆಗೆ ತಿವಿದಿದ್ದರಿಂದ ರಕ್ತಗಾಯವಾಗಿ ಆಸ್ಪತ್ರೆಯಲ್ಲಿ ಬಿದ್ದಿದ್ದೆ. ಹೀಗಾಗಿ ಎತ್ತುಗಳನ್ನು ಮಾರಾಟ ಮಾಡಿ ಟ್ರ್ಯಾಕ್ಟರ್‌ ಮೂಲಕ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಕೃಷಿಯಲ್ಲಿ ಕೈ ಸರಿಯಾಗಿ ಕುಂತರೆ ಲಾಭ ಗಳಿಸಬಹುದು ಎನ್ನುತ್ತಾರೆ ರೈತ.

‘ತರಕಾರಿಯನ್ನು ಹೆಚ್ಚಾಗಿ ಮನೆಗೆ ಉಪಯೋಗ ಮಾಡಿಕೊಳ್ಳುತ್ತೇವೆ. ಉತ್ತಮ ಫಸಲು ಬಂದಾಗ ಸಂಜೆ ವೇಳೆ ಕಟಾವು ಮಾಡಿ ಯಾದಗಿರಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತೇವೆ. ಸಾವಿರಾರು ರೂಪಾಯಿ ತರಕಾರಿಯಿಂದ ಲಾಭ ಬಂದಿದೆ. ಪುಂಡಿಪಲ್ಲೆ ಮೋಡ ಕವಿದ ವಾತಾವರಣದಿಂದ ಎಲೆಗಳು ಮುದುರಿಕೊಳ್ಳುತ್ತಿವೆ. ಬಿಸಿಲು ಚೆನ್ನಾಗಿದ್ದರೆ ಬೇಗ ಬೆಳೆಯುತ್ತವೆ’ ಎನ್ನುತ್ತಾರೆ ಮಂಜಮ್ಮ ಪಾಮಳ್ಳಿ.

***

ಕೃಷಿ ಮಾಡಿದರೆ ಮಾಡಿದರೆ ಲಾಭ ಇದೆ. ಮಾಡದಿದ್ದರೆ ಯಾವುದೇ ಫಲ ನೀಡುವುದಿಲ್ಲ. ತಂತ್ರಗಾರಿಕೆ ಅಳವಡಿಸಿಕೊಂಡರೆ ಸಾಕು

ಶಂಕರ್‌ ಪಾಮಳ್ಳಿ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.