ADVERTISEMENT

ನಗರದ ವಿವಿಧೆಡೆ ದಿಢೀರ್ ಭೇಟಿ ನೀಡಿದ ಸಚಿವ

ನಗರದ ಹಳೆ, ಹೊಸ ಬಸ್ ನಿಲ್ದಾಣ, ಹಳೆ ಜಿಲ್ಲಾಸ್ಪತ್ರೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 16:16 IST
Last Updated 15 ಏಪ್ರಿಲ್ 2022, 16:16 IST
ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಹೊಸ ಬಸ್ ನಿಲ್ದಾಣದಲ್ಲಿ ತ್ಯಾಜ್ಯ ಪರಿಶೀಲಿಸಿ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು
ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಹೊಸ ಬಸ್ ನಿಲ್ದಾಣದಲ್ಲಿ ತ್ಯಾಜ್ಯ ಪರಿಶೀಲಿಸಿ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು   

ಯಾದಗಿರಿ: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಅವರು ನಗರದ ಹಲವು ಕಡೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಚಿವರ ಈ ನಡೆಗೆ ಅಧಿಕಾರಿಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿತು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಮತ್ತು ಭಗವಾನ್‌ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಳೆದ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ವಾಸ್ತವ್ಯ ಇರುವ ಸಚಿವರು, ಅಧಿಕಾರಿಗಳ ಜೊತೆ ಕುಡಿಯುವ ನೀರಿನ ಸಮಸ್ಯೆ, ಸಾರ್ವಜನಿಕರ ಕುಂದು ಕೊರತೆಗಳ ಕುರಿತು ಅಹವಾಲು ಸ್ವೀಕಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಶುಕ್ರವಾರ ಬೆಳಿಗ್ಗೆ ಸಚಿವರು, ನಗರದ ಹಳೆ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ಹಳೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳಿಗೆ ಚಾಟಿ ಬೀಸಿದರು.

ADVERTISEMENT

ಹಳೆ ಬಸ್ ನಿಲ್ದಾಣದಲ್ಲಿನ ಪ್ರಯಾಣಿಕರ ಜೊತೆ ಮಾತನಾಡಿ ಬಸ್ ಸಮಸ್ಯೆ ಆಲಿಸಿದರು. ಹೊಸ ಬಸ್ ನಿಲ್ದಾಣದಲ್ಲಿ ತ್ಯಾಜ್ಯ ಪರಿಶೀಲಿಸಿದ ಸಚಿವ ಪ್ರಭು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಿಮ್ಮ ಮನೆಯಲ್ಲಿ ಇದೇ ರೀತಿ ಕಸ ಇರುತ್ತದೆಯೇ ಎಂದು ಪ್ರಶ್ನಿಸಿದರು. ಈ ರೀತಿ ಮಾಡಿದರೆ ಸರಿ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಹೊಸ ನಿಲ್ದಾಣದ ಸುತ್ತೆಲ್ಲಾ ಸುತ್ತಿ ಪರಿಶೀಲಿಸಿ, ಬಸ್‌ವೊಂದರ ಒಳಗೆ ಹೋಗಿ ಬಸ್ ಅನ್ನು ಪರಿಶೀಲಿಸಿದರು.

ನಂತರ ಬಸ್ ಸಂಚಾರ ನಿಯಂತ್ರಕ ಸ್ಥಳದಲ್ಲಿ ಇಲ್ಲದಿದ್ದಾಗ ಕರೆ ಮಾಡಿ ಎಚ್ಚರಿಕೆ ಕೊಟ್ಟರು. ಅಧಿಕಾರಿಗಳಿಗೆ ತುರ್ತು ನೋಟಿಸ್ ನೀಡಿ ಅಮಾನತು ಮಾಡಿ ಎಂದು ಖಡಕ್ ಎಚ್ಚರಿಕೆ ನೀಡಿದರು.

ಹಳೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಚಿವ, ಆಸ್ಪತ್ರೆಯಲ್ಲಿ ಅವ್ಯವಸ್ಥೆ ಕಂಡು ಕೆಂಡಮಂಡಲರಾದರು. ಸಿಬ್ಬಂದಿ ಹಾಜರಾತಿ ಪುಸ್ತಕ ಮತ್ತು ಕೆಲಸದ ವಿವರ, ಆಸ್ಪತ್ರೆಯ ಪ್ರತಿಯೊಂದು ವಿಭಾಗಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಆಸ್ಪತ್ರೆಯಲ್ಲಿ ಹೆರಿಗೆ ರೋಗಿಗಳಿಗೆ ಸೌಲಭ್ಯ ಕೊರತೆ ಕಾಡುತ್ತಿದೆ ಎಂದು ರೋಗಿಗಳು ಕರೆ ಮಾಡುತ್ತಿದ್ದಾರೆ. ಅಂಥ ಸಮಸ್ಯೆ ಮರುಕಳಿಸಬಾರದು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಜೀವಕುಮಾರ ರಾಯಚೂರಕರ್‌ ಅವರಿಗೆ ಸೂಚಿಸಿದರು.

ಆಸ್ಪತ್ರೆಯ ಆವರಣವು ಸ್ವಚ್ಛತೆಯಿಂದ ಕೂಡಿರಬೇಕು. ರೋಗಿಗಳಿಗೆ ಶೀಘ್ರ ಸ್ಪಂದಿಸಿ ಚಿಕಿತ್ಸೆ ನೀಡಬೇಕು. ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಇದಾದ ನಂತರ ಭಗವಾನ್ ಮಹಾವೀರ ಜೈನ್ ಗೋಶಾಲೆಗೆ ಭೇಟಿ ನೀಡಿ ಗೋ ಪೂಜೆ ಮಾಡಿ ಗೋವಿಗೆ ನೈವೇದ್ಯ ಸಮರ್ಪಿಸಿದರು.

***

ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ಯಾದಗಿರಿ: ಜಿಲ್ಲಾಡಳಿತ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅಧ್ಯಕ್ಷತೆಯಲ್ಲಿ ಸಾರ್ವಜನಿಕರಿಂದ ಕುಂದು ಕೊರತೆಗಳ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಿತು.

ನಗರಸಭೆಗೆ 36, ಲೋಕೋಪಯೋಗಿ ಇಲಾಖೆ 1, ಅಂಬೇಡ್ಕರ್ ನಿಗಮ 5, ಯಾದಗಿರಿ ತಾಲ್ಲೂಕು ಪಂಚಾಯಿತಿ 15, ಸಮಾಜ ಕಲ್ಯಾಣ ಇಲಾಖೆ 3, ಗುರುಮಠಕಲ್ ತಾಲ್ಲೂಕು ಪಂಚಾಯಿತಿ 5, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 8 ಹಾಗೂ ಇನ್ನಿತರ ಇಲಾಖೆಗಳಿಗೆ ಸಂಬಂಧಿಸಿದಂತೆ ಒಟ್ಟು 96 ಅರ್ಜಿಗಳು ಸ್ವೀಕೃತವಾಗಿದ್ದು, ನಿಗದಿತ ಅವಧಿಯೊಳಗೆ ಅರ್ಜಿಗಳನ್ನು ವಿಲೆವಾರಿ ಮಾಡಲು ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.

ಸಮಸ್ಯೆಗಳ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಜನರ ಮನೆ, ನಿವೇಶನ, ಪಿಂಚಣಿ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತು ಅರ್ಜಿಗಳು ಬಂದಿವೆ. ಜನರು ಸಮಸ್ಯೆ ಇಟ್ಟುಕೊಂಡು ಅಧಿಕಾರಿಗಳ ಬಳಿಗೆ ಬರುತ್ತಾರೆ. ಆಗ ಅಧಿಕಾರಿಗಳು ಸಾರ್ವಜನಿಕರ ಸಮಯ ವ್ಯರ್ಥ ಮಾಡದೇ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಮರೇಶ ಆರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಉಪವಿಭಾಗಾಧಿಕಾರಿ ಶಾ ಆಲಂ ಹುಸೇನ್, ತಹಶೀಲ್ದಾರರು, ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.