ಯಾದಗಿರಿ: ಜಿಲ್ಲಾ ಕೇಂದ್ರವಾದ ಯಾದಗಿರಿ ನಗರಸಭೆಗೆ ಕಾಯಂ ಪೌರಾಯುಕ್ತರಿಲ್ಲದೆ 11 ತಿಂಗಳಾಗಿದ್ದು, ಪ್ರಭಾರದಲ್ಲಿ ನಡೆಯುತ್ತಿದೆ. ಇದರ ಜೊತೆಗೆ ನಗರಸಭೆಗೆ ಬೇಕಾಗಿರುವ ಅಗತ್ಯ ಸಿಬ್ಬಂದಿ ಕೊರತೆಯೂ ಕಾಡುತ್ತಿದೆ.
ಪೌರಾಯುಕ್ತರಾಗಿ ಬರಲು ಹಿಂದೇಟು: 2023ರ ಆಗಸ್ಟ್ 22ರಿಂದ ಕಾಯಂ ಪೌರಾಯುಕ್ತರ ಹುದ್ದೆ ಖಾಲಿ ಇದ್ದು, ಇಲ್ಲಿಗೆ ಬರಲು ಇಲ್ಲಿಗೆ ಬರಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಜನಪ್ರತನಿಧಿಗಳೇ ಹೇಳುತ್ತಾರೆ.
ಹಿಂದೆ ಕೆಲಸ ಮಾಡಿದವರು ಅಕ್ರಮ ಖಾತಾ ನಕಲು, ಸರ್ಕಾರಿ ಆಸ್ತಿ ಪರಭಾರೆ ಪ್ರಕರಣದಲ್ಲಿ ಸಿಲುಕಿಕೊಂಡಿರುವುದರಿಂದ ಅಂಥ ಸ್ಥಳಕ್ಕೆ ಬೇಡ ಎಂದು ಹಲವರು ಹಿಂಜರಿಯುತ್ತಿದ್ದಾರೆ. ಇದರಿಂದ ನಗರದಲ್ಲಿ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿವೆ. ಚರಂಡಿ ಸ್ವಚ್ಛತೆ ಸೇರಿದಂತೆ ಸಾರ್ವಜನಿಕರ ಕೆಲಸಗಳು ಶೀಘ್ರವಾಗಿ ಆಗುತ್ತಿಲ್ಲ. ಅಲ್ಲದೇ ಕಡತಗಳು ವಿಲೇವಾರಿಗೆ ಅಡ್ಡಿಯುಂಟಾಗಿದೆ.
‘ನಗರಸಭೆಯಲ್ಲಿ ಹಲವು ಹುದ್ದೆಗಳು ಖಾಲಿ ಇರುವುದರಿಂದ ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ. ಇದರಿಂದ ಜನ ಒಂದು ಕಡೆಯಿಂದ ಮತ್ತೊಂದು ಕಡೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎನ್ನುತ್ತಾರೆ ನಗರ ನಿವಾಸಿ ಅರ್ಷದ್ ಅಲಿ.
ಯಾದಗಿರಿ ನಗರಸಭೆ ಕಾಯಂ ಪೌರಾಯುಕ್ತರಿಗಾಗಿ ಈಗಾಗಲೇ ಪತ್ರ ಬರೆಯಲಾಗಿದೆ. ಶೀಘ್ರದಲ್ಲಿ ನೂತನ ಆಯುಕ್ತರು ಬರಲಿದ್ದಾರೆ. ನಗರಸಭೆ ಅಭಿವೃದ್ಧಿ ಬಗ್ಗೆ ಗಮನ ಹರಿಸಲಾಗಿದೆ
-ಚನ್ನಾರೆಡ್ಡಿ ಪಾಟೀಲ ತುನ್ನೂರು ಯಾದಗಿರಿ ಶಾಸಕ
ಹಲವು ತಿಂಗಳಿಂದ ಕಾಯಂ ಪೌರಾಯುಕ್ತರಿಲ್ಲದ ಕಾರಣ ನಗರಸಭೆ ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಕೂಡಲೇ ಖಾಲಿ ಇರುವ ಹುದ್ದೆಗಳ ಕಡೆಗೂ ಸಂಬಂಧಿಸಿದವರು ಗಮನ ಹರಿಸಬೇಕು -ಅವಿನಾಶ ಜಗನ್ನಾಥ ಕೆಪಿಸಿಸಿ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ
ಖಾಲಿ ಹುದ್ದೆಗಳ ಸಾಲು
31ವಾರ್ಡ್‌ಗಳಲ್ಲಿ ಪಂಪ್ ಆಪರೇಟರ್‌ಗಳ ಸೇರಿದಂತೆ ಹಲವಾರು ಹುದ್ದೆಗಳು ಖಾಲಿ ಇವೆ. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಪರಿಸರ) ಸೀನಿಯರ್ ಪ್ರೋಗ್ರಾಮರ್ ಸಹಾಯಕ ಎಂಜಿನಿಯರ್ ಸಮುದಾಯ ಸಂಘಟನಾಧಿಕಾರಿ ಕಂದಾಯ ಅಧಿಕಾರಿ ಕಿರಿಯ ಎಂಜಿನಿಯರ್ ಹಿರಿಯ ಆರೋಗ್ಯ ನಿರೀಕ್ಷಕರು ಸ್ಟೆನೊಗ್ರಾಫರ್ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಸಮುದಾಯ ಸಂಘಟಕರು ಪಂಪ್ ಆಪರೇಟರ್ ಕಂಪ್ಯೂಟರ್ ಆಪರೇಟರ್ ಕರ ವಸೂಲಿಗಾರ ವಾಹನ ಚಾಲಕ ಸಹಾಯಕ ನೀರು ಸರಬರಾಜು ಆಪರೇಟರ್ ಲ್ಯಾಬ್ ಟೆಕ್ನಿಷಿಯನ್ ಪ್ಲಂಬರ್ ಪೌರಕಾರ್ಮಿಕರು ಲೋಡರ್ ಕ್ಲೀನರ್ ಸಹಾಯಕ/ನೀರು ಸರಬರಾಜು ವಾಲ್ವಮೆನ್ ಸೇರಿದಂತೆ ಹಲವಾರು ಹುದ್ದೆಗಳು ಖಾಲಿ ಇವೆ.
ಬೇಸಿಗೆಯಲ್ಲಿ ಕಾಡಿದ ನೀರಿನ ಸಮಸ್ಯೆ
ಯಾದಗಿರಿ ನಗರ ಹೊರ ವಲಯದಲ್ಲಿ ಭೀಮಾ ನದಿ ಹರಿಯುತ್ತಿರುವುದರಿಂದ ನೀರಿನ ಸಮಸ್ಯೆಯಾಗಲ್ಲ ಎನ್ನುವ ಮಾತು ಪ್ರತೀತಿ ಇತ್ತು. ಆದರೆ ಈ ಬಾರಿ ಬೇಸಿಗೆಯಲ್ಲಿ ಹನಿ ನೀರಿಗೂ ನಗರ ನಿವಾಸಿಗಳು ಪರದಾಡಿದರು. ಯಾದಗಿರಿಯಲ್ಲಿ 31 ವಾರ್ಡ್‌ಗಳಿದ್ದು ನಗರಕ್ಕೆ ಪ್ರತಿದಿನ 9.80 ಮಿಲಿಯನ್ ಲೀಟರ್ಸ್ ಪರ್ ಡೇ (ಎಂಎಲ್‌ಡಿ) ನೀರು ಸರಬರಾಜು ಮಾಡಬೇಕಿದೆ. ಬೇಸಿಗೆಯಲ್ಲಿ ಸ್ವತಂ ಕೊಳವೆ ಬಾವಿಗಳು ಬತ್ತಿ ಹೋಗಿ ನಗರಸಭೆ ಪೂರೈಸುವ ನೀರಿನ ಮೇಲೆ ಅವಲಂಬಿತರಾಗಿದ್ದರು. ಆದರೆ ನೀರು ಮೂರು ದಿನಕ್ಕೊಮ್ಮೆ ಪೂರೈಕೆಯಾಗಿದ್ದರಿಂದ ಜನ ತೀವ್ರ ಸಮಸ್ಯೆ ಅನುಭವಿಸಿದರು. ಖಾಸಗಿಯಾಗಿ ಅಲ್ಲಲ್ಲಿ ಕೊಳವೆಬಾವಿ ಕೊರೆಸಿಕೊಂಡು ನೀರಿನ ದಾಹ ತೀರಿಸಿಕೊಂಡರು.
ಪ್ರಭಾರ ಪೌರಾಯುಕ್ತರಿಂದ ಚಲಾವಣೆ!
ಯಾದಗಿರಿ ನಗರಸಭೆಯಲ್ಲಿ ನಿಯೋಜನೆ ಮೇಲೆ ಪೌರಾಯುಕ್ತರಾಗಿದ್ದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಸಂಗಪ್ಪ ಉಪಾಸೆ ನಗರಸಭೆ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ ನಗರದ ಸ್ವಚ್ಛತೆ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಈ ದೃಷ್ಟಿಯಿಂದ ಮತ್ತು ಅಧಿಕಾರಿ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿ ಅವರು ಉಪಾಸೆ ಅವರನ್ನು ಯಾದಗಿರಿ ನಗರಸಭೆಯ ಪೌರಾಯುಕ್ತರ ಹುದ್ದೆಯಿಂದ ಬಿಡುಗಡೆ ಮಾಡಿದ್ದರು. ನಂತರ ಅವರ ಸ್ಥಾನಕ್ಕೆ ಉಪವಿಭಾಗಾಧಿಕಾರಿ ಹಂಪಣ್ಣ ಸಜ್ಜನ ಅವರನ್ನು ನೇಮಿಸಲಾಗಿತ್ತು. ತದನಂತರ ಆಡಳಿತಾತ್ಮಕ ಹಿತದೃಷ್ಟಿಯಿಂದ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಲಕ್ಷ್ಮೀಕಾಂತ ಅವರನ್ನು ಪ್ರಭಾರ ಪೌರಾಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.