ADVERTISEMENT

ವಿಶ್ವಾರಾಧ್ಯರ ಅದ್ಧೂರಿ ರಥೋತ್ಸವ ನಾಳೆ

ಪುರಾಣ ಪ್ರವಚನ,ಪಲ್ಲಕ್ಕಿ ಉತ್ಸವ, ಮಂಗಲವಾದ್ಯ, ಪುರವಂತರ ಸೇವೆ ಜಾತ್ರಾ ವಿಶೇಷ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2019, 15:51 IST
Last Updated 9 ಮಾರ್ಚ್ 2019, 15:51 IST
ಯಾದಗಿರಿ ತಾಲ್ಲೂಕಿನ ಅಬ್ಬೆತುಮಕೂರು ವಿಶ್ವಾರಾಧ್ಯರ ಮಠಕ್ಕೆ ಬಣ್ಣ ಬಳಿಯಲಾಗಿದೆ
ಯಾದಗಿರಿ ತಾಲ್ಲೂಕಿನ ಅಬ್ಬೆತುಮಕೂರು ವಿಶ್ವಾರಾಧ್ಯರ ಮಠಕ್ಕೆ ಬಣ್ಣ ಬಳಿಯಲಾಗಿದೆ   

ಯಾದಗಿರಿ: ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಅಬ್ಬೆತುಮಕೂರಿನ ವಿಶ್ವಾರಾಧ್ಯರ ರಥೋತ್ಸವ ಮಾರ್ಚ್ 11ರಂದು ಸಂಜೆ 6.30ಕ್ಕೆ ಅದ್ಧೂರಿಯಾಗಿ ಜರುಗಲಿದೆ.

ಅಂದು ಬೆಳಿಗ್ಗೆ ಸೂರ್ಯೋದಯವಾಗುತ್ತಲೇ ವಿಶ್ವಾರಾಧ್ಯರ ಕರ್ತೃಗದ್ದುಗೆಗೆ ಗೋರಟಾ ಸಂಗೀತ ಬಳಗದವರಿಂದ ವಿಶೇಷ ರುದ್ರಾಭಿಷೇಕ ನಡೆಯಲಿದೆ. ನಂತರ 11 ದಿವಸಗಳಿಂದ ಸಾಗಿಬಂದ ವಿಶ್ವಾರಾಧ್ಯ ಪುರಾಣ, ಪಲ್ಲಕ್ಕಿ ಉತ್ಸವ ಮೆರವಣಿಗೆ ಮಂಗಳವಾದ್ಯಗಳೊಂದಿಗೆ ಪುರವಂತರ ಸೇವೆ ಜರುಗಲಿದೆ.

ಪ್ರವಚನಕಾರರಾದ ನಾಗಯ್ಯಸ್ವಾಮಿ ವಡಗೇರಾ ಅವರು ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಅವರ ನೇತೃತ್ವದಲ್ಲಿ ವಿಶ್ವಾರಾಧ್ಯರ ಪುರಾಣವನ್ನು ಮಂಗಲಗೊಳಿಸಲಿದ್ದಾರೆ. ತರುವಾಯ ದುಧನಿಯ ಶಂಕರ ಮೇತ್ರಿ ದಂಪತಿ ರಥೋತ್ಸವ ಮಹಾಪೂಜೆ ಮತ್ತು ರಥಾಂಗ ಹೋಮ ನೆರವೇರಿಸಲಿದ್ದಾರೆ.

ADVERTISEMENT

ನಂತರ ಗಂಗಾಧರ ಸ್ವಾಮೀಜಿ ತೇರಿಗೆ ವಿಶೇಷ ಪೂಜೆ ನೆರವೇರಿಸಿ, ಕಳಸವನ್ನು ಆರೋಹಣ ಮಾಡುವರು. ಶ್ರೀಮಠದ ಭಕ್ತರಾದ ಸುಧಾ ಮಲ್ಲಿಕಾರ್ಜುನ ಸಿ. ಬಸರಡ್ಡಿ ಯಕ್ಷಿಂತಿ ಮತ್ತು ಮಲ್ಲಮ್ಮ ಮಲ್ಲಪ್ಪ ಪೂಜಾರಿ ತುಮಕೂರ– ಮಡ್ನಾಳ ಹಾಗೂ ವಿಶ್ವಪ್ರಸಾದರಡ್ಡಿ ರಾಠೋಡ –ಠಾಣಗುಂದಿ ತಾಂಡಾ, ಮಹಾದೇವಿ ದುಂಡಪ್ಪ ಮೊಟಗಿ– ಆಲಗೂರ, ಸಾಬಮ್ಮಗೌಡಸಾನಿ ಸಾಹೇಬಗೌಡ ಪೊಲೀಸ್ ಪಾಟೀಲ– ಸಾದ್ಯಾಪುರ ಅವರು ಪೀಠಾಧಿಪತಿ ಗಂಗಾಧರ ಸ್ವಾಮೀಜಿಗೆ ತುಲಾಭಾರ ಸೇವೆ ನೆರವೇರುವುದು. ಸಂಜೆ 6.30ಕ್ಕೆ ವಿಶ್ವಾರಾಧ್ಯರ ರಥೋತ್ಸವ ಜರುಗಲಿದೆ. ನಂತರ ರಾತ್ರಿ 8ಕ್ಕೆ ಮಾನವ ಧರ್ಮ ಸಮಾವೇಶ ನಡೆಯಲಿದೆ.

ಸ್ವಾಮೀಜಿಗಳ ಸಮಾಗಮ:ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧಿಶ್ವರ 1008 ಜಗದ್ಗುರು ಸಿದ್ಧಲಿಂಗರಾಜ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಗಣಗೇರಿಯ ವಿಶ್ವಾರಾಧ್ಯ ಸ್ವಾಮೀಜಿ, ಸರಡಗಿಯ ರೇವಣಸಿದ್ಧ ಸ್ವಾಮೀಜಿ, ಪಾಳಾದ ಗುರುಮೂರ್ತಿ ಸ್ವಾಮೀಜಿ, ಶಹಾಪುರದ ಸೂಗೂರೇಶ್ವರ ಸ್ವಾಮೀಜಿ, ರಾಯಚೂರಿನ ಅಭಿನವ ರಾಚೋಟಿ ಸ್ವಾಮೀಜಿ, ದೋರನಹಳ್ಳಿಯ ವೀರಮಹಾಂತ ಸ್ವಾಮೀಜಿ, ಹಲಕರ್ಟಿಯ ಮುನಿಂದ್ರ ಸ್ವಾಮೀಜಿ, ಚಿದಾನಂದ ತಾತನವರು ಕದವಳಿವನಮಠ ಸಿದ್ಧರಾಮಪುರ, ಸೋಮೇಶ್ವರ ಶಿವಾಚಾರ್ಯರು ನಾಗಠಾಣ, ಚನ್ನವೀರ ಶಿವಾಚಾರ್ಯರು ಕನ್ಯಾಕೌಳೂರು, ಸಿದ್ಧೇಶ್ವರ ಶಿವಾಚಾರ್ಯರು ಗುಂಬಳಾಪೂರ ಹಿರೇಮಠ ಶಹಾಪುರ, ಮರುಳಮಹಾಂತ ಶಿವಾಚಾರ್ಯರು ಒಕ್ಕಲಗೇರಿ ಹಿರೇಮಠ ಸಗರ, ಶಿವಲಿಂಗ ಶಿವಾಚಾರ್ಯರು ಚಿಕ್ಕಮಠ ದೋರನಹಳ್ಳಿ, ವೀರಭದ್ರ ಶಿವಾಚಾರ್ಯರು ಸಾವಿರದೇವರ ಸಂಸ್ಥಾನಮಠ ಬಿಚ್ಚಾಲಿ ಸೇರಿದಂತೆ ಅನೇಕರು ಸರ್ವಧರ್ಮ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಪಾಟೀಲ ಹುಮನಾಬಾದ ಸಮಾವೇಶ ಉದ್ಘಾಟಿಸುವರು. ಕೋಡಿಮಠ ಸಂಸ್ಥಾನ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ವಿಶ್ವಾರಾಧ್ಯರ ಲೀಲಾ ವಿಲಾಸ ಗ್ರಂಥ ಭಾಗ-2 ಅನ್ನು ಲೋಕಾರ್ಪಣೆಗೊಳಿಸುವರು. ತೋಟಗಾರಿಕೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಅಧ್ಯಕ್ಷತೆ ವಹಿಸುವರು.

ರಾಜ್ಯ ಕೊಳೆಗೇರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗನಗೌಡ ಕಂದಕೂರ, ಶಾಸಕರಾದ ವೆಂಕಟರಡ್ಡಿ ಮುದ್ನಾಳ, ಅಕ್ಕಲಕೋಟ್ ಸಿದ್ದರಾಮ ಮೇತ್ರೆ, ಶರಣಬಸಪ್ಪಗೌಡ ದರ್ಶನಾಪುರ, ಡಾ.ಅಜಜ್‌ಸಿಂಗ್, ಮಾಜಿ ಸಚಿವರಾದ ಡಾ.ಎ.ಬಿ.ಮಾಲಕರಡ್ಡಿ, ಡಾ.ಶರಣಪ್ರಕಾಶ ಪಾಟೀಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಪಾಟೀಲ ವಜ್ಜಲ್ ಭಾಗವಹಿಸಲಿದ್ದಾರೆ.

ದಿವ್ಯದೃಷ್ಟಿಯ ಘನ ಪಂಡಿತ
ವಿಶ್ವಾರಾಧ್ಯರು ಜೇವರ್ಗಿ ತಾಲ್ಲೂಕಿನ ಗಂವ್ಹಾರ ಗ್ರಾಮದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಾಲಮಾನದಲ್ಲಿ ಜನಿಸಿದ್ದಾರೆ. ಸಹೋದರ ಬಸಪ್ಪಶಾಸ್ತ್ರಿಗಳೊಂದಿಗೆ ಕಾಶಿಯಲ್ಲಿ ವೇದಾಧ್ಯಯನ ಮಾಡಿದ ನಂತರ ಸಮಾಜ ಸುಧಾರಕರಾಗುತ್ತಾರೆ. ಲೋಕಕಲ್ಯಾಣಕ್ಕಾಗಿ ಅನೇಕ ಮಹಾ ಪವಾಡಗಳನ್ನು ಮಾಡುತ್ತಾರೆ.

ವಿಶ್ವಾರಾಧ್ಯರ ಲೋಕಕಲ್ಯಾಣ ಖ್ಯಾತಿ ಪಸರಿಸಿದಂತೆ ಅಬ್ಬೆತುಮಕೂರಿನ ಮಾಲಿ ಸಕ್ರಮಗೌಡನ ಕವಿಗೂ ಬೀಳುತ್ತದೆ. ಸಂತಾನ ಭಾಗ್ಯ ಇಲ್ಲದ ಸಕ್ರಪ್ಪಗೌಡ ವಿಶ್ವಾರಾಧ್ಯರ ಆಶೀರ್ವಾದ ಪಡೆದು ಸಂತಾನ ಪೆಡೆಯುತ್ತಾರೆ. ನಂತರ ಅವರ ಪರಮ ಭಕ್ತರಾಗುತ್ತಾರೆ. ಘನ ಪಂಡಿತರಾದ ವಿಶ್ವಾರಾಧ್ಯರನ್ನು ಗ್ರಾಮಕ್ಕೂ ಕರೆತರುತ್ತಾರೆ.

ಶಹಾಬಾದ್‌ನಿಂದ ಅಬ್ಬೆತುಮಕೂರಿಗೆ ಬರುವಾಗ ಯಾದಗಿರಿಯಲ್ಲಿನ ಮಹಾತ್ಮಗಾಂಧಿ ವೃತ್ತದಲ್ಲಿ ಇದ್ದಕ್ಕಿದ್ದಂತೆ ವಿಶ್ವಾರಾಧ್ಯರು ರಾಜನ ಪೋಷಾಕು ತೊಟ್ಟು ನರ್ತಿಸುತ್ತಾರೆ. ಜನರು ಅವರನ್ನು ಕಂಡು ಗೇಲಿ ಮಾಡುತ್ತಾರೆ. ಮರುದಿನವೇ ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಲಭಿಸುತ್ತದೆ. ದೇಶ ಸ್ವತಂತ್ರಗೊಂಡ ಸಂಕೇತವಾಗಿ ಈ ರೀತಿ ನರ್ತಿಸಿದ್ದರು ಎಂಬುದು ಜನರಿಗೆ ಗೊತ್ತಾಗುತ್ತದೆ. ದಿವ್ಯದೃಷ್ಟಿಯ ಮಹಾಮಹೀಮ ವಿಶ್ವಾರಾಧ್ಯರು ನಂತರ ಅಬ್ಬೆತುಮಕೂರಿನಲ್ಲಿ ನೆಲೆಯೂರುತ್ತಾರೆ.

ವಿಶ್ವಾರಾಧ್ಯರ ಮಠವನ್ನು ಗಂಗಾಧರ ಸ್ವಾಮೀಜಿ ಜೀರ್ಣೋದ್ಧಾರಗೊಳಿಸಿ ಜನರ ಆಕರ್ಷಣೆ ಪಡೆಯುವಂತೆ ಮಾಡಿದ್ದಾರೆ. ವಿಶ್ವಾರಾಧ್ಯರ ಹೆಸರಿನಲ್ಲಿಯ ರಥ ಕೂಡ ಅಷ್ಟೇ ಆಕ್ಷಣೀಯವಾಗಿದೆ. ಮಾರ್ಚ್.11ರಂದು ಇಳಿಸಂಜೆ ಈ ರಥೋತ್ಸವವನ್ನು ಲಕ್ಷಾಂತರ ಜನರು ಕಣ್ತುಂಬಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.