ADVERTISEMENT

ಯಾದಗಿರಿ | ಹೋಟೆಲ್ ವ್ಯಾಪಾರ ಶೇ 70ರಷ್ಟು ಕುಸಿತ

ಇನ್ನೂ ದೂರವಾಗದ ಭಯ: ವಾರ ಕಳೆದರೂ ಹೆಚ್ಚಳವಾಗದ ವಹಿವಾಟು

ಬಿ.ಜಿ.ಪ್ರವೀಣಕುಮಾರ
Published 15 ಜೂನ್ 2020, 16:03 IST
Last Updated 15 ಜೂನ್ 2020, 16:03 IST
ಯಾದಗಿರಿಯ ಹೋಟೆಲ್‌ ಒಂದರಲ್ಲಿ ಬೆರಳೆಣಿಕೆಯ ಗ್ರಾಹಕರು ಇರುವುದು
ಯಾದಗಿರಿಯ ಹೋಟೆಲ್‌ ಒಂದರಲ್ಲಿ ಬೆರಳೆಣಿಕೆಯ ಗ್ರಾಹಕರು ಇರುವುದು   

ಯಾದಗಿರಿ: ಜಿಲ್ಲೆಯಲ್ಲಿ ಹೋಟೆಲ್‌ಗಳು ಆರಂಭವಾಗಿ ವಾರ ಕಳೆದರೂ ನಿರೀಕ್ಷಿತ ಪ್ರಮಾಣದಲ್ಲಿ ವ್ಯಾಪಾರ ನಡೆಯುತ್ತಿಲ್ಲ. ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಹೋಟೆಲ್, ಖಾನಾವಳಿಗಳು ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ.

ಜೂನ್ 8 ರಿಂದ ದೊಡ್ಡ ಹೋಟೆಲ್‌ಗಳು ಮಾತ್ರ ಆರಂಭವಾಗಿದ್ದು, ಸಣ್ಣಪುಟ್ಟ ಹೋಟೆಲ್‌ಗಳು ಇನ್ನೂ ಬಾಗಿಲು ತೆರೆದಿಲ್ಲ. ಆರಂಭವಾಗಿರುವ ಹೋಟೆಲ್‌ಗಳಲ್ಲಿ ಶೇ 30ರಷ್ಟು ಮಾತ್ರ ವಹಿವಾಟು ನಡೆಯುತ್ತಿದೆ.

ಕೊರೊನಾ ಭಯದಿಂದ ಗ್ರಾಹಕರು ಹೋಟೆಲ್‌ಗಳತ್ತ ಮುಖ ಮಾಡುತ್ತಿಲ್ಲ ಎನ್ನುತ್ತಾರೆ ಹೋಟೆಲ್‌ಗಳ ಮಾಲೀಕರು.

ADVERTISEMENT

ನಗರದಲ್ಲಿರುವ ದೊಡ್ಡ ಹೋಟೆಲ್‌ಗಳಲ್ಲಿ ಬಾಣಸಿಗರ ಕೊರತೆ ಉಂಟಾಗಿದೆ. ಲಾಕ್‌ಡೌನ್ ಪರಿಣಾಮ ಉತ್ತರ ಭಾರತದ ಬಾಣಸಿಗರು ತಮ್ಮ ಊರುಗಳಿಗೆ ತೆರಳಿದ್ದಾರೆ. ಹೀಗಾಗಿ ಹೋಟೆಲ್‌ಗಳಲ್ಲಿ ಉತ್ತರ ಭಾರತ ಶೈಲಿಯ ಊಟ ಸಿಗುತ್ತಿಲ್ಲ. ಗ್ರಾಹಕರು ಕೇಳುತ್ತಿದ್ದರೂ ಬಾಣಸಿಗರು ಇಲ್ಲದಿದ್ದರಿಂದ ಊಟ ನೀಡಲಾಗುತ್ತಿಲ್ಲ ಎಂದು ಹೋಟೆಲ್ ಮಾಲೀಕರು ತಿಳಿಸಿದರು.

ಕೊರೊನಾ ಭೀತಿಯಿಂದ ಬಹುತೇಕ ಹೋಟೆಲ್‌ಗಳಲ್ಲಿ ಸ್ಟೀಲ್ ತಟ್ಟೆ ಬದಲಾಗಿ ಪ್ಲಾಸ್ಟಿಕ್ ತಟ್ಟೆ, ಚಮಚ, ಗ್ಲಾಸ್ ಬಳಕೆ ಮಾಡಲಾಗುತ್ತಿದೆ. ಚಹಾಕ್ಕೂ ಪೇಪರ್‌ ಲೋಟ ಬಳಕೆ ಮಾಡುತ್ತಿದ್ದಾರೆ.

ಪ್ಲಾಸ್ಟಿಕ್ ತಟ್ಟೆ ಲೋಟವನ್ನು ಸುಲಭವಾಗಿ ವಿಲೇವಾರಿ ಮಾಡಬಹುದು. ಅಲ್ಲದೆ, ತೊಳೆಯುವ ತಾಪತ್ರಯ ಇರುವುದಿಲ್ಲ. ಗ್ರಾಹಕರು ಬಯಸಿದರೆ ಮಾತ್ರ ಸ್ಟೀಲ್ ತಟ್ಟೆ ನೀಡುತ್ತೇವೆ ಎನ್ನುತ್ತಾರೆ ಎನ್‌ವಿಎಂ ಹೋಟೆಲ್ ಮಾಲೀಕ ಮಹೇಶ ಪಾಟೀಲ.

ಹೋಟೆಲ್‌ಗಳಲ್ಲಿ ಕುಳಿತು ಊಟ ಮಾಡುವವರು ಕಡಿಮೆಯಾಗಿದ್ದಾರೆ. ಜತೆಗೆ ಪಾರ್ಸೆಲ್ ತೆಗೆದುಕೊಂಡು ಹೋಗುವವರ ಸಂಖ್ಯೆಯೂ ಕಡಿಮೆ ಆಗಿದೆ. ಲಾಕ್‌ಡೌನ್ ಸಡಿಲಿಕೆ ಆಗಿದೆ ಎರಡು ವಾರ ಕಳೆದರೂ ವ್ಯಾಪಾರ ಚೇತರಿಕೆಯಾಗುತ್ತಿಲ್ಲ ಎನ್ನುತ್ತಾರೆ ಹೋಟೆಲ್‌ಗಳ
ಮಾಲೀಕರು.

ನಗರದ ರೈಲು ನಿಲ್ದಾಣ ರಸ್ತೆಯಲ್ಲಿ ಹಲವು ಹೋಟೆಲ್‌ ಮತ್ತು ಖಾನಾವಳಿಗಳಿವೆ. ಅಲ್ಲದೆ, ತಳ್ಳುಗಾಡಿಗಳಲ್ಲಿಯೂ ವ್ಯಾಪಾರ ನಡೆಯುತ್ತಿತ್ತು. ರೈಲು ಸೇವೆ ಬಂದ್‌ ಆಗಿದ್ದರಿಂದ ವ್ಯಾಪಾರಕ್ಕೆ ದೊಡ್ಡ ಹೊಡೆತ ನೀಡಿದೆ.

‘ಮಧ್ಯಾಹ್ನ ವೇಳೆ ಖಾನಾವಳಿ ಗ್ರಾಹಕರಿಂದ ತುಂಬಿ ತುಳುಕುತ್ತಿತ್ತು. ರೈಲಿನಲ್ಲಿ ಬರುವವರು ಕಾಯಂ ಆಗಿ ನಮ್ಮಲ್ಲಿ ಊಟ ಮಾಡುತ್ತಿದ್ದರು. ಈಗ ಎಲ್ಲವೂ ಬಂದ್‌ ಆಗಿವೆ. ಆಹಾರ ಧಾನ್ಯಗಳ ಬೆಲೆ ಏರಿಕೆಯಾಗಿದ್ದರೂದರ ಹೆಚ್ಚಳ ಮಾಡಿಲ್ಲ. ಈಗಿರುವ ದರಕ್ಕೆ ಗ್ರಾಹಕರು ಬರುತ್ತಿಲ್ಲ. ನಮ್ಮಲ್ಲಿ ಪ್ಲೇಟ್‌ ಊಟ ₹70 ದರ ಇದೆ’ ಎಂದು ಸುಗೂರೇಶ್ವರ ಭೋಜನಾಲಯದ ಮಾಲೀಕ ಬಸವರಾಜ ಹವಲ್ದಾರ್ ಹೇಳುತ್ತಾರೆ.

ಗ್ರಾಮೀಣ ಭಾಗದಲ್ಲಿ ಬಸ್‌ ಓಡಾಟ ಇದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ಮದುವೆ ಮತ್ತಿತರ ಕಾರ್ಯಕ್ರಮಗಳು ಇಲ್ಲ. ಹೀಗಾಗಿ ವ್ಯಾಪಾರ ಇಲ್ಲದಂತಾಗಿದೆ ಎಂದು ಶಿರಡಿ ಸಾಯಿ ರೆಸ್ಟೊರೆಂಟ್‌ ಮಾಲೀಕ ಆನಂದ ಶೆಟ್ಟಿ ಅವರು ಹೇಳಿದರು.

ಬೆಳಿಗ್ಗೆ 11:30 ರಿಂದ 4 ಗಂಟೆಗೆ ಊಟ ಸಿಗುತ್ತದೆ. ಆದರೆ, ಗ್ರಾಹಕರು ಇಲ್ಲ. 30ರಿಂದ 40 ಪ್ಲೇಟ್‌ ಮಾರಾಟವಾದರೆ ಅದೇ ಹೆಚ್ಚು ಎಂದುಸುಗೂರೇಶ್ವರ ಭೋಜನಾಲಯದಬಸವರಾಜ ಹವಾಲ್ದಾರ್ ಹೇಳಿದರು.

ಬಹಳ ವರ್ಷಗಳಿಂದ ಸೂಗೂರೇಶ್ವರ ಭೋಜನಾಲಯಕ್ಕೆ ಬರುತ್ತಿದ್ದೇನೆ. ಲಾಕ್‌ಡೌನ್‌ಗೆ ಮುಂಚೆ ಇದ್ದಂತೆ ಅದೇ ರುಚಿ ಕಾಪಾಡಿಕೊಂಡಿದ್ದಾರೆ. ಪ್ಲಾಸ್ಟಿಕ್‌ ತಟ್ಟೆಯಲ್ಲಿ ಊಟ ನೀಡುತ್ತಿದ್ದಾರೆ ಎಂದು ಗ್ರಾಹಕಮಂಜುನಾಥ ಸಾಹುಕಾರ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.