ಕಕ್ಕೇರಾ: ಪಟ್ಟಣ ಸಮೀಪದ ಜುಟ್ಲರದೊಡ್ಡಿಯಲ್ಲಿ ಸೋಮವಾರ ಆಕಸ್ಮಿಕ ಬೆಂಕಿಯಿಂದ 3 ಮನೆಗಳು ಸುಟ್ಟು ಕರಕಲಾಗಿವೆ.
ಗ್ರಾಮದ ಹುಲಗಪ್ಪ ಜುಟ್ಲರಮಡ್ಡಿ, ಮಲ್ಲಪ್ಪ ಜುಟ್ಲರಮಡ್ಡಿ, ಪರಮಣ್ಣ ಜುಟ್ಲರಮಡ್ಡಿ ಅವರಿಗೆ ಸೇರಿದ ಮನೆಗಳು ಆಕಸ್ಮಿಕ ಬೆಂಕಿಯಿಂದ ಸಂಪೂರ್ಣ ಹಾನಿಯಾಗಿದ್ದು, ಸ್ಥಳೀಯರು ಎಲ್‌ಪಿಜಿ ಗ್ಯಾಸ್ ಹೊರ ತೆಗೆದು ಹೆಚ್ಚಿನ ಹಾನಿ ತಪ್ಪಿಸಿದ್ದಾರೆ. ಮೂರು ಮನೆಗಳಲ್ಲಿ ಆಹಾರ ಧಾನ್ಯ, ವಸ್ತ್ರಗಳು, ಬಂಗಾರ, ಬೆಳ್ಳಿ, ಹಣ, ಕಂಚು ಸೇರಿದಂತೆ ಸುಮಾರು ₹10 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ ಎಂದು ಸಂತ್ರಸ್ತ ಕುಟುಂಬಗಳು ತಿಳಿಸಿವೆ.
ಹಾನಿಯಾದ ಸ್ಥಳಕ್ಕೆ ಸುರಪುರ ಅಗ್ನಿಶಾಮಕ ದಳ ಸಿಬ್ಬಂದಿ, ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಶೆಟ್ಟಿ, ಪೊಲೀಸ್ ಸಿಬ್ಬಂದಿ ಚಂದ್ರಾಮಪ್ಪ, ಕೆಪಿಸಿಸಿ ಸದಸ್ಯ ಗುಂಡಪ್ಪ ಸೋಲಾಪುರ, ಬಸವರಾಜ ಕಟ್ಟಿಮನಿ, ಗುಡದಪ್ಪ ಬಿಳೇಭಾವಿ, ಮರೆಪ್ಪ ಕಾಂಗ್ರೆಸ್, ಬಸವರಾಜ ಹೊಸ್ಮನಿ ಸೇರಿದಂತೆ ಅನೇಕರು ಭೇಟಿ ನೀಡಿದರು.
ಪರಿಹಾರಕ್ಕೆ ಆಗ್ರಹ: ದಲಿತ ಸಮುದಾಯದ ಮೂರು ಕುಟುಂಬಗಳಿಗೆ ಆಕಸ್ಮಿಕ ಬೆಂಕಿಯಿಂದ ಅಪಾರ ಹಾನಿಯಾಗಿದ್ದು, ಶೀಘ್ರವೇ ಶಾಸಕರು, ಸಚಿವರು ಪರಿಹಾರ ನೀಡಬೇಕು ಎಂದು ದಲಿತ ಮುಖಂಡ ಗುಡದಪ್ಪ ಬಿಳೇಭಾವಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.