ADVERTISEMENT

ಗುರುಮಠಕಲ್: ಆಕಸ್ಮಿಕವಾಗಿ ಹಾರಿದ ಗುಂಡು, ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 1 ಜೂನ್ 2022, 4:31 IST
Last Updated 1 ಜೂನ್ 2022, 4:31 IST
ಸಾಬರೆಡ್ಡಿ ಭೀಮರಾಯ ಮಲ್ಲೆಪಲ್ಲಿ (24), ಬಂಧಿತ ಆರೋಪಿ
ಸಾಬರೆಡ್ಡಿ ಭೀಮರಾಯ ಮಲ್ಲೆಪಲ್ಲಿ (24), ಬಂಧಿತ ಆರೋಪಿ   

ಗುರುಮಠಕಲ್: ರಾತ್ರಿ ವೇಳೆ ಜಮೀನಿನಲ್ಲಿ ಮಲಗಿದ್ದಾಗ ಮದ್ದು ತುಂಬಿದ್ದ ಕೋವಿನಿಂದ ಗುಂಡು ಸಿಡಿದು ವ್ಯಕ್ತಿಯೊಬ್ಬರಿಗೆ ತೀವ್ರ ಗಾಯವಾದ ಘಟನೆಗೆ ಸಂಬಂಧಿಸಿದಂತೆ ಗುರುಮಠಕಲ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ತಾಲ್ಲೂಕಿನ ಪಸಪೂಲ ಗ್ರಾಮದ ಸಾಬರೆಡ್ಡಿ ಭೀಮರಾಯ ಮಲ್ಲೆಪಲ್ಲಿ (24) ಬಂಧಿತ ಆರೋಪಿ.

ಘಟನೆಯ ವಿವರ: ಕಳೆದ ಗುರುವಾರ ತಾಲ್ಲೂಕಿನ ಅರಕೇರಾ (ಕೆ) ಗ್ರಾಮದ ಚಂದ್ರಪ್ಪ ಲಕ್ಷ್ಮಣ ಚವ್ಹಾಣ ಅವರು ರಾತ್ರಿ ವೇಳೆ ಊಟದ ನಂತರ ತಮ್ಮ ಜಮೀನಿನ ಕೊಳವೆಬಾವಿಯ ಹತ್ತಿರ ಹೋಗಿದ್ದಾರೆ. ಪಕ್ಕದ ಜಮೀನಿನವರಾದ ಪಸಪೂಲ ಗ್ರಾಮದ ಸಾಬರೆಡ್ಡಿ ಭೀಮರಾಯ ಮಲ್ಲೆಪಲ್ಲಿ ತಮ್ಮ ಪರವಾನಿಗೆಯಿಲ್ಲದ ಕೋವಿಗೆ ಮದ್ದು ತುಂಬಿ ಜಮೀನಿಗೆ ಹೋಗಿದ್ದಾರೆ.

ADVERTISEMENT

ಇಬ್ಬರ ಜಮೀನುಗಳು ಅಕ್ಕಪಕ್ಕದಲ್ಲಿದ್ದು, ಅಂದು ಇಬ್ಬರೂ ಜಮೀನಿನಲ್ಲೆ ಮಲಗಿದ್ದಾರೆ. ಆದರೆ, ನಿದ್ದೆಯಲ್ಲಿ ಆಕಸ್ಮಿಕವಾಗಿ ಕೋವಿಗೆ ಸಾಬರೆಡ್ಡಿ ಕೈ ತಾಕಿದ್ದರಿಂದ ಕೋವಿಯಿಂದ ಗುಂಡು ಹಾರಿದ್ದು, ಚಂದ್ರಪ್ಪ ಲಕ್ಷ್ಮಣ ಚವ್ಹಾಣ ಅವರ ಬಲಪಕ್ಕೆಗೆ ತಾಕಿದೆ. ತೀವ್ರ ಗಾಯಗೊಂಡ ಚಂದ್ರಪ್ಪ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿಯ ಯುನೈಟೆಡ್ ಆಸ್ಪತ್ರೆಗೆ ಕಳುಹಿಸಲಾಗಿದೆ ಗಾಯಾಳುವಿನ ಪತ್ನಿ ಜೈನಾಬಾಯಿ ಭಾನುವಾರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣದ ಕುರಿತು ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಅವರ ಮಾರ್ಗದರ್ಶನದಲ್ಲಿ ಪಿಐ ಖಾಜಾ ಹುಸೇನ್, ದೇವೀಂದ್ರಪ್ಪ, ಖಾದರ್ ಪಟೇಲ್, ಮಹ್ಮದ್ ಶರೀಫ್ ಅವರ ತಂಡ ಮಂಗಳವಾರ ಬಂಧಿಸಿದ್ದು, ಆರೋಪಿಯಿಂದ ಪರವಾನಿಗೆ ಇಲ್ಲದ ಕೋವಿ, ಮದ್ದಿನ ಪುಡಿ ಹಾಗೂ 11 ಚರಾ (ಲೋಹದ ಗುಂಡುಗಳು) ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಪೊಲೀಸ್ ಸಿಬ್ಬಂದಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.