ADVERTISEMENT

ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದರೆ ಕ್ರಮ: ಜಿಲ್ಲಾಧಿಕಾರಿ ಡಾ.ಸುಶೀಲಾ

ರೈತರ ಹಿತ ಕಾಯಲು ಜಿಲ್ಲಾಡಳಿತ ಬದ್ಧ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2023, 16:09 IST
Last Updated 16 ಆಗಸ್ಟ್ 2023, 16:09 IST
ಯಾದಗಿರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತೊಗರಿ ಬೆಳೆ ಉತ್ಪಾದಕತೆ ಹೆಚ್ಚಿಸುವ ನಿಟ್ಟಿನಲ್ಲಿ ರೈತರು ಕೈಗೊಳ್ಳಬೇಕಾದ ಸೂಕ್ತ ಕ್ರಮಗಳ ಪ್ರಕಟಣೆಯ ಭಿತ್ತಿಪತ್ರಗಳನ್ನು ಅಧಿಕಾರಿಗಳು ಬಿಡುಗಡೆಗೊಳಿಸಿದರು
ಯಾದಗಿರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತೊಗರಿ ಬೆಳೆ ಉತ್ಪಾದಕತೆ ಹೆಚ್ಚಿಸುವ ನಿಟ್ಟಿನಲ್ಲಿ ರೈತರು ಕೈಗೊಳ್ಳಬೇಕಾದ ಸೂಕ್ತ ಕ್ರಮಗಳ ಪ್ರಕಟಣೆಯ ಭಿತ್ತಿಪತ್ರಗಳನ್ನು ಅಧಿಕಾರಿಗಳು ಬಿಡುಗಡೆಗೊಳಿಸಿದರು   

ಯಾದಗಿರಿ: ರೈತರ ಹಿತ ಕಾಯಲು ಜಿಲ್ಲಾಡಳಿತ ಬದ್ಧವಾಗಿದ್ದು, ರೈತರ ಕೃಷಿ ಚಟುವಟಿಕೆಗಳಿಗೆ ಕೊರತೆಯಾಗದಂತೆ ನಿಗಾವಹಿಸಿ ರೈತರಿಂದ ಯಾವುದೇ ದೂರು ಬರದಂತೆ ಕ್ರಮವಹಿಸಬೇಕು. ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ, ದಾಸ್ತಾನು ನಿರ್ವಹಣೆ ಸಭೆ, ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಪ್ರಗತಿ ಪರಿಶೀಲನಾ ಸಭೆ, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನ ಸಭೆ, ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಒಂದು ಜಿಲ್ಲೆ ಒಂದು ಉತ್ಪನ್ನ ಕಾರ್ಯಕ್ರಮದ ಜಿಲ್ಲಾಮಟ್ಟದ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಕೃಷಿ ಇಲಾಖೆ ಅಧಿಕಾರಿಗಳು ಪ್ರತಿದಿನ ರೈತರನ್ನು ಭೇಟಿ ಮಾಡಿ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅಲ್ಲದೇ, ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಿಗೆ ನಿಯಮಿತವಾಗಿ ಭೇಟಿ ನೀಡಿ ಬಿತ್ತನೆ ಬೀಜ, ರಸಗೊಬ್ಬರದ ದಾಸ್ತಾನು ವಿವರ ಹಾಗೂ ದರಗಳನ್ನು ಸೂಚನಾ ಫಲಕಗಳಲ್ಲಿ ಪ್ರಚುರಪಡಿಸಿರುವ ಕುರಿತು ಪರಿಶೀಲಿಸಬೇಕು. ರೈತರಿಗೆ ಕಳಪೆ ಬೀಜ, ರಸಗೊಬ್ಬರ ಮಾರಾಟವಾಗದಂತೆ ಕಟ್ಟುನಿಟ್ಟಿನ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಪ್ರಸ್ತುತ ಹಂಗಾಮಿಗೆ ಭತ್ತ, ತೊಗರಿ, ಹೆಸರು, ಉದ್ದು 16 ರೈತ ಸಂಪರ್ಕ ಕೇಂದ್ರಗಳ ಮೂಲಕ 1,920 ಕ್ವಿಂಟಲ್ ಬಿತ್ತನೆ ಬೀಜಗಳನ್ನು 34,018 ರೈತರಿಗೆ ವಿತರಿಸಲಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಏಪ್ರಿಲ್‌ನಿಂದ ಆಗಸ್ಟ್ ವರೆಗೆ 1,01,151 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳ ಬೇಡಿಕೆ ಇದ್ದು ಇಲ್ಲಿಯವರೆಗೆ 1,27,079 ಮೆಟ್ರಿಕ್‌ ಟನ್ ರಷ್ಟು ಪೂರೈಕೆಯಾಗಿದ್ದು, 67,825 ಮೆಟ್ರಿಕ್‌ ಟನ್‌ನಷ್ಟು ಜಿಲ್ಲೆಯ ರಸಗೊಬ್ಬರ ವಿತರಕರಲ್ಲಿ ದಾಸ್ತಾನು ಇದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ತೊಗರಿ, ಹತ್ತಿ ಬೆಳೆಗಳಿಗೆ ರೈತರು ಯೂರಿಯಾ ರಸಗೊಬ್ಬರ ಹೆಚ್ಚು ಬಳಸುವುದರಿಂದ ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರದ ಕೊರತೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಜಿಲ್ಲೆಗೆ ಹೆಚ್ಚಿನ ರಸಗೊಬ್ಬರದ ಅವಶ್ಯಕತೆ ಇದ್ದು, ಕೊರತೆಯಾಗದಂತೆ ನೋಡಿಕೊಳ್ಳಲು ರೈತ ಸಂಘದ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ರೈತ ಮುಖಂಡರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಜಿಲ್ಲೆಗೆ ನಿಗದಿಪಡಿಸಿದ ರಸಗೊಬ್ಬರ ಪೂರೈಕೆದಾರ ಸಂಸ್ಥೆಗಳು ಸಕಾಲದಲ್ಲಿ ಜಿಲ್ಲೆಯ ವಿತರಕರಿಗೆ ನೀಡಬೇಕು. ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ನೀಡಬಾರದು. ಈ ರೀತಿ ಕಂಡುಬಂದಲ್ಲಿ ಸಂಬಂಧಿಸಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಭೆಯಲ್ಲಿದ್ದ ರಸಗೊಬ್ಬರ ಪೂರೈಕೆದಾರರ ಪ್ರತಿನಿಧಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.

ರೈತರಿಗೆ ರಸಗೊಬ್ಬರದ ಜೊತೆಗೆ ಒತ್ತಾಯ ಪೂರ್ವಕವಾಗಿ ರೈತರಿಗೆ ಬೇಡದ ರಸಗೊಬ್ಬರಗಳನ್ನು ನೀಡಬಾರದು. ರೈತರಿಗೆ ಯಾರು ಮೋಸ ಮಾಡದಂತೆ ಕಾಲ ಕಾಲಕ್ಕೆ ಕೃಷಿ ಇಲಾಖೆಯ ಅಧಿಕಾರಿಗಳು ಪರಿಕರ ವಿತರಕರ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದರು.

ಪ್ರಸ್ತುತ ಹಂಗಾಮಿನಲ್ಲಿ ಯೂರಿಯಾ ಹಾಗೂ ಇತರೆ ರಸಗೊಬ್ಬರ ಕೊರತೆಯಾಗದಂತೆ ಕ್ರಮವಹಿಸಲಾಗುವುದು ಎಂದು ರೈತರ ಹಿತಾಶಕ್ತಿ ಕಾಪಾಡುವಲ್ಲಿ ಎಲ್ಲಾ ವಿತರಕರು ಪೂರೈಕೆದಾರರು ಮತ್ತು ಇಲಾಖೆ ಅಧಿಕಾರಿಗಳು ಶ್ರಮಿಸಬೇಕು. ಮುಖ್ಯವಾಗಿ ನ್ಯಾನೋ ಯೂರಿಯಾ ಬಳಕೆ ಕುರಿತು ರೈತರಲ್ಲಿ ಹೆಚ್ಚನ ಅರಿವು ಮೂಡಿಸಬೇಕಾಗಿದೆ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಇದೇ ವೇಳೆ ತೊಗರಿ ಬೆಳೆ ಉತ್ಪಾದಕತೆ ಹೆಚ್ಚಿಸುವ ನಿಟ್ಟಿನಲ್ಲಿ ರೈತರು ಕೈಗೊಳ್ಳಬೇಕಾದ ಸೂಕ್ತ ಕ್ರಮಗಳ ಪ್ರಕಟಣೆಯ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರಿಮಾ ಪಂವಾರ್‌, ಜಂಟಿ ಕೃಷಿ ನಿರ್ದೇಶಕ ಅಬಿದ್ ಎಸ್.ಎಸ್‌, ಕೃಷಿ ಉಪ ನಿರ್ದೇಶಕ ಮುತ್ತುರಾಜ, ತಾಂತ್ರಿಕ ಅಧಿಕಾರಿ ರಾಜುಕುಮಾರ, ತೋಟಗಾರಿಕೆ ಇಲಾಖೆ ಅಧಿಕಾರಿ ಅಜ್ಮುದ್ದಿನ್, ಕೃಷಿ ಪರಿಕರ ಮಾರಾಟಗಾರರ ಸಂಘದ ಜಿಲ್ಲಾಧ್ಯಕ್ಷ ಬಸಣ್ಣಗೌಡ ಮಾಲಿಪಾಟೀಲ, ಯಾದಗಿರಿ ತಾಲ್ಲೂಕು ಅಧ್ಯಕ್ಷ ಸಂಗಾರೆಡ್ಡಿ ಪಾಟೀಲ, ಹುಣಸಗಿ ಅಧ್ಯಕ್ಷ ಶರಣು ಹಾಗೂ ರಸಗೊಬ್ಬರ ಪೂರೈಕೆದಾರರ ಸಂಸ್ಥೆ, ಬೆಳೆ ವಿಮೆ ಸಂಸ್ಥೆಯ ಪ್ರತಿನಿಧಿಗಳು ಇದ್ದರು.

ಜಿಲ್ಲೆಯಲ್ಲಿ ಶೇ 80 ರಷ್ಟು ಬಿತ್ತನೆಯಾಗಿದ್ದು ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ಮಾಹಿತಿಯನ್ನು ತಾವೇ ಬೆಳೆ ಸಮೀಕ್ಷೆ ಆ್ಯಪ್ ಮೂಲಕ ಅಪ್ಲೋಡ್ ಮಾಡುವಂತೆ ರೈತರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು.
ಡಾ.ಸುಶೀಲಾ ಬಿ. ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.