ADVERTISEMENT

ನೀರಿನ ಬವಣೆ ಚರ್ಚೆಗೆ ಪ್ರಮುಖ ಆದ್ಯತೆ

ಬೆಳಗಾವಿ ಅಧಿವೇಶನದತ್ತ ದೌಡಾಯಿಸಿದ ಜಿಲ್ಲೆಯ ಶಾಸಕರು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 13:50 IST
Last Updated 9 ಡಿಸೆಂಬರ್ 2018, 13:50 IST
ವೆಂಕಟರೆಡ್ಡಿಗೌಡ ಮುದ್ನಾಳ
ವೆಂಕಟರೆಡ್ಡಿಗೌಡ ಮುದ್ನಾಳ   

ಯಾದಗಿರಿ:‘ಜಿಲ್ಲೆಯಲ್ಲಿ ಆವರಿಸಿರುವ ಬರ, ಕುಡಿಯುವ ನೀರಿನ ಸಮಸ್ಯೆ ಹಾಗೂ ರೈತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಡಿ.10ರಿಂದ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಪ್ರಮುಖವಾಗಿ ಚರ್ಚಿಸಲಾಗುವುದು’ ಎಂದು ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ತಿಳಿಸಿದರು.

ಅಧಿವೇಶನಕ್ಕೆ ಹೊರಡುವ ಮುನ್ನ ಭಾನುವಾರ ದೂರವಾಣಿಯಲ್ಲಿ ‘ಪ್ರಜಾವಾಣಿ’ಯೊಂದಿಗೆ ಅವರು ಮಾತನಾಡಿದರು.

‘ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆ ಬಂದು ಬಹಳ ವರ್ಷಗಳು ಕಳೆದಿವೆ. ಆದರೆ, ಮತಕ್ಷೇತ್ರದ ಕೊನೆಯ ಭಾಗದ ರೈತರ ಜಮೀನಿಗೆ ನೀರು ತಲುಪುತ್ತಿಲ್ಲ. ಈ ಬಗ್ಗೆ ನೀರಾವರಿ ಸಚಿವರೊಂದಿಗೆ ಚರ್ಚಿಸಿ ಪರಿಹಾರಕ್ಕೆ ಒತ್ತಾಯಿಸಲಾಗುವುದು’ ಎಂದರು.

ADVERTISEMENT

‘ಕೃಷಿ ಪಂಪಸೆಟ್ ಹೊಂದಿದ ರೈತರಿಗೂ ಕೂಡ ಸರಿಯಾಗಿ ವಿದ್ಯುತ್‌ ಪೂರೈಕೆಯಾಗುತ್ತಿಲ್ಲ. ವಿದ್ಯುತ್ ಪರಿವರ್ತಕ ಯಂತ್ರಗಳು ಸುಟ್ಟರೆ ಅವು ಸಕಾಲಕ್ಕೆ ದುರಸ್ತಿಯಾಗುತ್ತಿಲ್ಲ. ಕಾರಣ ಜಿಲ್ಲಾ ಕೇಂದ್ರದಲ್ಲಿ ಇನ್ನೊಂದು ವಿದ್ಯುತ್‌ ಪರಿವರ್ತಕ ದುರಸ್ತಿ ಕೇಂದ್ರ ತೆರೆಯುವ ಜತೆಗೆ ವಡಗೇರಾದಲ್ಲಿ ಕೇಂದ್ರ ಸ್ಥಾಪನೆಗೆ ಒತ್ತಾಯಿಸುತ್ತೇನೆ’ ಎಂದರು.

‘ಜಿಲ್ಲಾ ಕೇಂದ್ರದಲ್ಲಿ ವೈದ್ಯಕೀಯ ಕಾಲೇಜು ಆರಂಭವಾಗಬೇಕು. ಜತೆಗೆ ಅನೇಕ ತಾಂತ್ರೀಕ ಕಾಲೇಜುಗಳು ಸ್ಥಾಪನೆ. ವಡಗೇರಾ, ಬೆಂಡೆಬೆಂಬಳ್ಳಿ ಹಾಗೂ ಹಯ್ಯಾಳ ಗ್ರಾಮದಲ್ಲಿ ಹೊಸ ಪಿಯು ಕಾಲೇಜು ಆರಂಭಿಸುವ ಕುರಿತು ಸದನದಲ್ಲಿ ಪ್ರಶ್ನಿಸುತ್ತೇನೆ’ ಎಂದು ಹೇಳಿದರು.

‘ಈಗಾಗಲೇ ರಾಜ್ಯ ಸರ್ಕಾರ ಎಚ್‌ಕೆಆರ್‌ಡಿಬಿಗೆ ₹1 ಸಾವಿರ ಕೋಟಿ ಅನುದಾನ ಬಿಡುಗಡೆ ಆಗಿದೆ. ಅದು ಸಾಕಾಗುವುದಿಲ್ಲ. ಈ ವಿಷಯ ಬಗ್ಗೆ ಎಲ್ಲಾ ಶಾಸಕರ ಜತೆಗೂಡಿ ಇನ್ನು ₹500 ಕೋಟಿ ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿಯವರ ಮೇಲೆ ಒತ್ತಡ ಹಾಕುತ್ತೇವೆ’ ಎಂದರು.

ಬಯೋಮೆಟ್ರಿಕ್‌ ಕೈಬಿಡಲು ಆಗ್ರಹಿಸುತ್ತೇನೆ: ಕಂದಕೂರ
‘ರಾಜ್ಯದಲ್ಲಿಯೇ ಹೆಚ್ಚು ಗುಳೆ ಹೋಗುವಂತಹ ಏಕೈಕ ಮತಕ್ಷೇತ್ರ ‘ಗುರುಮಠಕಲ್’. ಗುಳೆ ಹೋಗುವಂತಹ ಜನರು ಹೆಚ್ಚಿರುವ ಕಾರಣ ಪಡಿತರ ಪಡೆಯಲು ಬಯೋಮೆಟ್ರಿಕ್‌ ಪದ್ಧತಿ ಅಡ್ಡಿಯಾಗಿದೆ. ಇದು ಹಿಂದುಳಿದ ಪ್ರದೇಶಕ್ಕೆ ಸೂಕ್ತ ಅಲ್ಲ. ಹಾಗಾಗಿ, ಈ ಪದ್ಧತಿ ರದ್ದುಪಡಿಸಿ ಮೊದಲಿನ ಪದ್ಧತಿ ಮುಂದುವರಿಸುವಂತೆ ಸದನದಲ್ಲಿ ಸಿಎಂ ಅವರನ್ನು ಆಗ್ರಹಿಸಲಾಗುವುದು’ ಎಂದು ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ತಿಳಿಸಿದರು.

ಭಾನುವಾರ ದೂರವಾಣಿಯಲ್ಲಿ ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು,‘ಮತಕ್ಷೇತ್ರದ ಗ್ರಾಮಗಳಲ್ಲಿ ವಿದ್ಯುತ್‌ ಸಂಪರ್ಕ ಇರುವುದಿಲ್ಲ. ಅಲ್ಲದೇ ನೆಟ್‌ವರ್ಕ್‌ ಕೂಡ ಇರುವುದಿಲ್ಲ. ಇಂಥಾ ವ್ಯವಸ್ಥೆಯಲ್ಲಿ ಬಯೋಮೆಟ್ರಿಕ್‌ ಪದ್ಧತಿ ಯಶಸ್ವಿ ಸಾಧ್ಯವಿಲ್ಲ. ಆದರೆ, ಬಯೋಮೆಟ್ರಿಕ್‌ ಪದ್ಧತಿಯನ್ನು ಅಧಿಕಾರಿಗಳು ಪಾಲಿಸಬೇಕಾಗಿರುವುದರಿಂದ ಬಡ ಜನರಿಗೆ ಸಕಾಲಕ್ಕೆ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ. ಹಾಗಾಗಿ, ಈ ಪದ್ಧತಿ ಕೈಬಿಡುವಂತೆ ಸದನದಲ್ಲಿ ಆಗ್ರಹಿಸಲಾಗುವುದು’ ಎಂದರು.

‘ಮತಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿಲ್ಲ. ಶುದ್ಧೀಕರಣ ಘಟಕಗಳನ್ನು ಅವಳಡಿಸಿ ಅವುಗಳ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿಗಳಿಗೆ ವಹಿಸಿಕೊಡುವಂತೆ ಒತ್ತಾಯಿಸುತ್ತೇನೆ’ ಎಂದರು.

371ಜೆ ಯಡಿ ವಿಶೇಷ ನೇಮಕ್ಕೆ ಒತ್ತಾಯ: ರಾಜೂಗೌಡ
ಹೈದರಾಬಾದ್‌ ಕರ್ನಾಟಕದಲ್ಲಿ 371ಜೆ ಮೀಸಲಾತಿ ಇದ್ದರೂ, ಹುದ್ದೆ ನೇಮಕದಲ್ಲಿ ಇಲ್ಲಿನವರಿಗೆ ಅನ್ಯಾಯ ಆಗುತ್ತಿದೆ. ಆದ್ದರಿಂದ, ಹುದ್ದೆ ನೇಮಕಾತಿಯಲ್ಲಿ ಈಗಿರುವ ಶೇ10ರಷ್ಟು ಮೀಸಲಾತಿಗೆ ಬದಲಾಗಿ ಶೇ 50ರಷ್ಟು ಮೀಸಲು ನಿಗದಿಪಡಿಸುವಂತೆ ಸದನಲ್ಲಿ ಆಗ್ರಹಿಸಲಾಗುವುದು’ ಎಂದು ಸುರಪುರದ ಶಾಸಕ ನರಸಿಂಹ ನಾಯಕ (ರಾಜೂಗೌಡ) ತಿಳಿಸಿದರು.

‘ಸರ್ಕಾರ 1200 ಪ್ರೌಢಶಾಲೆ ಶಿಕ್ಷಕರ ಹುದ್ದೆ ನೇಮಕಕ್ಕೆ ಅರ್ಜಿ ಆಹ್ವಾನಿಸಿ ಅರ್ಹತಾ ಪರೀಕ್ಷೆ ನಡೆಸಿದೆ. ಅದರಲ್ಲಿ 900 ಮಂದಿ ಅರ್ಹತೆ ಗಳಿಸಿದ್ದಾರೆ. ಅದರಲ್ಲಿ ಹೈದರಾಬಾದ್‌ ಕರ್ನಾಟಕದವರು ಕೇವಲ 100 ಮಂದಿ ಇದ್ದಾರೆ. ವಿಶೇಷ ಮೀಸಲಾತಿ ನಿಗದಿಪಡಿಸಿದರೆ ಹಿಂದುಳಿದ ಈ ಭಾಗದವರಿಗೆ ಅನುಕೂಲ ಆಗಲಿದೆ. ಹಾಗಾಗಿ, ಸದನದಲ್ಲಿ ಈ ಕುರಿತು ಪ್ರಸ್ತಾಪಿಸುತ್ತೇನೆ’ ಎಂದರು.

‘ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಕ್ಷೇತ್ರದ ಸಂಪೂರ್ಣ ಬೇಡಿಕೆಗಳಿಗೆ ಸ್ಪಂದಿಸಿ ₹1200 ಕೋಟಿಯಷ್ಟು ಅನುದಾನ ಒದಗಿಸಿದ್ದಾರೆ. ಕ್ಷೇತ್ರದಲ್ಲಿ ಕೈಗೊಳ್ಳಬೇಕಿದ್ದ ಏತನೀರಾವರಿ ಯೋಜನೆಗಳಿಗೂ ₹6 ಕೋಟಿ ಅನುದಾನ ಒದಗಿಸಿದ್ದಾರೆ. ಅಲ್ಲದೇ ನಾರಾಯಣಪುರ ಜಲಾಶಯ ಬಳಿ ಗಾರ್ಡನ್‌ ಅಭಿವೃದ್ಧಿಗೆ ₹40 ಕೋಟಿ ಅನುದಾನ ನೀಡಿದ್ದಾರೆ. ಹಾಗಾಗಿ, ಶಿಕ್ಷಣ ಅಭಿವೃದ್ಧಿಗೆ ಸಂಬಂಧಿಸಿದ ಪ್ರಶ್ನೆಗಳತ್ತ ಗಮನ ಹರಿಸುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.