ರಾಮನಗರ: ವಕೀಲರ ವಿರುದ್ಧ ಸುಳ್ಳು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಆರೋಪಿಸಿ, ಕೋರ್ಟ್ ಕಾರ್ಯಕಲಾಪಗಳನ್ನು ಬಹಿಷ್ಕರಿಸಿ ಸೋಮವಾರ ಧರಣಿ ನಡೆಸಿದ ವಕೀಲರು, ಐಜೂರು ಠಾಣೆ ಸಬ್ ಇನ್‌ಸ್ಪೆಕ್ಟರ್ ತನ್ವೀರ್ ಹುಸೇನ್ ಅವರನ್ನು ಮಂಗಳವಾರದೊಳಗೆ ಅಮಾತುಗೊಳಿಸಬೇಕೆಂದು ಗಡುವು ಕೊಟ್ಟಿದ್ದಾರೆ. ಇಲ್ಲದಿದ್ದರೆ, ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ವಕೀಲರ ಸಂಘದ ಆವರಣದಲ್ಲಿ ಧರಣಿ ನಡೆಸಿದ ವಕೀಲರು, ಸಬ್ ಇನ್‌ಸ್ಪೆಕ್ಟರ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಕ್ಕಪಕ್ಕದ ಜಿಲ್ಲೆಗಳಿಂದ ಬಂದಿದ್ದ ವಕೀಲರ ಸಂಘ ಹಾಗೂ ಪರಿಷತ್‌ನ ಪದಾಧಿಕಾರಿಗಳು, ವಕೀಲರ ಧರಣಿಗೆ ಬೆಂಬಲ ಸೂಚಿಸಿದರು.
ಧರಣಿ ಸ್ಥಳಕ್ಕೆ ಬಂದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ವಕೀಲರ ಸಂಘದ ಪದಾಧಿಕಾರಿಗಳು, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರನ್ನು ಭೇಟಿ ಮಾಡಿ, ತಮ್ಮ ಬೇಡಿಕೆಯನ್ನು ಗಮನಕ್ಕೆ ತಂದರು.
ಉಗ್ರ ಹೋರಾಟ: ‘ನಲವತ್ತು ವಕೀಲರ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಎಸ್‌ಐ ವಿರುದ್ಧ ಒಂದು ದಿನದೊಳಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಉಗ್ರ ಹೋರಾಟ ನಡೆಸಲು ವಕೀಲರ ಸಂಘ ನಿರ್ಧರಿಸಿದೆ. ಹೋರಾಟಕ್ಕೆ ಅಕ್ಕಪಕ್ಕದ ಜಿಲ್ಲೆಗಳ ವಕೀಲರು ಸಹ ಬಂದು ಸೇರಿಕೊಳ್ಳಲಿದ್ದಾರೆ’ ಎಂದು ರಾಜ್ಯ ವಕೀಲ ಪರಿಷತ್ತಿನ ಅಧ್ಯಕ್ಷ ವಿಶಾಲ್ ರಘು ಹೇಳಿದರು.
ವಕೀಲರ ಸಂಘದ ಧರಣಿಯಲ್ಲಿ ಭಾಗವಹಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೇಡಿಕೆ ಕುರಿತು ಸಂಘದ ಪದಾಧಿಕಾರಿಗಳು ಡಿ.ಸಿ ಅವರನ್ನು ಭೇಟಿ ಮಾಡಿದಾಗ ಸ್ಪಂದಿಸಲಿಲ್ಲ. ಹೆಚ್ಚುವರಿ ಜಿಲ್ಲಾಧಿಕಾರಿ ಭೇಟಿಗೆ ಸೂಚಿಸಿದರು. ಅಳಲು ಆಲಿಸದ ಇಂತಹ ಡಿ.ಸಿ ಜಿಲ್ಲೆಗೆ ಸಿಕ್ಕಿರುವುದು ಇಲ್ಲಿನ ಜನರ ದೌರ್ಭಾಗ್ಯ. ವಕೀಲರನ್ನು ನಿರ್ಲಕ್ಷ್ಯಿಸುವವರು, ಜನಸಾಮಾನ್ಯರ ವಿಷಯದಲ್ಲಿ ಹೇಗೆ ವರ್ತಿಸುತ್ತಾರೆ ಎಂಬುದು ಇದರಲ್ಲೇ ಗೊತ್ತಾಗುತ್ತದೆ’ ಎಂದು ಕಿಡಿಕಾರಿದರು.
‘ಎಸ್‌ಪಿ ಭೇಟಿ ಮಾಡಿದಾಗ ಗೌರವಯುತವಾಗಿ ನಡೆಸಿಕೊಂಡರು. ಅವರಿಗೆ ಘಟನೆಯನ್ನು ವಿವರಿಸಿದ್ದೇವೆ. ಪರಿಶೀಲಿಸಿ ತಪ್ಪಾಗಿದ್ದರೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಪ್ರಕರಣದ ತನಿಖೆಯನ್ನು ಹಿರಿಯ ಅಧಿಕಾರಿಗೆ ವರ್ಗಾಯಿಸಿರುವುದಾಗಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಎಸ್‌ಐ ಅಮಾನತು ಮಾಡಬೇಕು. ಇಲ್ಲದಿದ್ದರೆ ರಾಜ್ಯದ 133 ವಕೀಲರ ಸಂಘದ ಸದಸ್ಯರು ಹೋರಾಟ ನಡೆಸುವುದು ಖಚಿತ. ಮುಂದೇನಾದರೂ ಅನಾಹುತವಾದರೆ ಅದಕ್ಕೆ ಜಿಲ್ಲಾಡಳಿತವೇ ಹೊಣೆ’ ಎಂದು ತಿಳಿಸಿದರು.
ಧರಣಿ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ವಿ. ಸುರೇಶ್, ಡಿವೈಎಸ್ಪಿ ದಿನಕರ ಶೆಟ್ಟಿ, ವೃತ್ತ ನಿರೀಕ್ಷಕ ಲಕ್ಷ್ಮಣ್ ಭೇಟಿ ನೀಡಿದರು. ಧರಣಿಯಲ್ಲಿ ರಾಮನಗರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ, ಶ್ರೀವತ್ಸ, ಕಾರ್ಯದರ್ಶಿ ತಿಮ್ಮೇಗೌಡ, ಉಪಾಧ್ಯಕ್ಷ ಚಂದ್ರಶೇಖರ್, ಖಜಾಂಚಿ ಮಂಜೇಶ್ ಗೌಡ, ಹಿರಿಯ ವಕೀಲರಾದ ಶಿವಣ್ಣಗೌಡ ಹಾಗೂ ಪದಾಧಿಕಾರಿಗಳು ಇದ್ದರು.
Quote - ಜ್ಞಾನವಾಪಿ ಮಸೀದಿ ಪ್ರಕರಣದ ಕೋರ್ಟ್ ತೀರ್ಪು ವಿರೋಧಿಸಿ ಆಕ್ಷೇಪಾರ್ಹ ಪೋಸ್ಟ್ ಮಾಡಿರುವ ವಕೀಲ ಚಾಂದ್ ಪಾಷ ವಿರುದ್ದ ಇಲ್ಲಿನ ಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕಿತ್ತು – ರಾಜೇಂದ್ರ ಅಧ್ಯಕ್ಷ ಮಂಡ್ಯ ವಕೀಲರ ಸಂಘ
Quote - 40 ವಕೀಲರ ವಿರುದ್ಧ ಎಫ್‌ಐಆರ್ ದಾಖಲಿಸುವುದಕ್ಕೆ ಮುಂಚೆ ಪ್ರಾಥಮಿಕ ತನಿಖೆ ನಡೆಸಬೇಕಿತ್ತು. ಹಿರಿಯ ಅಧಿಕಾರಿಗಳು ಎಫ್‌ಐಆರ್‌ಗೆ ಹೇಗೆ ಒಪ್ಪಿಗೆ ನೀಡಿದರು? ಈ ಪ್ರಕರಣದಲ್ಲಿ ವಕೀಲರ ಸ್ವಾಭಿಮಾನಕ್ಕೆ ಧಕ್ಕೆಯಾಗಲು ಬಿಡಬಾರದು – ಸಿದ್ದರಾಜು ವಕೀಲ
Cut-off box - ಪ್ರಕರಣ ವರ್ಗಾವಣೆ ವರದಿಗೆ ಸೂಚನೆ: ಎಸ್‌ಪಿ ‘ಐಜೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡೂ ಪ್ರಕರಣಗಳ ತನಿಖೆಯನ್ನು ಡಿವೈಎಸ್ಪಿಗೆ ವಹಿಸಲಾಗಿದೆ. ಪ್ರಕರಣ ದಾಖಲಿಸುವಲ್ಲಿ ಠಾಣೆ ಎಸ್‌ಐ ಅವರು ಲೋಪ ಎಸಗಿದ್ದಾರೆ ಎಂದು ವಕೀಲರ ಸಂಘ ಆರೋಪಿಸಿದೆ. ಈ ಕುರಿತು ವಿಚಾರಣೆ ನಡೆಸಿ ವರದಿ ನೀಡುವಂತೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ಸೂಚಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.