ADVERTISEMENT

ಯಾದಗಿರಿ | ಮತ್ತೆ 74 ಜನರಿಗೆ ಕೋವಿಡ್‌–19

ಯಾದಗಿರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 373ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 16:40 IST
Last Updated 5 ಜೂನ್ 2020, 16:40 IST
ಶಹಾಪುರ ನಗರದಲ್ಲಿರುವ ಪೊಲೀಸ್ ಠಾಣೆಯ ನೋಟ
ಶಹಾಪುರ ನಗರದಲ್ಲಿರುವ ಪೊಲೀಸ್ ಠಾಣೆಯ ನೋಟ   

ಯಾದಗಿರಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಿದ್ದು, ಶುಕ್ರವಾರ ಒಂದೇದಿನ10 ವರ್ಷದೊಳಗಿನ 6 ಮಕ್ಕಳು ಸೇರಿದಂತೆ 74 ಕೋವಿಡ್‌–19 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಸೋಂಕಿತರ ಸಂಖ್ಯೆ 373ಕ್ಕೆ ಏರಿಕೆಯಾಗಿದೆ.373 ಪ್ರಕರಣಗಳ ಪೈಕಿ 70 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಮಹಾರಾಷ್ಟ್ರದಿಂದ ವಾಪಸ್ ಆದ 73 ಜನ ವಲಸೆ ಕಾರ್ಮಿಕರು ಮತ್ತು ಶಹಾಪುರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌‌ ಸೇರಿದಂತೆ ಜಿಲ್ಲೆಯಲ್ಲಿ 74 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಇತ್ತೀಚೆಗೆ ಮಹಾರಾಷ್ಟ್ರದಿಂದ ಆಗಮಿಸಿದ ಈ ಕಾರ್ಮಿಕರೆಲ್ಲರನ್ನು ಜಿಲ್ಲೆಯ ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗಿತ್ತು. ಸೋಂಕಿಗೆ ತುತ್ತಾದ ಶಹಾಪುರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌ ಹೋಮ್ ಕ್ವಾರಂಟೈನ್ ಮಾಡಲಾಗಿತ್ತು. ಶುಕ್ರವಾರ ಇವರ ವರದಿ ಪಾಸಿಟಿವ್ ಬಂದಿದೆ.

ADVERTISEMENT

ಯಾದಗಿರಿ ತಾಲ್ಲೂಕಿನ ವೆಂಕಟೇಶ್ವರ ನಗರದ 45 ವರ್ಷದ ಮಹಿಳೆ, ಕಂಚಗರಳ್ಳಿ ತಾಂಡಾದ 21 ವರ್ಷದ ಮಹಿಳೆ, 12 ವರ್ಷದ ಬಾಲಕಿ, ಸಣ್ಣ ತಾಂಡಾದ 37 ವರ್ಷದ ಪುರುಷ, 25 ವರ್ಷದ ಮಹಿಳೆ, 28 ವರ್ಷದ ಪುರುಷ, ನಸಲವಾಯಿ ಗ್ರಾಮದ 5 ವರ್ಷದ ಬಾಲಕಿ, ಗುರುಮಠಕಲ್ ತಾಲ್ಲೂಕಿನ ಚಿಂತನಹಳ್ಳಿ ತಾಂಡಾದ 35 ವರ್ಷದ ಪುರುಷ, 13 ವರ್ಷದ ಬಾಲಕ, 16 ವರ್ಷದ ಬಾಲಕ, ಗುರುಮಠಕಲ್ ತಾಲ್ಲೂಕಿನ ಚಪೆಟ್ಲಾ ಗ್ರಾಮದ ಮೂವರು, ಮದನಪುರ ತಾಂಡಾದ 20 ವರ್ಷದ ಯುವತಿ, ಗುರುಮಠಕಲ್‍ನ 12 ವರ್ಷದ ಬಾಲಕ,ಕಾಕಲವಾರ ಗ್ರಾಮದ 60 ವರ್ಷದ ಮಹಿಳೆ, 30 ವರ್ಷದ ಪುರುಷ, 8 ವರ್ಷದ ಬಾಲಕಿ, 38 ವರ್ಷದ ಮಹಿಳೆ, 10 ವರ್ಷದ ಬಾಲಕಿ ಸೇರಿದಂತೆ 74 ಮಂದಿಗೆ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ಗೃಹ ದಿಗ್ಬಂಧನದಲ್ಲಿದ್ದ ಪ್ರಕರಣ ಸಂಖ್ಯೆ ಪಿ-4446ರ ವ್ಯಕ್ತಿಗೆ ಕೋವಿಡ್ ದೃಢಪಟ್ಟಿದ್ದು, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಉಳಿದ 73 ಜನ ಸೋಂಕಿತರೆಲ್ಲರೂ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಪ್ರಕರಣ ಸಂಖ್ಯೆ ಪಿ-4424 ವ್ಯಕ್ತಿಯು ಆಂಧ್ರಪ್ರದೇಶ ರಾಜ್ಯದ ನೆಲ್ಲೂರಿನಿಂದ ಜಿಲ್ಲೆಗೆ ಹಿಂದಿರುಗಿದ್ದಾರೆ. ಇನ್ನುಳಿದವರು ಮಹಾರಾಷ್ಟ್ರದ ಮುಂಬೈ, ಠಾಣೆ, ಪುಣೆ ಸ್ಥಳಗಳಿಂದ ಜಿಲ್ಲೆಗೆ ಹಿಂದಿರುಗಿದ್ದಾರೆ.

302 ಕೊರೊನಾ ಪ್ರಕರಣ ಸಕ್ರಿಯ: ಕೊರೊನಾ ವೈರಸ್ ಪರೀಕ್ಷೆಗಾಗಿ ಜಿಲ್ಲೆಯಿಂದ ಕಳುಹಿಸಿದ ಮಾದರಿಗಳ ಪೈಕಿ ಶುಕ್ರವಾರ ಪಾಸಿಟಿವ್ ಬಂದ 74 ವರದಿಗಳು ಸೇರಿ ಜೂನ್ 5ರವರೆಗೆ ಒಟ್ಟು 373 ವರದಿ ಪಾಸಿಟಿವ್ ಬಂದಿವೆ. ಶುಕ್ರವಾರದ 1,135 ನೆಗೆಟಿವ್ ವರದಿ ಸೇರಿ ಈವರೆಗೆ 12,510 ಮಾದರಿಗಳ ವರದಿ ನೆಗೆಟಿವ್ ಬಂದಿವೆ. ಹೊಸದಾಗಿ ಕಳುಹಿಸಲಾದ 86 ಮಾದರಿಗಳು ಸೇರಿದಂತೆ 5,246 ಮಾದರಿಗಳ ವರದಿ ಬರಬೇಕಿದೆ.

ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 845 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 2,210 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯಲ್ಲಿ 7 ಕಂಟೇನ್‍ಮೆಂಟ್ ಝೋನ್‍ಗಳನ್ನು ರಚಿಸಲಾಗಿದೆ.

ಕಾನ್‌ಸ್ಟೆಬಲ್‌ಗೆ ಕೋವಿಡ್‌ ದೃಢ

ಶಹಾಪುರ ಪೊಲೀಸ್‌ ಠಾಣೆ ಕಾನ್‌ಸ್ಟೆಬಲ್‌ ಒಬ್ಬರಿಗೆ ಕೋವಿಡ್‌–19 ಸೋಂಕು ದೃಢಪಟ್ಟಿದ್ದು, ಅವರನ್ನು ಭೀಮರಾಯನಗುಡಿ ಕೊರೊನಾ ಕೇರ್‌‌ ಕೇಂದ್ರದಲ್ಲಿ ಇರಿಸಲಾಗಿದೆ. ಇದರಿಂದ ಪೊಲೀಸ್‌ ಠಾಣೆಯ ಇತರೆ ಸಿಬ್ಬಂದಿಗೆ ಆತಂಕ ಶುರುವಾಗಿದೆ.

ಕಾನ್‌ಸ್ಟೆಬಲ್‌, ಠಾಣೆಯಲ್ಲಿ ರೈಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದ 8 ರಿಂದ 10 ಜನ ಸಿಬ್ಬಂದಿಯನ್ನು ಪತ್ತೆ ಹಚ್ಚಲಾಗಿದೆ ಎಂದು ಸುರಪುರ ಡಿವೈಎಸ್ಪಿ ವೆಂಕಟೇಶ ಉಗಿಬಂಡಿ ತಿಳಿಸಿದರು.

ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇನ್‌ಸ್ಪೆಕ್ಟರ್‌, ಇಬ್ಬರು ಪಿಎಸ್‌ಐ,7 ಜನ ಎಎಸ್‌ಐ, 18 ಜನ ಹೆಡ್‌ ಕಾನ್‌ಸ್ಟೆಬಲ್‌, 32 ಜನ ಕಾನ್‌ಸ್ಟೆಬಲ್‌ ಹಾಗೂ 32 ಹೋಂ ಗಾರ್ಡ್‌ಗಳನ್ನು ಭೀಮರಾಯನಗುಡಿಯ ತಪಾಸಣಾ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು.

ಶುಕ್ರವಾರ ಬೆಳಿಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ ಸೋನವಣೆ, ಡಿವೈಎಸ್ಪಿ ವೆಂಕಟೇಶ ಉಗಿಬಂಡಿ ಠಾಣೆಗೆ ಭೇಟಿ ನೀಡಿ ಪರಿಶೀಲಿಸಿದರು.

ವಸತಿಗೃಹ: ಸೋಂಕಿತ ಕಾನ್‌ಸ್ಟೆಬಲ್‌ ವಾಸವಿದ್ದ ನಗರದ ಬಸವೇಶ್ವರ ಬಡಾವಣೆಯ ಪೊಲೀಸ್ ವಸತಿ ಸಮುಚ್ಛಯದಲ್ಲಿ ‌25 ಕುಟುಂಬಗಳಿವೆ. ಎಚ್ಚರ ವಹಿಸುವಂತೆ ಸೂಚಿಸಲಾಗಿದೆ. ಮೇಲಾಧಿಕಾರಿಯ ಆದೇಶ ಬರುವವರೆಗೆ ಸೀಲ್‌ಡೌನ್ ಮಾಡುವುದಿಲ್ಲ ಎಂದು ಸುರಪುರ ಡಿವೈಎಸ್ಪಿ ವೆಂಕಟೇಶ ಉಗಿಬಂಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.