
ವಡಗೇರಾ: ತಾಲ್ಲೂಕಿನ ನಾಯ್ಕಲ್ ಗ್ರಾಮದ ಬೈಪಾಸ್ ರಸ್ತೆಯ ಬದಿಯಲ್ಲಿ ಡಾ.ಅಂಬೇಡ್ಕರ್ ಮೂರ್ತಿ ಹಾಗೂ ವೃತ್ತದ ಕಾಮಗಾರಿ 8 ತಿಂಗಳ ಹಿಂದೆ ಮುಗಿದಿದೆ. ಆದರೆ ಈವರೆಗೂ ಮೂರ್ತಿ ಅನಾವರಣಗೊಂಡಿಲ್ಲ.
2024-25ನೇ ಸಾಲಿನ ಯಾದಗಿರಿ ಮತಕ್ಷೇತ್ರದ ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರು ಅವರ ಅನುದಾನದಲ್ಲಿ ನಿರ್ಮಿತಿ ಕೇಂದ್ರದವರು ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಕಾಮಗಾರಿ ಮುಗಿದಿದ್ದು, ಮೂರ್ತಿಯು ಬಿಸಿಲು, ಮಳೆಯಿಂದ ಹಾಳಾಗಬಾರದು ಎಂಬ ಉದ್ದೇಶದಿಂದ ಮೂರ್ತಿಯನ್ನು ಬಟ್ಟೆಯಿಂದ ಮರೆಮಾಚಲಾಗಿದೆ. ಅಲ್ಲದೆ ಜಯಂತಿ ಸಂದರ್ಭದಲ್ಲಿ ಡಾ.ಅಂಬೇಡ್ಕರ್ ಮೂರ್ತಿಗೆ ಗಣ್ಯರು, ಸಂಘ–ಸಂಸ್ಥೆಯವರು ಮಾಲಾರ್ಪಣೆ ಮಾಡಲು ತೊಂದರೆಯಾಗಬಾರದು ಎಂದು ಕಬ್ಬಿಣದ ಲ್ಯಾಡರ್(ಏಣಿ) ನಿರ್ಮಿಸಲಾಗಿದೆ.
ಸುಮಾರು ₹ 17 ಲಕ್ಷ ದಾನಿಗಳಿಂದ ಸಂಗ್ರಹಿಸಿ ಅಂಬೇಡ್ಕರ್ ಮೂರ್ತಿ ತರಲಾಗಿದೆ. ಇನ್ನೂ ಕೆಲವೊಂದು ಸಾಮಾಗ್ರಿಗಳನ್ನು ಸಂಘದ ವತಿಯಿಂದ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಕೊಡಲಾಗಿದೆ . ಆದರೆ ನಿರ್ಮಿತಿ ಕೇಂದ್ರದವರು ಕ್ರಿಯಾ ಯೋಜನೆಯ ಪ್ರಕಾರ ಕಾಮಗಾರಿ ಮಾಡಿಲ್ಲ. ಮುಂಬರುವ ಏಪ್ರಿಲ್‌ನಲ್ಲಿ ಅನಾವರಣ ಮಾಡಬೇಕು ಎಂದು ನಿರ್ಧರಿಸಿದ್ದೇವೆ ಎಂದು ಡಿಎಸ್‌ಎಸ್ ಕಲಬುರಗಿ ವಿಭಾಗದ ಸಂಘಟನಾ ಸಂಚಾಲಕ ಮರುಳ ಸಿದ್ದಪ್ಪ ಬೈರಳ್ಳಿ ತಿಳಿಸಿದರು.
ಡಾ.ಅಂಬೇಡ್ಕರ್ ಮೂರ್ತಿಯ ಸುತ್ತಲೂ ಹಸಿರು ಹುಲ್ಲು ಕಂಗೊಳಿಸುತ್ತಿದ್ದು, ನೋಡುಗರ ಮನ ಸೂರೆಗೊಳ್ಳುತ್ತದೆ. ಜತೆಗೆ ತಡೆಗೋಡೆ ನಿರ್ಮಿಸಲಾಗಿದ್ದು, ವಿದ್ಯುತ್ ಬಲ್ಬ್‌ಗಳನ್ನು ಅಳವಡಿಸಲಾಗಿದೆ. ಅಲ್ಲದೆ ₹ 5 ಲಕ್ಷ ಅನುದಾನದಲ್ಲಿ ಹೈಮಾಸ್ಟ್ ದೀಪವನ್ನು ಅಳವಡಿಸಲಾಗಿದ್ದು, ಸುತ್ತಲೂ ಬೆಳಕು ನೀಡಲಿದೆ. ಆದರೆ ಈವರೆಗೂ ಮೂರ್ತಿ ಲೋಕಾರ್ಪಣೆಗೆ ಕ್ರಮಕೈಗೊಳ್ಳದಿರುವುದು ಜನರಲ್ಲಿ ಪ್ರಶ್ನೆಗಳನ್ನು ಮೂಡಿಸಿದೆ.
ಕಾಮಗಾರಿ ಮುಗಿದಿದ್ದರೂ ಮೂರ್ತಿ ಅನಾವರಣ ವಿಳಂಬವಾದರೆ, ಬಿಸಿಲಿನಲ್ಲಿ ಹಾಗೂ ಅಕಾಲಿಕ ಮಳೆಗೆ ಪೂರ್ಣಗೊಂಡಿರುವ ಕಾಮಗಾರಿಗೆ ಹಾನಿಯಾಗುತ್ತದೆ. ಹೀಗಾಗಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ, ಮೂರ್ತಿ ಅನಾವರಣಕ್ಕೆ ಕ್ರಮ ಕೈಗೊಳ್ಳಬೇಕು ಎಂಬುವದು ತಾಲ್ಲುಕಿನ ಜನತೆಯ ಒತ್ತಾಸೆಯಾಗಿದೆ.
ನಿರ್ಮಿತಿ ಕೇಂದ್ರದಿಂದ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಸಂಬಂಧ ಪಟ್ಟವರಿಗೆ ಮಾಹಿತಿಯನ್ನು ನೀಡಲಾಗಿದೆ. ಶೀಘ್ರದಲ್ಲಿಯೇ ಮೂರ್ತಿ ಅನಾವರಣಗೊಳ್ಳಲಿದೆ.– ನಾಗೇಶ, ಜೆಇ ನಿರ್ಮಿತಿ ಕೇಂದ್ರ ಯಾದಗಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.