
ಯಾದಗಿರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜನವರಿ 21ರಂದು ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭಯಲ್ಲಿ ನಿರ್ಧರಿಸಲಾಯಿತು.
ಅಂಬಿಗರ ಚೌಡಯ್ಯ ಜಯಂತಿ ಆಚರಿಸುವ ಕುರಿತು ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ತೀರ್ಮಾನಿಸಲಾಯಿತು.
‘ಅಂದು ನಗರದ ವಿದ್ಯಾ ಮಂಗಲ್ ಕಾರ್ಯಾಲಯದಲ್ಲಿ ಮಧ್ಯಾಹ್ನ 12.30ಕ್ಕೆ ಜಯಂತಿ ಕಾರ್ಯಕ್ರಮ ನಡೆಯಲಿದೆ. ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಅರ್ಪಿಸಲಾಗುವುದು. ನುರಿತ ಉಪನ್ಯಾಸಕರನ್ನು ಆಹ್ವಾನಿಸಲಾಗುವುದು. ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು’ ಎಂದು ಎಡಿಸಿ ಸೂಚಿಸಿದರು.
ತಾಲ್ಲೂಕು ಮಟ್ಟದಲ್ಲಿ, ಶಾಲಾ, ಕಾಲೇಜು, ಗ್ರಾಮ ಪಂಚಾಯಿತಿ, ವಿವಿಧ ಕಚೇರಿಗಳಲ್ಲಿ ಬೆಳಿಗ್ಗೆ 10ಕ್ಕೆ ಜಯಂತಿ ಆಚರಣೆ ಮಾಡಿ, ಮುಖ್ಯ ಕಾರ್ಯಕ್ರಮಕ್ಕೆ ಬರಬೇಕು. ಸಮಾಜದ ಮೂಲಕ ಹಮ್ಮಿಕೊಳ್ಳಲಾಗುವ ಮೆರವಣಿಗೆ ಕಾರ್ಯಕ್ರಮದ ಬಗ್ಗೆ ಮುಂಚಿತವಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದರು.
ಸಭೆಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರದೇವಿ, ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಗೋಸಿ, ಚಂದ್ರಶೇಖರ್ ಬಾಡಿಯಾಳ, ಉಮೇಶ್ ಮುದ್ನಾಳ, ಭೀಮರೆಡ್ಡಿ, ಶರಣಪ್ಪ ಮೋಟ್ನಳ್ಳಿ, ಸಣ್ಣ ಹಣುಮಂತಪ್ಪ ಬಳಿಚಕ್ರ, ದೇವು ಬಳಿಚಕ್ರ, ನಿಂಗಪ್ಪ ಜಾಲಗಾರ, ಮಲ್ಲು ಪೂಜಾರಿ, ಮುದುಕಪ್ಪ ಚಾಮನಳ್ಳಿ, ಕಳಸಪ್ಪ ಸಾವೂರ್, ಮಹೇಶ್ ಬಾಡಿಯಾಳ, ಮಹಾದೇವಪ್ಪ ಗಣಪೂರ, ಬಸವರಾಜ ಕೋಲಕಾರ ಉಪಸ್ಥಿತರಿದ್ದರು.