ADVERTISEMENT

ಯಾದಗಿರಿ | ಚೌಡಯ್ಯಗೆ ಅವಹೇಳನ: ಅನುಯಾಯಿಗಳ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 4:50 IST
Last Updated 2 ಸೆಪ್ಟೆಂಬರ್ 2025, 4:50 IST
ಯಾದಗಿರಿಯಲ್ಲಿ ಸೋಮವಾರ ನಡೆದ ಕೋಲಿ ಕಬ್ಬಲಿಗ ಮತ್ತು ತಳವಾರ ಸಮುದಾಯಗಳ ಜಂಟಿ ಹೋರಾಟ ಸಮಿತಿಯ ‘ಯಾದಗಿರಿ ಚಲೋ’ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ 
ಯಾದಗಿರಿಯಲ್ಲಿ ಸೋಮವಾರ ನಡೆದ ಕೋಲಿ ಕಬ್ಬಲಿಗ ಮತ್ತು ತಳವಾರ ಸಮುದಾಯಗಳ ಜಂಟಿ ಹೋರಾಟ ಸಮಿತಿಯ ‘ಯಾದಗಿರಿ ಚಲೋ’ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ    

ಯಾದಗಿರಿ: ನಿಜಶರಣ ಅಂಬಿಗರ ಚೌಡಯ್ಯನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಕೋಲಿ ಕಬ್ಬಲಿಗ ಪರ್ಯಾಯ ಪದಗಳನ್ನೂ ಎಸ್‌ಟಿ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಕೋಲಿ ಕಬ್ಬಲಿಗ ಮತ್ತು ತಳವಾರ ಸಮುದಾಯಗಳ ಜಂಟಿ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ‌‘ಯಾದಗಿರಿ ಚಲೋ’ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಸರ್ಕಾರಿ ಪದವಿ ಕಾಲೇಜು ಮುಂಭಾಗದಲ್ಲಿ ಸಮಾಜದ ಮಠಾಧೀಶರು, ಜನಪ್ರತಿನಿಧಿಗಳು, ಹೋರಾಟಗಾರರು, ವಿವಿಧ ಪಕ್ಷಗಳಲ್ಲಿನ ನಾಯಕರು, ಚೌಡಯ್ಯನವರ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದರು.

ಸಮುದಾಯದ ಚಿಹ್ನೆ, ಅಂಬಿಗರ ಚೌಡಯ್ಯನವರ ಭಾವಚಿತ್ರ ಇರುವ ಬಾವುಟಗಳನ್ನು ಹಿಡಿದು ಅಂಬಿಗರ ಚೌಡಯ್ಯ, ದಿ.ವಿಠಲ್ ಹೇರೂರ ಅವರಿಗೆ ಜೈಕಾರ ಹಾಕುತ್ತ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆಯೂ ಕೂಗುತ್ತ, ಮೀಸಲಾತಿಯ ಹಕ್ಕು ಪ್ರತಿಪಾದಿಸುತ್ತ ನೇತಾಜಿ ಸುಭಾಷ್ ವೃತ್ತದಲ್ಲಿ ಬಂದು ಜಮಾಯಿಸಿದರು.

ADVERTISEMENT

ವೃತ್ತದಲ್ಲಿ ಮೂರು ಗಂಟೆಗೂ ಹೆಚ್ಚು ಬಹಿರಂಗ ಸಭೆ ಮಾಡಿದ ಮುಖಂಡರು, ಅವಹೇಳನ ಮಾಡಿದವರನ್ನು ತರಾಟೆಗೆ ತೆಗೆದುಕೊಂಡರು. ಸಹೋದರ ಸಮಾಜಗಳ ನಡುವೆ ಕಲಹ ತಂದಿಟ್ಟು, ಶರಣರಿಗೆ ಅಪಮಾನ ಮಾಡುವುದು ಸಂವಿಧಾನ ವಿರೋಧಿ ನಡೆ. ಇಂತಹ ಕೃತ್ಯಗಳಿಗೆ ಅವಕಾಶ ಕೊಡಬಾರದು. ಯಾವುದೇ ಶರಣರನ್ನು ಅಪಮಾನಿಸುವರಿಗೆ ತಕ್ಕ ಶಿಕ್ಷೆ ಕೊಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ನಾಲ್ಕು ದಶಕಗಳ ಬೇಡಿಕೆಯಾದ ಕೋಲಿ, ಕಬ್ಬಲಿಗ, ಬೆಸ್ತ ಇತರೆ ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರ್ಪಡೆ ಮಾಡಲು ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಇದಕ್ಕಾಗಿ ಸಮಾಜದ ಮುಖಂಡರು ಪಕ್ಷ ಭೇದ ಮರೆತು ಒಂದಾಗಬೇಕು ಎಂಬ ಮಾತುಗಳು ಕೇಳಿಬಂದವು. ಎಲ್ಲ ಪಕ್ಷಗಳಲ್ಲಿನ ಸಮುದಾಯದ ನಾಯಕರು ಒಗ್ಗಟ್ಟಿನ ಮಂತ್ರವನ್ನೂ ಜಪಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ‘ಸಮಾಜದ ಬೇಡಿಕೆಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತರುತ್ತೇವೆ. ಎಸ್‌ಟಿ ಪ್ರಮಾಣ ಪತ್ರಗಳ ವಿತರಣೆಯನ್ನು ಉಪವಿಭಾಗಾಧಿಕಾರಿ ಪರಿಶೀಲನೆ ಮಾಡುತ್ತಾರೆ. ಆರೋಪಿಗಳ ವಿರುದ್ಧ ಪೊಲೀಸರು ತಕ್ಷಣವೇ ಪ್ರಕರಣ ದಾಖಲಿಸಿಕೊಂಡಿದ್ದು, ಕಠಿಣ ಕ್ರಮ ತೆಗೆದುಕೊಳ್ಳುವರು’ ಎಂದು ಭರವಸೆ ನೀಡಿದರು.

ಎಸ್‌ಪಿ ಪೃಥ್ವಿಕ್ ಶಂಕರ್ ಅವರು ಪ್ರತಿಭಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕೋಲಿ ಕಬ್ಬಲಿಗ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜನ ಗೋಸಿ, ಮುಖಂಡರಾದ ಲಚ್ಚಪ್ಪ ಜಮಾದಾರ್, ಮೌಲಾಲಿ ಅನಪುರ, ಬಿ.ಕೆ. ಮೋಹನ್‌ಕುಮಾರ್, ಸಿ.ಎಂ. ಪಟೇದಾರ, ಹಣಮಂತಮಡ್ಡಿ, ಮಲ್ಲಣ್ಣ ಚಟಗೇರಿ, ಬಸವರಾಜಪ್ಪ, ಶಾಂತಪ್ಪ ಚಾಮನಳ್ಳಿ, ಹಣಮಂತಪ್ಪ ಬಳಿಚಕ್ರ, ವಿಶ್ವನಾಥ ಅಬ್ಬೆತುಮಕೂರ ಸೇರಿದಂತೆ ಯಾದಗಿರಿ ಒಳಗೊಂಡು ಕಲಬುರಗಿ, ರಾಯಚೂರಿನ ಮುಖಂಡರು ಪಾಲ್ಗೊಂಡಿದ್ದರು.

ಯಾದಗಿರಿಯಲ್ಲಿ ಸೋಮವಾರ ನಡೆದ ಕೋಲಿ ಕಬ್ಬಲಿಗ ಮತ್ತು ತಳವಾರ ಸಮುದಾಯಗಳ ಜಂಟಿ ಹೋರಾಟ ಸಮಿತಿಯ ‘ಯಾದಗಿರಿ ಚಲೋ’ ಬೃಹತ್ ಪ್ರತಿಭಟನೆಯ ಮೆರವಣಿಗೆ 
ಯಾದಗಿರಿಯಲ್ಲಿ ಸೋಮವಾರ ನಡೆದ ಕೋಲಿ ಕಬ್ಬಲಿಗ ಮತ್ತು ತಳವಾರ ಸಮುದಾಯಗಳ ಜಂಟಿ ಹೋರಾಟ ಸಮಿತಿಯ ‘ಯಾದಗಿರಿ ಚಲೋ’ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು 
ಯಾದಗಿರಿಯಲ್ಲಿ ಸೋಮವಾರ ನಡೆದ ಕೋಲಿ ಕಬ್ಬಲಿಗ ಮತ್ತು ತಳವಾರ ಸಮುದಾಯಗಳ ಜಂಟಿ ಹೋರಾಟ ಸಮಿತಿಯ ‘ಯಾದಗಿರಿ ಚಲೋ’ ಬೃಹತ್ ಪ್ರತಿಭಟನೆ ವೇಳೆ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರಿಗೆ ಸ್ವಾಮೀಜಿಗಳು ಮನವಿ ಪತ್ರ ಸಲ್ಲಿಸಿದರು 
‘ದಾರ್ಶನಿಕರಿಗೆ ಜಾತಿ ಇಲ್ಲ’
‘ದಾರ್ಶನಿಕರಿಗೆ ಯಾವುದೇ ಜಾತಿಯ ಭೇದ– ಭಾವ ಇರುವುದಿಲ್ಲ. ತಮ್ಮಲ್ಲಿನ ಜ್ಞಾನದಿಂದ ಎಲ್ಲರಿಗೂ ಆದರ್ಶವಾಗಿದ್ದಾರೆ. ಅಂತಹವರ ಬಗ್ಗೆ ಮಾತನಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಹಾವೇರಿಯ ನರಸೀಪುರ ಗ್ರಾಮದ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮಚೌಡಯ್ಯ ಸ್ವಾಮೀಜಿ ಹೇಳಿದರು. ‘ಸಮಾಜದ ಮೇಲೆ ಪದೇ ಪದೇ ಅನ್ಯಾಯವಾಗುತ್ತಿರುವುದು ಬೇಸರ ತರಿಸಿದೆ. ತಳವಾರ ಸಮುದಾಯದವರಿಗೆ ಎಸ್‌ಟಿ ಪ್ರಮಾಣ ಪತ್ರ ವಿತರಣೆಯಲ್ಲಿನ ಅನ್ಯಾಯವನ್ನು ತಡೆಯಲು ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕು. ಚೌಡಯ್ಯಗೆ ಅಪಮಾನ ಮಾಡಿದವರನ್ನು ಗಡಿಪಾರು ಮಾಡಬೇಕು’ ಎಂದರು.
ಸಂಚಾರ ದಟ್ಟಣೆ:
ಪರದಾಡಿದ ಪ್ರಯಾಣಿಕರು ವೃತ್ತದಲ್ಲಿ ಮೂರು ಗಂಟೆಗಳ ಕಾಲ ಪ್ರತಿಭಟನೆ ಮಾಡಿದ್ದರಿಂದ ವಾಹನ ದಟ್ಟಣೆಯ ಶಹಾಪುರ ಮತ್ತು ಚಿತ್ತಾಪುರ ಮಾರ್ಗದ ವಾಹನಗಳನ್ನು ಅನ್ಯ ಮಾರ್ಗದಲ್ಲಿ ಸಂಚರಿಸಿದವು. ಕಿರಿದಾದ ತಗ್ಗು– ಗುಂಡಿನ ರಸ್ತೆಗಳಲ್ಲಿ ವಾಹನ ದಟ್ಟಣೆ ಕಂಡುಬಂದು ಪ್ರಯಾಣಿಕರೂ ಪರದಾಡಿದರು. ಚಿತ್ತಾಪುರ ಮಾರ್ಗದ ವಾಹನಗಳು ಲಕ್ಷ್ಮಿ ನಗರ ಮೂಲಕ ಶಾಸ್ತ್ರಿ ವೃತ್ತ ಕೋರ್ಟ್ ಮುಂಭಾಗ ಹಾಯ್ದು ಹತ್ತಿಕುಣಿ ರಸ್ತೆಯಿಂದಲೂ ಕೆಲವು ವಾಹನಗಳು ಓಡಾಡಿ ಬಸ್ ನಿಲ್ದಾಣ ರೈಲು ನಿಲ್ದಾಣ ಗಂಜ್ ಪ್ರದೇಶವನ್ನು ತಲುಪಿದವು.
ಯಾರು ಏನೆಂದರು?
ಅಂಬಿಗರ ಚೌಡಯ್ಯ ಜತೆಗೆ ಮಹರ್ಷಿ ವಾಲ್ಮೀಕಿ ಸಹ ನಮ್ಮ ಸಮಾಜದ ಗುರುಗಳು. ಹತಾಶೆಯಿಂದ ಮಹನೀಯರ ಬಗ್ಗೆ ಕೆಟ್ಟ ಮಾತುಗಳನ್ನು ಆಡಿದ್ದು ಖಂಡನೀಯ ಮಲ್ಲಣ್ಣಪ್ಪ ಸ್ವಾಮೀಜಿ ತೊನಸನಳ್ಳಿಯ ಅಲ್ಲಮಪ್ರಭು ಸಂಸ್ಥಾನ ನನಗೆ ಯಾವುದೇ ಮಕ್ಕಳು ಇಲ್ಲ. ನನ್ನ ಸಮಾಜವನ್ನು ಎಸ್‌ಟಿಗೆ ಸೇರಿಸುವವರೆಗೆ ವಿರಮಿಸುವುದಿಲ್ಲ. ಅದಕ್ಕಾಗಿ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತೇನೆ ಬಾಬುರಾವ ಚಿಂಚನಸೂರ್ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ  ಅನ್ಯಾಯಕ್ಕೆ ಒಳಗಾಗುತ್ತಿರುವ ನನ್ನ ಸಮಾಜಕ್ಕೆ ನ್ಯಾಯ ಸಿಗಬೇಕು. ಎಸ್‌ಟಿ ಸೇರ್ಪಡೆ ಪ್ರಮಾಣ ಪತ್ರ ವಿತರಣೆ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಮಾಲಾ ನಾರಾಯಣರಾವ್ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸಂವಿಧಾನ ಬದ್ಧವಾಗಿ ನಮ್ಮ‌ ಹಕ್ಕನ್ನು ಕೇಳುತ್ತಿದ್ದೇವೆ. ಇನ್ನೊಬ್ಬರ ಹಕ್ಕು ಕಿತ್ತುಕೊಂಡಿಲ್ಲ. ಮೀಸಲಾತಿಯ ನಮ್ಮ ಹೋರಾಟವನ್ನು ಸಹೋದರ ಸಮಾಜ ಅರ್ಥ ಮಾಡಿಕೊಳ್ಳಬೇಕು ಲಲಿತಾ ಅನಾಪುರ ನಗರಸಭೆ ಅಧ್ಯಕ್ಷೆ ನಕಲಿ ಎಸ್‌ಟಿ ಪ್ರಮಾಣ ಪತ್ರ ನೀಡುತ್ತಿರುವ ಬಗ್ಗೆ ರಾಜ್ಯ ಸರ್ಕಾರ ಸಮಿತಿ ರಚಿಸಿ ಈ ಬಗ್ಗೆ ಅಧ್ಯಯನ ಮಾಡಿ ವಾಸ್ತವ ಅಂಶವನ್ನು ತಿಳಿದುಕೊಳ್ಳಬೇಕು ಶಿವಕುಮಾರ ನಾಟೀಕಾರ ಜೆಡಿಎಸ್ ಪ್ರಧಾನ ಕಾರ್ಯದರ್ಶಿ  ರಾಜ್ಯ ಸರ್ಕಾರಕ್ಕೆ ಸ್ಪಷ್ಟವಾದ ಸಂದೇಶ ಕೊಡಲು ನಾವು ಸೇರಿದ್ದೇವೆ. ಸಮಾಜದ ಮತಗಳನ್ನು ಪಡೆದವರು ಕೋಲಿ ಕಬ್ಬಲಿಗ ಸಮಾಜವನ್ನು ಎಸ್‌ಟಿಗೆ ಸೇರಿಸಿ ತಳವಾರರಿಗೂ ಎಸ್‌ಟಿ ಪ್ರಮಾಣ ಪತ್ರ ಕೊಡಬೇಕು ಅವ್ವಣ್ಣ ಮ್ಯಾಕೇರಿ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ಯ ಸಮಾಜದ ಗುರುಗಳಿಗೆ ಗೌರವ‌ ಕೊಡುವ ಸಂಸ್ಕೃತಿ ನಮ್ಮದು. ಕೀಳು ಮಟ್ಟದ ರಾಜಕಾರಣ ಮಾಡುವವರಲ್ಲ. ಸಹೋದರ ಸಮಾಜಗಳ ನಡುವೆ ಬೆಂಕಿ ಹಚ್ಚಲು ಬರುವವರಿಗೆ ಎಚ್ಚರಿಕೆ ಕೊಡಲು ಸೇರಿದ್ದೇವೆ ಶರಣಪ್ಪ ಮಾನೇಗಾರ ಕೆಪಿಸಿಸಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.