ADVERTISEMENT

ಅಂಬಿಗರ ಚೌಡಯ್ಯ ಮೂರ್ತಿ ವಿರೂಪ: ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 4:34 IST
Last Updated 12 ಅಕ್ಟೋಬರ್ 2025, 4:34 IST
ಮಲ್ಲಿಕಾರ್ಜನ ಗೋಸಿ
ಮಲ್ಲಿಕಾರ್ಜನ ಗೋಸಿ   

ಯಾದಗಿರಿ: ‘ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲ್ಲೂಕಿನ ಮುತ್ತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ವಿರೂಪಗೊಳಿಸಿದ್ದು, ಘೋರ ಅಪರಾಧವಾಗಿದೆ. ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಜಿಲ್ಲಾ ಕೋಲಿ ಕಬ್ಬಲಿಗ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಗೋಸಿ ಆಗ್ರಹಿಸಿದ್ದಾರೆ.

‘ಅಂಬಿಗರ ಚೌಡಯ್ಯ ಅವರು ನಾಡು ಕಂಡ ಮಹಾಪುರುಷ. ಯಾವುದೇ ಒಂದು ಸಮಾಜಕ್ಕೆ ಸೀಮಿತವಾಗಿಲ್ಲ. ಮೂರ್ತಿಯನ್ನು ಭಗ್ನಗೊಳಿಸಿ ಭಾವನಾತ್ಮಕವಾಗಿ ಕೋಲಿ ಕಬ್ಬಲಿಗ ಸಮಾಜದ ಮೇಲೆ ನೇರವಾಗಿ ದಾಳಿ ಮಾಡಿದಂತಾಗಿದೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ಈ ಅನ್ಯಾಯವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಮೂರ್ತಿಯನ್ನು ಭಗ್ನಗೊಳಿಸಿರುವ ಸಮಾಜಘಾತಕ ವ್ಯಕ್ತಿಗಳನ್ನು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜಿಲ್ಲಾಡಳಿತವು ಗ್ರಾಮದಲ್ಲಿ ನೂತನ ಮೂರ್ತಿಯನ್ನು ನಿರ್ಮಾಣ ಮಾಡಿ ಕೊಡಬೇಕು. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು. ನಿಧಾನ ನೀತಿ ಅನುಸರಿಸಿದರೆ, ಉಗ್ರವಾದ ಹೋರಾಟ ಮಾಡಲಾಗುವುದು’ ಎಂದಿದ್ದಾರೆ.

ADVERTISEMENT
ಮಲ್ಲು ಪೂಜಾರಿ

‘ಆರೋಪಿಗಳನ್ನು ಗಡಿಪಾರು ಮಾಡಿ’

‘ಮುತ್ತಗಾಗ್ರಾಮದಲ್ಲಿ ಶರಣಸಾಹಿತ್ಯದ ಶ್ರೇಷ್ಠ ಶರಣ ನಿಜಶರಣ ಅಂಬಿಗರ ಚೌಡಯ್ಯ ಅವರ ಮೂರ್ತಿಗೆ ಭಗ್ನ ಮಾಡಿರುವುದು ಖಂಡನೀಯ. ಕೃತ್ಯ ಎಸಗಿರುವ ಆರೋಪಿಗಳನ್ನು ಗಡಿಪಾರು ಮಾಡಬೇಕು’ ಎಂದು ಜಿಲ್ಲಾ ಕೋಲಿ ಕಬ್ಬಲಿಗ ಸಮಾಜದ ಯುವ ಘಟಕದ ಜಿಲ್ಲಾಧ್ಯಕ್ಷ ಮಲ್ಲು ಪೂಜಾರಿ ಆಗ್ರಹಿಸಿದ್ದಾರೆ.

‘ಅಂಬಿಗರ ಚೌಡಯ್ಯ ಅವರು ನಮ್ಮ ಸಮಾಜದ ಆದರ್ಶಪುರುಷ. ಅವರ ಮೂರ್ತಿಯನ್ನು ಹಾಳುಮಾಡಿದ ಕೃತ್ಯವು ಕೇವಲ ಮೂರ್ತಿಗೆ ಮಾತ್ರವಲ್ಲ ಸಮಾಜದ ಗೌರವಕ್ಕೆ ಅವಮಾನವಾಗಿದೆ. ಕೆಲ ವರ್ಷಗಳ ಹಿಂದೆಯೇ ಗ್ರಾಮದಲ್ಲಿ ಮೂರ್ತಿಯನ್ನು ಅನಾವರಣ ಮಾಡಲಾಗಿತ್ತು’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ. ಕೃತ್ಯ ಎಸಗಿದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ಸಮಾಜದ ಶಾಂತಿ ಹಾಳುಮಾಡುವ ದೇಶದ್ರೋಹ ಮನೋಭಾವದವರನ್ನು ಗಡಿಪಾರು ಮಾಡಬೇಕು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.