
ಸುರಪುರ: ‘ಗಾಯಗೊಂಡವರಿಗೆ ಆಸ್ಪತ್ರೆಗೆ ಸಾಗಿಸುವುದು, ಪ್ರಥಮ ಚಿಕಿತ್ಸೆ ಹಾಗೂ ತುರ್ತು ವೈದ್ಯಕೀಯ ಆರೈಕೆ ಒದಗಿಸುವುದು ಮತ್ತು ಅಗತ್ಯ ಉಪಕರಣಗಳೊಂದಿಗೆ ಜೀವಗಳನ್ನು ಉಳಿಸುವಲ್ಲಿ ಆಂಬುಲೆನ್ಸ್‌ಗಳು ಅಗತ್ಯ’ ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ಹೇಳಿದರು.
ನಗರದಲ್ಲಿ ಭಾನುವಾರ ಕೆಕೆಆರ್‌ಡಿಬಿ ಅನುದಾನದಡಿಯಲ್ಲಿ ಸುರಪುರ ಮತ್ತು ಹುಣಸಗಿ ತಾಲ್ಲೂಕಿಗೆ ಮಂಜೂರಾಗಿರುವ ತಲಾ ಒಂದೊಂದು ಆಂಬುಲೆನ್ಸ್‌ಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
‘ನನ್ನ ಕ್ಷೇತ್ರದಲ್ಲಿ ಇತರೆ ಮೂಲಸೌಲಭ್ಯಗಳ ಜತೆಯಲ್ಲಿ ಆರೋಗ್ಯ ಕ್ಷೇತ್ರಕ್ಕೂ ಹೆಚ್ಚಿನ ಒತ್ತು ಕೊಟ್ಟಿರುವೆ. ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವುದು ನನ್ನ ಉದ್ದೇಶವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ, ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು, ವೈದ್ಯಕೀಯ ಸಲಕರಣೆಗಳ ವ್ಯವಸ್ಥೆ, ಸಮರ್ಪಕ ವೈದ್ಯರು ಮತ್ತು ಸಿಬ್ಬಂದಿ ಒದಗಿಸುವುದರ ಜತೆಗೆ ಉತ್ತಮ ಸೇವೆಯ ಗುರಿ ಹೊಂದಲಾಗಿದೆ’ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ. ನಾಯಕ ಮಾತನಾಡಿ, ‘ಎರಡು ತಾಲ್ಲೂಕುಗಳಿಗೆ ಒಂದೊಂದು ಡಯಲಾಸಿಸ್ ಯಂತ್ರ, ಅವು ಶೀಘ್ರವೇ ಕಾರ್ಯಾರಂಭವಾಗಲಿದೆ. ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗಾಗಿ ₹ 25 ಲಕ್ಷದ ಮೈಕ್ರೋಸ್ಕೋಫ್ ಯಂತ್ರ ಒದಗಿಸಿದ್ದಾರೆ. ಇದರಿಂದ ಬಡವರ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಅನುಕೂಲವಾಗಲಿದೆ’ ಎಂದು ವಿವರಿಸಿದರು.
ಕೆವೈಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠ್ಠಲ ಯಾದವ, ಟಿಎಪಿಸಿಎಂಎಸ್ ಅಧ್ಯಕ್ಷ ರಾಜಾ ಸಂತೋಷನಾಯಕ, ಯುವ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷ ರಾಜಾ ಕುಮಾರನಾಯಕ, ಮುಖಂಡರಾದ ಮಲ್ಲಣ್ಣ ಸಾಹುಕಾರ ಮುಧೋಳ, ಶಕೀಲ್ ಅಹ್ಮದ್, ಗುಂಡಪ್ಪ ಸೊಲ್ಲಾಪುರ, ಬೀರಲಿಂಗ ಬಾದ್ಯಾಪುರ, ರಾಘವೇಂದ್ರ ಕುಲಕರ್ಣಿ ಗೆದ್ದಲಮರಿ, ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.