ADVERTISEMENT

ಅಮೃತ ಭಾರತ ನಿಲ್ದಾಣ | ಶೇ 40ರಷ್ಟು ಕಾಮಗಾರಿ ಪ್ರಗತಿ: ಎಂಜಿನಿಯರ್ ಜಗದೀಶ್

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 7:23 IST
Last Updated 4 ನವೆಂಬರ್ 2025, 7:23 IST
ಯಾದಗಿರಿ ರೈಲು ನಿಲ್ದಾಣದಲ್ಲಿ ಶನಿವಾರ ನಡೆದ ಅಮೃತ ಸಂವಾದ ಕಾರ್ಯಕ್ರಮದಲ್ಲಿ ರೈಲ್ವೆ ಗುಂತಕಲ್ ವಿಭಾಗದ ಎಂಜಿನಿಯರ್ ಜಗದೀಶ್ ಮಾತನಾಡಿದರು. ಸ್ವಚ್ಛತೆಯ ಎಂಜಿನಿಯರ್ ಜಿತೇಂದ್ರ ಕುಮಾರ್, ಎಡಿಇ ರಾಜು ಉಪಸ್ಥಿತರಿದ್ದರು
ಯಾದಗಿರಿ ರೈಲು ನಿಲ್ದಾಣದಲ್ಲಿ ಶನಿವಾರ ನಡೆದ ಅಮೃತ ಸಂವಾದ ಕಾರ್ಯಕ್ರಮದಲ್ಲಿ ರೈಲ್ವೆ ಗುಂತಕಲ್ ವಿಭಾಗದ ಎಂಜಿನಿಯರ್ ಜಗದೀಶ್ ಮಾತನಾಡಿದರು. ಸ್ವಚ್ಛತೆಯ ಎಂಜಿನಿಯರ್ ಜಿತೇಂದ್ರ ಕುಮಾರ್, ಎಡಿಇ ರಾಜು ಉಪಸ್ಥಿತರಿದ್ದರು   

ಯಾದಗಿರಿ: ‘ರೈಲು ನಿಲ್ದಾಣಗಳ ಆಧುನೀಕರಣಕ್ಕೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಮೃತ ಭಾರತ ನಿಲ್ದಾಣ ಯೋಜನೆಯಡಿ ಯಾದಗಿರಿ ರೈಲು ನಿಲ್ದಾಣ ಆಯ್ಕೆಯಾಗಿದ್ದು, ಮೊದಲ ಹಂತದಲ್ಲಿ ಶೇ 40ರಷ್ಟು ಕಾಮಗಾರಿ ಪ್ರಗತಿಯಲ್ಲಿದೆ’ ಎಂದು ರೈಲ್ವೆ ಗುಂತಕಲ್ ವಿಭಾಗದ ಎಂಜಿನಿಯರ್ ಜಗದೀಶ್ ತಿಳಿಸಿದರು.

ಇಲ್ಲಿನ ರೈಲು ನಿಲ್ದಾಣದಲ್ಲಿ ಶನಿವಾರ ನಡೆದ ಅಮೃತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಿಲ್ದಾಣದ ಆಧುನೀಕರಣವನ್ನು ಮೂರು ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ ನಿಲ್ದಾಣದ ಕಟ್ಟಡ, ಉದ್ಯಾನ, ವಾಹನಗಳ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುವುದು’ ಎಂದರು. 

‘ಮೊದಲ ಹಂತದಲ್ಲಿ ₹ 17.29 ಕೋಟಿ ಅನುದಾನ ಬಿಡುಗಡೆಯಾಗಿದ್ದು, ವಿವಿಧ ಕೆಲಸಗಳು ಪ್ರಗತಿಯಲ್ಲಿವೆ. 2026ರ ಜೂನ್‌ ವೇಳೆಗೆ ಮೊದಲ ಹಂತ ಪೂರ್ಣಗೊಳಿಸುವ ಗುರಿ ಇದೆ. ಆ ನಂತರ 2ನೇ ಹಂತದ ಕಾಮಗಾರಿಗಳನ್ನು ಆರಂಭಿಸಲಾಗುವುದು. 2ನೇ ಹಂತಕ್ಕೆ ಈಗಾಗಲೇ ₹ 35 ಕೋಟಿ ಅನುದಾನ ಮಂಜೂರಾಗಿದ್ದು, ಕೆಲವು ಕಾಮಗಾರಿಗಳ ಟೆಂಡರ್‌ ಸಹ ಆಗಿದೆ’ ಎಂದು ಹೇಳಿದರು.

ADVERTISEMENT

‘2ನೇ ಹಂತದಲ್ಲಿ ಮೂರು ಪ್ಲಾಟ್‌ಫಾರ್ಮ್‌ಗಳನ್ನು ಉನ್ನತೀಕರಿಸಲಾಗುವುದು. ವಿಶಾಲವಾದ ನಿರೀಕ್ಷಣ ಹಾಲ್, ಕೆಫೆಟೇರಿಯಾ, 12 ಮೀಟರ್ ಅಗಲದ ಫುಟ್‌ವೇರ್ ಬ್ರೀಡ್ಜ್‌, ಟಿಕೆಟ್ ಬುಕ್ಕಿಂಗ್ ಕಚೇರಿಗಳನ್ನು ನಿರ್ಮಿಸುವ ಗುರಿಯನ್ನು ಹಾಕಿಕೊಂಡಿದ್ದೇವೆ’ ಎಂದರು.

‘3ನೇ ಹಂತದ ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿದೆ. 2ನೇ ಹಂತದಲ್ಲಿಯೇ ಪ್ರತಿ ಪ್ಲಾಟ್‌ಫಾರ್ಮ್‌ಗಳಿಗೆ ಜೋಡಣೆ ಆಗುವಂತೆ ಲಿಫ್ಟ್‌ ಮತ್ತು ಎಸ್ಕಿಲೇಟರ್ ನಿರ್ಮಾಣ ಆಗಬೇಕಿತ್ತು. ಅನುದಾನದ ಅಡೆಚಣೆಯಿಂದಾಗಿ 3ನೇ ಹಂತದಲ್ಲಿ ಸೇರ್ಪಡೆಯಾಗಿದೆ. ನಿಲ್ದಾಣದ ಪಶ್ಚಿಮ ದಿಕ್ಕಿನಲ್ಲಿಯೂ ಟಿಕೆಟ್‌ ಕೌಂಟರ್‌ ವ್ಯವಸ್ಥೆಯೂ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

ವಿಭಾಗದ ಸ್ವಚ್ಛತೆಯ ಎಂಜಿನಿಯರ್ ಜಿತೇಂದ್ರ ಕುಮಾರ್ ಮಾತನಾಡಿ, ‘ಅಮೃತ ಭಾರತ ಯೋಜನೆಯಡಿ ಕೇವಲ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುತ್ತಿಲ್ಲ. ಇದರ ಜೊತೆಗೆ ಸ್ಥಳೀಯತೆಯನ್ನು ಕಾಪಾಡಿಕೊಂಡು ಪ್ರಯಾಣಿಕ ಸ್ನೇಹಿ ನಿಲ್ದಾಣವಾಗಿಸುವ ಉದ್ದೇಶವಿದೆ’ ಎಂದರು.

‘ರೈಲ್ವೆ ನಿಲ್ದಾಣದ ಬಗೆಗಿನ ಪೂರ್ವಗ್ರಹ ಪೀಡಿತ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲಾಗುವುದು. ನಿರ್ಮಾಣ ಹಂತದಲ್ಲಿರುವ ನಿಲ್ದಾಣದ ಕಟ್ಟಡ ರಚನೆ ಹಾಗೂ ಸೌಕರ್ಯಗಳು ಕಲ್ಪಿಸುವ ಬಗ್ಗೆ ಪ್ರಯಾಣಿಕರಿಂದ ಸಲಹೆ, ಸೂಚನೆಗಳನ್ನು ಪಡೆಯಲಾಗುವುದು. ಅಗತ್ಯ ಇದ್ದಲ್ಲಿ ಸಲಹೆಗಳ ಅನುಸಾರ ಕಾಮಗಾರಿಯಲ್ಲಿ ಬದಲಾವಣೆಯೂ ಮಾಡಿಕೊಳ್ಳಲಾಗುವುದು’ ಎಂದು ಹೇಳಿದರು.

‘ನಿರೀಕ್ಷಣ ಹಾಲ್, ಶೌಚಾಲಯದಂತಹ ಮೂಲಸೌಕರ್ಯಗಳ ಕೊರತೆಯ ಬಗ್ಗೆ ಪ್ರಯಾಣಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಭವಿಷ್ಯದಲ್ಲಿ ಅಂತಹ ದೂರುಗಳಿಗೆ ಅಸ್ಪದ ಇಲ್ಲದಂತೆ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಜಿಲ್ಲೆಯ ಸ್ಥಳೀಯ ಸಂಸ್ಕೃತಿ ಹಾಗೂ ಕಲೆಗಳನ್ನು ನಿಲ್ದಾಣದ ಕಟ್ಟಡ ರಚನೆಯಲ್ಲಿ ಅಳವಡಿಸಿಕೊಳ್ಳಲಾಗುವುದು. ಅವುಗಳಿಗೆ ಪ್ರೋತ್ಸಾಹವೂ ಕೊಡಲಾಗುವುದು’ ಎಂದು ಮಾಹಿತಿ ನೀಡಿದರು.

ಸಂವಾದದಲ್ಲಿ ವಿಭಾಗದ ಎಡಿಇ ರಾಜು, ನಿಲ್ದಾಣ ಮ್ಯಾನೇಜರ್, ಆರ್‌ಪಿಎಫ್ ಸಿಬ್ಬಂದಿ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.