ADVERTISEMENT

ಸುರಪುರ: ನೀರಿನಲ್ಲಿ ಯೋಗ ಮಾಡುವ ಸಾಹಸಿ

ಅಶೋಕ ಸಾಲವಾಡಗಿ
Published 27 ಫೆಬ್ರುವರಿ 2021, 19:31 IST
Last Updated 27 ಫೆಬ್ರುವರಿ 2021, 19:31 IST
ಚೀಲದೊಳಗೆ ದೇಹ ಸೇರಿಸಿ ಜಲಯೋಗ ಪ್ರದರ್ಶಿಸುತ್ತಿರುವ ಯಂಕಪ್ಪ ಗೋಡೆಕಾರ
ಚೀಲದೊಳಗೆ ದೇಹ ಸೇರಿಸಿ ಜಲಯೋಗ ಪ್ರದರ್ಶಿಸುತ್ತಿರುವ ಯಂಕಪ್ಪ ಗೋಡೆಕಾರ   

ಸುರಪುರ: ನಗರದ ಉದ್ದಾರ ಓಣಿಯ ನಿವಾಸಿ ಯಂಕಪ್ಪ ನರಸಪ್ಪ ಗೋಡೆಕಾರ ಹಠಯೋಗ ಮತ್ತು ನಾಟಿ ವೈದ್ಯ ಪದ್ಧತಿಯಲ್ಲಿ ಅನನ್ಯ ಸಾಧನೆ ಮಾಡುತ್ತಿದ್ದಾರೆ.

ಚೀಲದಲ್ಲಿ ಸಂಪೂರ್ಣ ದೇಹ ಸೇರಿಸಿ ಗಂಟೆಗಟ್ಟಲೆ ಜಲ ಯೋಗ ಮಾಡುತ್ತಾರೆ ಯಂಕಪ್ಪ. ವಿವಿಧ ರೋಗಗಳಿಗೆ ನಾಟಿ ಔಷಧಿ ನೀಡಿ ಗುಣ ಪಡಿಸುತ್ತಾರೆ.

ತಂದೆ, ತಾಯಿ ಶಾಲೆಗೆ ಕಳಿಸಿದರೂ ಓದು ರುಚಿಸಲಿಲ್ಲ. ಇರುವ ಅಲ್ಪ ಭೂಮಿಯಲ್ಲಿ ದುಡಿಮೆ ಮಾಡಿದರು. ಹೋಟೆಲ್ ಕೆಲಸ ಮಾಡಿದರು. ಮದುವೆ ಆದ ಮೇಲೆ ಸಂಸಾರಕ್ಕೆ ಹಣದ ಅಡಚಣೆ ಉಂಟಾದ್ದರಿಂದ ದುಡಿಯಲು ದೊಡ್ಡ ದೊಡ್ಡ ನಗರಗಳಿಗೆ ಅಲೆದರು. ಉತ್ತರ ಪ್ರದೇಶದಲ್ಲಿ ಯೋಗಗುರುಗಳು ಪರಿಚಯವಾಗಿ ಹಠಯೋಗ ಕಲಿತರು.

ADVERTISEMENT

ಬೇರೆ ಬೇರೆ ನಗರಗಳಲ್ಲಿ ನಾಗಾಸಾಧುಗಳ ಸೇವೆ ಮಾಡಿ ಅವರಿಂದ ನಾಟಿ ವೈದ್ಯ ಪದ್ಧತಿ ಕಲಿತರು. ಸುರಪುರದ ವೆಂಕಟೇಶ ಸುಗಂಧಿ ಅವರಲ್ಲಿ ಅಯುರ್ವೇದಿಕ್ ಔಷಧಿ ಪದ್ಧತಿ ಕಲಿತುಕೊಂಡರು. ಯಂಕಪ್ಪ ಮೊದಮೊದಲು ನೀರಿನ ಮೇಲೆ ಮಲಗಿ ಜಾಗೃತಾವಸ್ಥೆಯಲ್ಲಿ ತೇಲುವುದನ್ನು ಕಲಿತುಕೊಂಡರು. ನಂತರ ಎದೆ, ಮುಖ, ಹೊಟ್ಟೆಯ ಭಾಗ ತೇಲಿಸುವುದನ್ನು ಕಲಿತರು. ತದನಂತರ ತಲೆಯಿಂದ ಕಾಲಿನವರೆಗೆ ಇಡೀ ದೇಹವನ್ನೆ ತೇಲಿಸುವ ವಿಧಾನ ವೃದ್ಧಿಸಿಕೊಂಡರು.

ಚೀಲದಲ್ಲಿ ಇಡೀ ದೇಹ ಸೇರಿಸಿ ಕೈ ಮತ್ತು ಮುಖ ಹೊರಗಿಟ್ಟುಕೊಂಡು ಪದ್ಮಾಸನದಲ್ಲಿ ಕೂಡುತ್ತಾರೆ. ನಂತರ ಗೆಳೆಯರು ಅವರನ್ನು ಬಾವಿಯ ನೀರಿಗೆ ಎಸೆಯುತ್ತಾರೆ. ಯಂಕಪ್ಪ ನೀರಲ್ಲಿ ಮುಳುಗದೆ ಪದ್ಮಾಸನ, ಗಜಾಸನ, ಶವಾಸನ ಸೇರಿದಂತೆ ಗಂಟೆಗಟ್ಟಲೆ ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸುತ್ತಾರೆ.

ದೇವರ ಬಾವಿ, ಬಹಿರಿ ಬಾವಿ, ನಾಯಕನ ಬಾವಿ, ರಂಗಂಪೇಟೆಯ ದೊಡ್ಡ ಬಾವಿ ಸೇರಿದಂತೆ ವಿವಿಧೆಡೆ ಅನೇಕ ಬಾರಿ ಪ್ರದರ್ಶನ ನೀಡಿ ಜನರಿಗೆ ಅಚ್ಚರಿ ಮೂಡಿಸಿದ್ದಾರೆ.

ಗಿಡಮೂಲಿಕೆ ಔಷಧಿ ನೀಡುವಲ್ಲಿ ಸಿದ್ದ ಹಸ್ತರು. ಹಿಮಾಲಯ ಸೇರಿದಂತೆ ವಿವಿಧೆಡೆ ತೆರಳಿ ಅಲ್ಲಿಂದ ಗಿಡಮೂಲಕೆಗಳನ್ನು ತರುತ್ತಾರೆ. ಕೆಲವೊಂದನ್ನು ಸ್ಥಳೀಯವಾಗಿ ಸಂಗ್ರಹಿಸುತ್ತಾರೆ, ಕಳೆದ 20 ವರ್ಷಗಳಿಂದ ವಿವಿಧ ರೋಗಗಳಿಗೆ ಔಷಧಿ ನೀಡುತ್ತಿದ್ದಾರೆ. ನಾಟಿ ವೈದ್ಯರ ರಾಜ್ಯ ಪರಿಷತ್ ಸದಸ್ಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.