ADVERTISEMENT

ಗುರುಮಠಕಲ್‌ | ಕಾರ್ಯಕರ್ತೆಯರ ಹಗ್ಗಜಗ್ಗಾಟ: ಅಂಗನವಾಡಿಗೆ ಗ್ರಾಮಸ್ಥರಿಂದ ಬೀಗ

ಎಂ.ಪಿ.ಚಪೆಟ್ಲಾ
Published 22 ಜುಲೈ 2025, 4:53 IST
Last Updated 22 ಜುಲೈ 2025, 4:53 IST
ಗುರುಮಠಕಲ್ ತಾಲ್ಲೂಕಿನ ಮುಸಿಲೇಪಲ್ಲಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಬೀಗಹಾಕಿದ ಗ್ರಾಮಸ್ಥರು 
ಗುರುಮಠಕಲ್ ತಾಲ್ಲೂಕಿನ ಮುಸಿಲೇಪಲ್ಲಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಬೀಗಹಾಕಿದ ಗ್ರಾಮಸ್ಥರು    

ಗುರುಮಠಕಲ್‌: ತಾಲ್ಲೂಕಿನ ಮುಸಲೇಪಲ್ಲಿಯ ಅಂಗನವಾಡಿಯಲ್ಲಿ ‘ಅಧಿಕಾರದ’ ಹಗ್ಗಜಗ್ಗಾಟದಿಂದಾಗಿ ಅಂಗನವಾಡಿ ಬಾಗಿಲು ಮುಚ್ಚಿದ್ದು, ಅಂಗನವಾಡಿಗೆ ಬರುತ್ತಿದ್ದ ಮಕ್ಕಳ ಸ್ಥಿತಿಯು ‘ಗಂಡ-ಹೆಂಡಿರ ಜಗಳದಲ್ಲಿ ಕೂಸು ನುಗ್ಗಾಯ್ತು’ ಎನ್ನುವ ಗಾದೆಯನ್ನು ನೆನಪಿಸುತ್ತಿದೆ.

ವಿವರ: ತಾಲ್ಲೂಕಿನ ಮುಸಲೇಪಲ್ಲಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿದ್ದ ಇಂದ್ರಮ್ಮ ಅವರು 2023ರಲ್ಲಿ ಮೃತಪಟ್ಟಿದ್ದರು. ಆಗ ಮಮತಾ ಎನ್ನುವವರಿಗೆ ಪ್ರಭಾರ ವಹಿಸಲಾಗಿತ್ತು. ಆದರೆ, 2023ರ ಡಿಸೆಂಬರ್ ತಿಂಗಳಲ್ಲಿ ಚೌಡಮ್ಮ ಎನ್ನುವವರು ಕಾಯಂ ಕಾರ್ಯಕರ್ತೆಯಾಗಿ ನಿಯೋಜಿತರಾಗಿದ್ದಾರೆ.

ಪ್ರಭಾರಿ ಕಾರ್ಯಕರ್ತೆ ಈವರೆಗೂ ಅಂಗನವಾಡಿಯ ದಾಖಲಾತಿಗಳು, ಇಲಾಖೆಯ ಕೆಲಸಗಳನ್ನು ಮಾಡಬೇಕಾದ ‘ಇಲಾಖೆಯ ಮೊಬೈಲ್’ ಅನ್ನೂ ಕಾಯಂ ಕಾರ್ಯಕರ್ತೆಗೆ ನೀಡುತ್ತಿಲ್ಲ. ಜತೆಗೆ ಮನೆಯಲ್ಲೇ ಕೂತು ಮಕ್ಕಳ ಹಾಜರಾತಿಯನ್ನು ಮೊಬೈಲ್‌ನಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.

ADVERTISEMENT

‘ಈ ಕುರಿತು 2025ರ ಫೆಬ್ರವರಿ ತಿಂಗಳಲ್ಲೂ ಸಿಡಿಪಿಒ ಅವರಿಗೆ ಮನವಿ ನೀಡಿದ್ದೇವೆ ಮತ್ತು ಸರ್ಕಾರದ ಜನಸ್ಪಂದನ ಆ್ಯಪ್ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೂ ದೂರು ನೀಡಲಾಗಿದೆ’ ಎಂದು ಗ್ರಾಮದ ಸಿದ್ದರಾಜ ಮಂಜೆಲಿ ತಿಳಿಸಿದರು.

ಸಮಸ್ಯೆ ಕುರಿತು ನೀಡಿದ ‘ದೂರು ಪರಿಹಾರವಾಗಿದೆ’ ಎಂದು ಆ್ಯಪ್‌ನಲ್ಲಿ ತೋರಿಸಲಾಗುತ್ತಿದೆ. ಆದರೆ, ವಾಸ್ತವವಾಗಿ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ. ಆದ್ದರಿಂದ ‘ಸಂಬಂಧಿತರು ಗ್ರಾಮಕ್ಕೆ ಬಂದು ಸಮಸ್ಯೆ ಪರಿಹರಿಸಲಿ ಎನ್ನುವ ಉದ್ದೇಶದಿಂದ ಜುಲೈ 12ರಂದು ಬೀಗಹಾಕಿದ್ದೇವೆ’ ಎನ್ನುವುದು ಗ್ರಾಮಸ್ಥರ ಮಾತು.

ಕಾರ್ಯಕರ್ತೆಯರ ಸಮಸ್ಯೆಯಿಂದಾಗಿ ನಿತ್ಯ ಅಂಗನವಾಡಿಗೆ ಬರುವ ನೋಂದಾಯಿತ 18 ಮಕ್ಕಳು ಮತ್ತು 20 ಜನ ‘ಮನೆ ಮಕ್ಕಳು’ ಸೇರಿ 38 ಮಕ್ಕಳಿಗೆ ಸದ್ಯ ಸರ್ಕಾರದ ಯೋಜನೆ ಸಿಗದಂತಾಗಿದೆ. ಕೂಡಲೇ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಂಬಂಧಿತ ಇಲಾಖೆ ಕ್ರಮವಹಿಸಲಿ ಎನ್ನುವುದು ಗ್ರಾಮದ ವೆಂಕಟೇಶ ಅವರ ಮನವಿ.ಗ್ರಾಮಸ್ಥರು ಸತತ ದೂರು ನೀಡಿ ಮನವಿ ಮಾಡಿದರೂ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಮೊದಲು ಕ್ರಮವಾಗಲಿ. ಜತೆಗೆ ಅಂಗನವಾಡಿ ಸಮಸ್ಯೆಯನ್ನು ಶೀಘ್ರ ಬಗೆಹರಿಸಲಿ - ಶರಣಬಸಪ್ಪ ಎಲ್ಲೇರಿ ಸಾಮಾಜಿಕ ಕಾರ್ಯಕರ್ತ

ಪ್ರಭಾರಿ ಕಾರ್ಯಕರ್ತೆ ಕಾಯಂ ನಿಯೋಜಿತ ಕಾರ್ಯಕರ್ತೆಗೆ ಅಂಗನವಾಡಿಯನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ಸಮಸ್ಯೆ ಕುರಿತು ಸಂಬಂಧಿತರಿಗೆ ದೂರು ನೀಡಿದರೂ ಕ್ರಮವಾಗಿಲ್ಲ
- ವೆಂಕಟೇಶ ಗ್ರಾಮಸ್ಥ
ಗ್ರಾಮಸ್ಥರು ಸತತ ದೂರು ನೀಡಿ ಮನವಿ ಮಾಡಿದರೂ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಮೊದಲು ಕ್ರಮವಾಗಲಿ. ಜತೆಗೆ ಅಂಗನವಾಡಿ ಸಮಸ್ಯೆಯನ್ನು ಶೀಘ್ರ ಬಗೆಹರಿಸಲಿ
- ಶರಣಬಸಪ್ಪ ಎಲ್ಲೇರಿ ಸಾಮಾಜಿಕ ಕಾರ್ಯಕರ್ತ

ಸಮಿತಿ ಸಭೆಯಲ್ಲಿ ಸಮಸ್ಯೆ ಬಗೆಹರಿಯಲಿದೆ: ಸಿಡಿಪಿಒ

ಮುಸಲೇಪಲ್ಲಿ ಅಂಗನವಾಡಿಗೆ ಸಂಬಂಧಿಸಿದಂತೆ ಚೌಡಮ್ಮ ಎನ್ನುವ ಕಾರ್ಯಕರ್ತೆ ನಿಯೋಜಿತರಾಗಿದ್ದು ಕೆಲ ಗ್ರಾಮಸ್ಥರು ಚೌಡಮ್ಮ ಅವರೇ ಇರಲಿ ಎನ್ನುತ್ತಾರೆ. ಕೆಲವರು ಮಮತಾ ಎನ್ನುವ ಕಾರ್ಯಕರ್ತೆ ಮುಂದುವರಿಯಲಿ ಎನ್ನುತ್ತಾರೆ ಇನ್ನೂ ಕೆಲವರು ಇಬ್ಬರೂ ಬೇಡ ಹೊಸಬರನ್ನು ನಿಯೋಜನೆ ಮಾಡುವಂತೆ ಕೇಳುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಶೀಘ್ರವೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿನ ಅಂಗನವಾಡಿ ಕಾರ್ಯಕರ್ತೆಯರ ಆಯ್ಕೆ ಸಮಿತಿ ಸಭೆಯಲ್ಲಿ ಚರ್ಚಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಸಿಡಿಪಿಒ ಶರಣಬಸಪ್ಪ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.