ಗುರುಮಠಕಲ್ (ಯಾದಗಿರಿ ಜಿಲ್ಲೆ): ಸಮೀಪದ ಬೂದೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳನ್ನು ಕೂರಿಸಿ ಬೀಗಹಾಕಿಕೊಂಡು ಜಮೀನಿಗೆ ತೆರಳಿದ್ದ ಅಂಗನವಾಡಿ ಸಹಾಯಕಿ ಸಾವಿತ್ರಮ್ಮ ಸಾಬಣ್ಣ ಅವರ ಗೌರವ ಮಾನ್ಯತೆ ಆದೇಶ ಹಿಂಪಡೆಯುವಂತೆ ಸಿಡಿಪಿಒ ಶರಣಬಸವ ಅವರು ಶನಿವಾರ ಮೇಲಾಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ.
ಜುಲೈ 30ರಂದು ಅಂಗನವಾಡಿ ಕಾರ್ಯಕರ್ತೆ ಸರೋಜಮ್ಮ ಅವರು ವಲಯಮಟ್ಟದ ಸಭೆಗೆ ತೆರಳಿದ್ದರು. ಅದೇ ದಿನ ಸಾವಿತ್ರಮ್ಮ ಅವರು ಮಕ್ಕಳನ್ನು ಅಂಗನವಾಡಿಯಲ್ಲಿ ಕೂಡಿಹಾಕಿ ತಮ್ಮ ಜಮೀನಿಗೆ ಹೋಗಿದ್ದರು. ಮಕ್ಕಳು ಅಳುವುದನ್ನು ಕೇಳಿ ಗ್ರಾಮಸ್ಥರು ಹತ್ತಿರ ಬಂದು, ಬಳಿಕ ಅಧಿಕಾರಿಗಳ ಗಮನಕ್ಕೆ ತಂದಿದ್ದರು.
ಸಿಡಿಪಿಒ ಶರಣಬಸವ ಮತ್ತು ಅಂಗನವಾಡಿ ಮೇಲ್ವಿಚಾರಕಿ ಗಂಗೂಬಾಯಿ ಅವರು ಅಂಗನವಾಡಿಗೆ ಭೇಟಿ ನೀಡಿ, ಪರಿಶೀಲಿಸಿದರು. ಸಾವಿತ್ರಮ್ಮ ಅವರು ಕರ್ತವ್ಯ ಬೇಜವಾಬ್ದಾರಿ ತೋರಿದ್ದು, ಅವರ ಗೌರವ ಮಾನ್ಯತಾ ಆದೇಶ ಹಿಂಪಡೆಯುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ವರದಿ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.