ADVERTISEMENT

ಶಹಾಬಾದ್ ನಗರಸಭೆ ಮಾಜಿ ಅಧ್ಯಕ್ಷೆ ಕೊಲೆಗೆ ಯತ್ನ: ಶಂಕಿತ ನಾಲ್ವರು ಪೊಲೀಸರ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 5:54 IST
Last Updated 14 ನವೆಂಬರ್ 2025, 5:54 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಯಾದಗಿರಿ: ಶಹಾಬಾದ್ ನಗರಸಭೆಯ ಮಾಜಿ ಅಧ್ಯಕ್ಷೆಯಾಗಿದ್ದ ಸಮಾಜ ಕಲ್ಯಾಣ ಇಲಾಖೆಯ ದ್ವಿತೀಯ ದರ್ಜೆ ಸಹಾಯಕಿ (ಎಸ್‌ಡಿಎ) ಅಂಜಲಿ ಗಿರೀಶ ಕಂಬಾನೂರ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಪ್ರಕರಣದಡಿ ನಾಲ್ವರು ಶಂಕಿತರನ್ನು ಪೊಲೀಸರು ಬುಧವಾರ ತಡರಾತ್ರಿ ವಶಕ್ಕೆ ಪಡೆದಿದ್ದಾರೆ.

ವಿಜಯಪುರದ ಬಸ್‌ ನಿಲ್ದಾಣದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ದತ್ತಾತ್ರೇಯ, ಯಲ್ಲಪ್ಪ, ಜಗದೀಶ ಮತ್ತು ಕಾಶಿನಾಥ ಎಂಬುವವರನ್ನ ವಶಕ್ಕೆ ಪಡೆಯಲಾಗಿದೆ. ಇನ್ನೂ ಮೂವರು ತಲೆ ಮರೆಸಿಕೊಂಡಿದ್ದು, ಅವರ ಪ‍ತ್ತೆಗೆ ಬಲೆ ಬೀಸಲಾಗಿದೆ. ಈ ಆರೋಪಿಗಳು ಶಹಾಬಾದ್ ಮತ್ತು ಚಿತ್ತಾಪುರ ಮೂಲದವರು ಎಂದು ಮೂಲಗಳು ತಿಳಿಸಿವೆ.

ADVERTISEMENT

ಕಾರಿನಲ್ಲಿ ಕಚೇರಿಗೆ ತೆರಳುತ್ತಿದ್ದ ಅಂಜಲಿ ಅವರನ್ನು ಗ್ರೀನಿ ಸಿಟ್ ಸಮೀಪ ಅಡ್ಡಗಟ್ಟಿದ ಐದಾರು ಜನರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಬಳಿಕ ಕಾರಿನಲ್ಲಿ ಅಲ್ಲಿಂದ ಪರಾರಿಯಾದರು. ಆರೋಪಿಗಳ ಜಾಡು ಹಿಡಿದು ಬೆನ್ನು ಹತ್ತಿದ ಪೊಲೀಸರು, ಕೃತ್ಯದ ನಡೆದು 12 ಗಂಟೆಗಳಲ್ಲಿ ಶಂಕಿತರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ದಾಳಿಯ ಬಳಿಕ ಶಂಕಿತ ದುಷ್ಕರ್ಮಿಗಳು ಕಾರಿನಲ್ಲಿ ಪರಾರಿಯಾದರು. ಜೇವರ್ಗಿಯವರೆಗೆ ಕಾರಿನಲ್ಲಿ ತೆರಳಿದರು. ಜೇವರ್ಗಿಯಲ್ಲಿ ಬಟ್ಟೆಗಳನ್ನು ಬದಲಾಯಿಸಿಕೊಂಡು, ಸ್ನಾನ ಮಾಡಿ ಅಲ್ಲಿಂದ ವಿಜಯಪುರಕ್ಕೆ ಬಸ್‌ನಲ್ಲಿ ಪ್ರಯಾಣಿಸಿದ್ದಾರೆ. ವಿಜಯಪುರ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಸ್ಥಳೀಯ ಪೊಲೀಸರು ಗಮನಿಸಿದರು. ತಕ್ಷಣವೇ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೊಲೆಗೆ ಯತ್ನಿಸಿ ಮಹಾರಾಷ್ಟ್ರದಲ್ಲಿ ತಲೆ ಮರೆಸಿಕೊಳ್ಳಲು ಯತ್ನಿಸುತ್ತಿದ್ದರು ಎಂಬುದು ಗೊತ್ತಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕೃತ್ಯದ ಬಳಿಕ ಪೊಲೀಸರು ಯಾದಗಿರಿ ಸೇರಿದಂತೆ ಸುತ್ತಲಿನ ಜಿಲ್ಲೆಗಳ ಪೊಲೀಸ್ ಠಾಣೆಗಳೊಂದಿಗೆ ಶಂಕಿತರು ‍ಪರಾರಿ ಆಗುತ್ತಿರುವ ಮಾಹಿತಿಯನ್ನು ಹಂಚಿಕೊಂಡಿದ್ದರು. ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿಯೂ ಇದ್ದರು. ಹೀಗಾಗಿ, ಘಟನೆ ನಡೆದು 12 ಗಂಟೆಯಲ್ಲಿ ಶಂಕಿತರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ವಿಚಾರಣೆ ನಡೆಯುತ್ತಿದ್ದು, ಸುಪಾರಿ ಪಡೆದು ಕೊಲೆಗೆ ಯತ್ನಿಸಿದ್ದಾಗಿ ಶಂಕಿತರು ಬಾಯಿಬಿಟ್ಟಿದ್ದಾರೆ. ಶಂಕಿತರು ಈ ಹಿಂದೆ ಇಂತಹ ಯಾವುದೇ ಪ್ರಕರಣದಲ್ಲಿ ಭಾಗಿಯಾಗದೆ ಇರುವುದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ ಎಂದಿವೆ. 

ಕೃತ್ಯದಲ್ಲಿ ಇನ್ನೂ ಮೂವರು ಭಾಗಿಯಾಗಿದ್ದು, ಅವರೆಲ್ಲರೂ ತಲೆ ಮರೆಸಿಕೊಂಡಿದ್ದಾರೆ. ಅಂಜಲಿ ಪತ್ನಿ ಗಿರೀಶ ಕೊಲೆ ಪ್ರಕರಣದ ಆರೋಪಿಗಳಾದ ಶಂಕರ ಮತ್ತು ವಿಜಯ ಅವರ ಹೆಸರು ಕೇಳಿಬಂದಿದೆ. ಈ ಇಬ್ಬರಿಗಾಗಿ ಶೋಧ ಕಾರ್ಯ ನಡೆದಿದೆ. ಎಲ್ಲ ಆಯಾಮಗಳಿಂದ ತನಿಖೆ ನಡೆಯುತ್ತಿದೆ ಎಂದು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.