ADVERTISEMENT

ಹಿರಿಯರ ಮನೆ ಬಾಗಿಲಿಗೆ ಪಡಿತರ: ಅನ್ನ ಸುವಿಧಾ ಯೋಜನೆಗೆ 2,085 ಅರ್ಹ

ಅನ್ನ ಸುವಿಧಾ ಯೋಜನೆಗೆ 2,085 ಅರ್ಹ: ಯಾದಗಿರಿ, ಸುರಪುರದಲ್ಲಿ ಅತಿ ಹೆಚ್ಚು ಫಲಾನುಭವಿಗಳು

ಮಲ್ಲಿಕಾರ್ಜುನ ನಾಲವಾರ
Published 14 ಡಿಸೆಂಬರ್ 2025, 6:22 IST
Last Updated 14 ಡಿಸೆಂಬರ್ 2025, 6:22 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಯಾದಗಿರಿ: ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯು ‘ಅನ್ನ ಸುವಿಧಾ ಯೋಜನೆ’ಯಡಿ ಜಿಲ್ಲೆಯಲ್ಲಿ 75 ವರ್ಷ ಮೇಲ್ಪಟ್ಟ 2,085 ಹಿರಿಯ ನಾಗರಿಕರನ್ನು ಗುರುತಿಸಿದೆ.

ರಾಜ್ಯ ಸರ್ಕಾರವು 2025–26ನೇ ಸಾಲಿನ ಬಜೆಟ್‌ನಲ್ಲಿ 75 ವರ್ಷ ದಾಟಿದ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿ ಹೊಂದಿರುವ ಪಡಿತರ ಚೀಟಿದಾರರ ಮನೆ ಬಾಗಲಿಗೆ ಆಹಾರ ಧಾನ್ಯ ವಿತರಿಸುವ ‘ಅನ್ನ ಸುವಿಧಾ’ ಯೋಜನೆಯನ್ನು ಘೋಷಣೆ ಮಾಡಿತ್ತು. ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿ ಈಗ ಅದನ್ನು ಅನುಷ್ಠಾನಕ್ಕೆ ತರುತ್ತಿದೆ.

ಅಂತ್ಯೋದಯ ಅನ್ನ ಯೋಜನೆ (ಎಎವೈ) ಅಡಿ 270 ಹಾಗೂ ಆದ್ಯತಾ ಕುಟುಂಬಗಳ ಪಡಿತರ ಚೀಟಿ (ಪಿಎಚ್‌ಎಚ್‌) ಅಡಿ 1,815 ಸೇರಿ ಒಟ್ಟು 2,085 ಪಡಿತರ ಚೀಟಿಗಳು ‘ಅನ್ನ ಸುವಿಧಾ’ ಯೋಜನೆಯಡಿ ಆಹಾರ ಧಾನ್ಯ ಪಡೆಯಲು ಅರ್ಹರಿರುತ್ತಾರೆ.

ADVERTISEMENT

ಪಂಚ ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯದಡಿ ಪ್ರತಿ ತಿಂಗಳು ಪಡಿತರ ನೀಡಲಾಗುತ್ತಿದೆ. ಸಮೀಪದ ನ್ಯಾಯಬೆಲೆ ಅಂಗಡಿಗಳಲ್ಲಿ ನೋಂದಾಯಿತರಾದ 75 ವರ್ಷ ಮೇಲ್ಪಟ್ಟ ಹಿರಿಯರಿಗೆ, ಮನೆಯಲ್ಲಿ ಕೇವಲ ಒಬ್ಬ ಅಥವಾ ಇಬ್ಬರು ಹಿರಿಯರಷ್ಟೇ ಇರುವ ಕುಟುಂಬಗಳ ಮನೆ ಬಾಗಿಲಿಗೆ ಪಡಿತರ ಧಾನ್ಯ ತಲುಪಲಿದೆ.

ಜಿಲ್ಲೆಯಲ್ಲಿ ಅತ್ಯಧಿಕ 600 ಹಿರಿಯ ನಾಗರಿಕರು ಯಾದಗಿರಿ ತಾಲ್ಲೂಕಿನಲ್ಲಿಯೇ ಇದ್ದಾರೆ. ಸುರಪುರ ತಾಲ್ಲೂಕಿನಲ್ಲಿ 387 ಹಾಗೂ ಗುರುಮಠಕಲ್ ತಾಲ್ಲೂಕಿನಲ್ಲಿ 370 ಹಿರಿಯರು ವಾಸವಾಗಿದ್ದಾರೆ. ಅತಿ ಕಡಿಮೆ 179 ಹಿರಿಯ ನಾಗರಿಕರು ವಡಗೇರಾ ತಾಲ್ಲೂಕಿನಲ್ಲಿ ಇದ್ದಾರೆ ಎಂಬುದು ಗೊತ್ತಾಗಿದೆ.

ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ವಾಸವಾಗಿರುವ 75ಕ್ಕಿಂತಲೂ ಹೆಚ್ಚು ವಯಸ್ಸಾಗಿರುವ ಹಿರಿಯ ನಾಗರಿಕರ ಪಟ್ಟಿಯನ್ನು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯು ಪಟ್ಟಿ ಮಾಡಿದೆ. ಆಯಾ ತಾಲ್ಲೂಕುಗಳಲ್ಲಿ ಇರುವ ನ್ಯಾಯಬೆಲೆ ಅಂಗಡಿಗಳೊಂದಿಗೆ ಅದರ ಮಾಹಿತಿಯನ್ನು ಹಂಚಿಕೊಂಡಿದೆ.

‘ಅನ್ನ ಸುವಿಧಾ ಯೋಜನೆಗೆ ಅರ್ಹತೆ ಪಡೆದುಕೊಂಡಿರುವ ಪಡಿತರ ಚೀಟಿದಾರರು ಯೋಜನೆಯ ಲಾಭ ಪಡೆಯಲು ಬಯಸಿದ್ದಲ್ಲಿ ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿಗಳಿಗೆ ತೆರಳಬೇಕು. ಆಯಾ ತಿಂಗಳ 1ನೇ ತಾರೀಖಿನಿಂದ 5ರ ಒಳಗಾಗಿ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಸಬೇಕು’ ಎನ್ನುತ್ತಾರೆ ಆಹಾರ ಇಲಾಖೆ ಕಚೇರಿ ನೌಕರ ಹನುಮೇಶ.

‘ಫಲಾನುಭವಿಗಳ ಪಡಿತರ ಚೀಟಿಗೆ ಜೋಡಣೆ ಮಾಡಲಾದ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ಯಾವ ದಿನ, ಎಷ್ಟು ಹೊತ್ತಿಗೆ ಪಡಿತರ ಬರುತ್ತದೆ ಎಂಬುದರ ಸಂದೇಶ ಕಳುಹಿಸಲಾಗುತ್ತದೆ. ತಿಂಗಳಿನ 6ನೇ ತಾರೀಖಿನಿಂದ 15ರ ನಡುವೆ ಪಡಿತರ ಧಾನ್ಯ ಮನೆ ಬಾಗಿಲಿಗೆ ತಲುಪಲಿದೆ’ ಎಂದು ಹೇಳುತ್ತಾರೆ.

ಅಶಕ್ತರ ಓಡಾಟಕ್ಕೆ ತಡೆ

‘ಅನ್ನ ಸುವಿಧಾ ಯೋಜನೆ’ಯಿಂದಾಗಿ ವೃದ್ಧರು ಮಹಿಳೆಯರು ಮತ್ತು ದೈಹಿಕವಾಗಿ ಅಶಕ್ತರಾಗಿರುವ ಫಲಾನುಭವಿಗಳು ಪಡಿತರಕ್ಕಾಗಿ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಸರತಿ ಸಾಲಿನಲ್ಲಿ ನಿಂತು ಓಡಾಡುವುದು ತಪ್ಪಲಿದೆ. ಆದ್ಯತಾ ಕುಟುಂಬಕ್ಕೆ ಪ್ರತಿ ವ್ಯಕ್ತಿಗೆ 5 ಕೆ.ಜಿ. ಹಾಗೂ ಅಂತ್ಯೋದಯ ಅನ್ನ ಯೋಜನೆ ಕುಟುಂಬಕ್ಕೆ 35 ಕೆ.ಜಿ. ಪಡಿತರ ‘ಡೋರ್‌ ಟು ಡೋರ್’ ತಲುಪಲಿದೆ. ಪಡಿತರವನ್ನು ಮನೆ ಬಾಗಿಲಿಗೆ ತಲುಪಿಸುವ ನ್ಯಾಯಬೆಲೆ ಅಂಗಡಿಯ ಮಾಲೀಕರಿಗೆ ಪ್ರತಿ ಕುಟುಂಬಕ್ಕೆ ರಾಜ್ಯ ಸರ್ಕಾರವು ₹ 50 ಪಾವತಿ ಮಾಡುವುದಾಗಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.