ಸುರಪುರದಲ್ಲಿ ಮಂಗಳವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು
ಸುರಪುರ: ‘ಜಿಲ್ಲೆಯಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಯಾವುದೇ ರೀತಿಯ ಚಟುವಟಿಕೆಗಳಿಗೆ ಹಾಗೂ ಆಧುನಿಕ ವಚನಗಳ ಕೃತಿ ಪ್ರಕಟಣೆ ಸೇರಿದಂತೆ ಶರಣ ಸಾಹಿತ್ಯಕ್ಕೆ ಎಲ್ಲ ರೀತಿಯ ನೆರವನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ನೀಡಲಿದೆ’ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ತಿಳಿಸಿದರು.
ನಗರದ ರಂಗಂಪೇಟೆಯ ಬಸವಪ್ರಭು ಕೇಂದ್ರದಲ್ಲಿ ಮಂಗಳವಾರ ನಡೆದ ಪರಿಷತ್ತಿನ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ನೇಮಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಶರಣ ಸಾಹಿತ್ಯ ಉತ್ತಮ ಸಮಾಜ ನಿರ್ಮಾಣಕ್ಕೆ ತುಂಬಾ ಅಗತ್ಯವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಅನೇಕ ಜನ ಶರಣ ಸಾಹಿತಿಗಳನ್ನು ಗುರುತಿಸಿ ಅವರ ಪುಸ್ತಕಗಳನ್ನು ಪ್ರಕಟಿಸುವ ಕಾರ್ಯವನ್ನು ಪರಿಷತ್ತು ಮಾಡುತ್ತಿದೆ. ನೂತನ ಪದಾಧಿಕಾರಿಗಳು ತಾಲ್ಲೂಕಿನಲ್ಲಿ ಶರಣ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡುವಂತೆ’ ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಪರಿಷತ್ತಿನ ರಾಷ್ಟ್ರೀಯ ಹಿರಿಯ ಉಪಾಧ್ಯಕ್ಷ ಅಪ್ಪಾರಾವ್ ಅಕ್ಕೋಣಿ ಮಾತನಾಡಿ, ‘ಸುತ್ತೂರಿನ ರಾಜೇಂದ್ರ ದೇಶಿಕೇಂದ್ರ ಸ್ವಾಮೀಜಿಗಳಿಂದ ಆರಂಭಗೊಂಡಿರುವ ಪರಿಷತ್ತು ಇಂದು ಕರ್ನಾಟಕ ಮಾತ್ರವಲ್ಲದೆ, ಹೊರ ನಾಡು ಮತ್ತು ವಿದೇಶಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ’ ಎಂದರು.
ಪರಿಷತ್ತಿನ ಯುವ ಘಟಕದ ರಾಜ್ಯ ಸಂಚಾಲಕ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ, ‘ಕಳೆದ ಒಂದು ದಶಕದಿಂದ ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕಿನಲ್ಲಿ ಕೆಲಸ ಮಾಡಿಕೊಂಡು ಬರುತ್ತಿದೆ’ ಎಂದರು.
ವೀರಶೈವ ಲಿಂಗಾಯತ ಸಮಿತಿ ಅಧ್ಯಕ್ಷ ಸುರೇಶ ಸಜ್ಜನ್, ಉಪನ್ಯಾಸಕ ಅಬ್ದುಲ್ ಕರೀಂ ಕನ್ಯೆಕೋಳೂರ, ಶಿವಶರಣಪ್ಪ ಹೆಡಗಿನಾಳ, ಜಗದೀಶ ಪಾಟೀಲ, ಸೋಮರಾಯ ಶಖಾಪುರ, ಅಮರೇಶ ಕುಂಬಾರ, ರವಿಗೌಡ ಹೆಮನೂರ, ಸಿದ್ದಣಗೌಡ ಹೆಬ್ಬಾಳ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ನೀಲಾಂಬಿಕಾ ಪಾಟೀಲ, ಸಂಗಣ್ಣ ತುಂಬಗಿ ಕೆಂಭಾವಿ, ದೇವಿಂದ್ರ ಕರಡಕಲ್, ಅಪ್ಪು ಸೂಗೂರ, ಹಣಮಂತ್ರಾಯ ದೇವತ್ಕಲ್, ಶ್ರೀಕಾಂತ ರತ್ತಾಳ ಭಾಗವಹಿಸಿದ್ದರು.
ತಾಲ್ಲೂಕು ಸಮಿತಿಗೆ ಈ ಕೆಳಗಿನಂತೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಚನ್ನಬಸವ ಶಿವಾಚಾರ್ಯ (ಗೌರವಾಧ್ಯಕ್ಷ), ಸುರೇಶ ಸಜ್ಜನ್ (ಗೌರವ ಸಲಹೆಗಾರ), ರಾಜು ಕುಂಬಾರ (ಅಧ್ಯಕ್ಷ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.