ADVERTISEMENT

ಸುರಪುರ:ಕೆರೆ ಒಡೆದ ಆರೋಪಿಗಳನ್ನು ಬಂಧಿಸಿ

ಪ್ರಕರಣ ಗಂಭೀರವಾಗಿ ಪರಿಗಣಿಸಲು ಜನರ ಆಗ್ರಹ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 15:14 IST
Last Updated 2 ಅಕ್ಟೋಬರ್ 2020, 15:14 IST
ಸುರಪುರ ತಾಲ್ಲೂಕಿನ ಮಾವಿನಮಟ್ಟಿಯ ಕೆರೆ ಒಡೆದು ರೈತರ ಬೆಳೆ ನಾಶ ಮಾಡಿದ ಕಿಡಿಗೇಡಿಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿ ತಹಶೀಲ್ದಾರ್ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಯಿತು
ಸುರಪುರ ತಾಲ್ಲೂಕಿನ ಮಾವಿನಮಟ್ಟಿಯ ಕೆರೆ ಒಡೆದು ರೈತರ ಬೆಳೆ ನಾಶ ಮಾಡಿದ ಕಿಡಿಗೇಡಿಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿ ತಹಶೀಲ್ದಾರ್ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಯಿತು   

ಸುರಪುರ: ತಾಲ್ಲೂಕಿನ ಮಾವಿನಮಟ್ಟಿ ಗ್ರಾಮದ ಮೀನು ಸಾಕಣೆ ಮಾಡುವ ಕೆರೆಯನ್ನು ಒಡೆದು ರೈತರ ಜಮೀನುಗಳಿಗೆ ನೀರು ಹರಿಬಿಟ್ಟು, ಬೆಳೆ ನಾಶ ಮಾಡಿದ ಕೀಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮುಖಂಡರು ಮತ್ತು ಕಾರ್ಯಕರ್ತರು ಶುಕ್ರವಾರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಜಿಲ್ಲಾ ಸಂಚಾಲಕ ಗೋಪಾಲ ತಳವಾರ ಮಾತನಾಡಿ, ‘ತಾಲ್ಲೂಕಿನಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ನಾಶವಾಗಿ ರೈತರಿಗೆ ದಿಕ್ಕು ತೋಚದಂತಾಗಿದೆ. ಕೆರೆ ಒಡ್ಡುಗಳು ಒಡೆದು ಹೊಲ– ಗದ್ದೆಗಳು ಜಲಾವೃತಗೊಂಡು ಲಕ್ಷಾಂತರ ಮೊತ್ತದ ಬೆಳೆ ನಷ್ಟವಾಗಿ ಅನ್ನದಾತನ ಸಂಕಷ್ಟಕ್ಕೆ ಸಿಲುಕಿದ್ದಾನೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮಾವಿನಮಟ್ಟಿ ಗ್ರಾಮದ ಮೀನು ಸಾಕಾಣಿಕೆಯ ಕೆರೆಯನ್ನು ಒಡೆದು ರೈತರ ಬೆಳೆ ನಾಶ ಮಾಡಿ, ರೈತರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ’ ಎಂದು ಆಕ್ರೋಶ ಹೊರಹಾಕಿದರು.

‘ಕಿಡಿಗೇಡಿಗಳ ಮೇಲೆ ಗಂಭೀರ ಪ್ರಕರಣ ದಾಖಲಿಸಿ ಬಂಧಿಸಬೇಕು. ಕೆರೆ ನಿರ್ವಹಣೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದ ಗುತ್ತಿಗೆದಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ನಷ್ಟ ಅನುಭವಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಈ ಕುಟುಂಬದವರಿಗೆ ಮೀನು ಸಾಕಾಣಿಕೆಗೆ ಪರವಾನಗಿ ನೀಡಬೇಕು. ಅತಿವೃಷ್ಟಿ-ಅನಾವೃಷ್ಟಿಗೊಳಗಾದ ರೈತರ ಜಮೀನುಗಳಿಗೆ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ತಹಶೀಲ್ದಾರ್ ಸುಫಿಯಾ ಸುಲ್ತಾನ್ ಅವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಸಂಘಟನಾ ಸಂಚಾಲಕ ಅಪ್ಪಣ್ಣ ಗಾಯಕವಾಡ, ವಕೀಲ ಗುರುಪಾದಪ್ಪ ಬನ್ನಾಳ, ಕೃಷ್ಣ, ದಲಿತ ಮುಖಂಡರಾದ ರಾಮಚಂದ್ರ ವಾಗಣಗೇರಾ, ಮಹೇಶ ಕರಡಕಲ್, ಸಿದ್ದಪ್ಪ ಸುರಪುರಕರ್, ಹುಸನಪ್ಪ ಜೀವಣಗಿ, ಮಲ್ಲಿಕಾರ್ಜುನ ವಾಗಣಗೇರಾ, ಪಕೀರಪ್ಪಗೌಡ ಟಣಕೆದಾರ್, ಬಸವರಾಜ ಚಿಂಚೋಳಿ, ಬಸವರಾಜ ಕೆಂಭಾವಿ, ಮರೆಪ್ಪ ಮಲ್ಲಾ, ಶಿವಪ್ಪ ಕೆಂಭಾವಿ, ಮಂಜುನಾಥ ಮಲ್ಲಾ, ಶಿವಶರಣ ನಾಗರೆಡ್ಡಿ, ಈರಪ್ಪ ಏವೂರ, ಚಂದ್ರಪ್ಪ ಯಾಳಗಿ ಗೋವಿಂದರಾಯಗೌಡ ಶಖಾಪುರ, ಬಸವರಾಜ ಯಡಿಯಾಪುರ, ಚನ್ನಪ್ಪ ಕೆಂಭಾವಿ, ಮರೆಪ್ಪ ಕೆಂಭಾವಿ, ಮಹಾದೇವಪ್ಪ ಬೋನಾಳ, ಸಿದ್ದು ಜಮಖಂಡಿ, ಅಂಬ್ರೇಶ ದೊರೆ, ಮಾನಪ್ಪ ಮಾವಿನಮಟ್ಟಿ, ಶರಣು ಗುಡಿಮನಿ ಅನೇಕರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.