ADVERTISEMENT

ಬಾ ಶಿಕ್ಷಕ ಮರಳಿ ತಾಂಡಾದ ಶಾಲೆಗೆ!

ಥಾನುನಾಯ್ಕ ತಾಂಡಾ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರೇ ಅನಧಿಕೃತ ಗೈರು

ಮಲ್ಲೇಶ್ ನಾಯಕನಹಟ್ಟಿ
Published 18 ಡಿಸೆಂಬರ್ 2018, 19:35 IST
Last Updated 18 ಡಿಸೆಂಬರ್ 2018, 19:35 IST
ಯಾದಗಿರಿ ತಾಲ್ಲೂಕು ಥಾನುನಾಯ್ಕ ತಾಂಡಾದಲ್ಲಿ ಶಿಕ್ಷಕರು ಅನಧಿಕೃತವಾಗಿ ಗೈರು ಆಗಿರುವುದರಿಂದ ಶಾಲೆ ಹೊರಗೆ ನಿಂತು ಶಿಕ್ಷಕರ ದಾರಿ ಕಾಯುತ್ತಿರುವ ಶಾಲಾ ಮಕ್ಕಳು
ಯಾದಗಿರಿ ತಾಲ್ಲೂಕು ಥಾನುನಾಯ್ಕ ತಾಂಡಾದಲ್ಲಿ ಶಿಕ್ಷಕರು ಅನಧಿಕೃತವಾಗಿ ಗೈರು ಆಗಿರುವುದರಿಂದ ಶಾಲೆ ಹೊರಗೆ ನಿಂತು ಶಿಕ್ಷಕರ ದಾರಿ ಕಾಯುತ್ತಿರುವ ಶಾಲಾ ಮಕ್ಕಳು   

ಯಾದಗಿರಿ: ‘ಬಾ ಮರಳಿ ಶಾಲೆಗೆ’ ಎಂದು ಶಿಕ್ಷಕರು ಮಕ್ಕಳನ್ನು ಹುಡುಕಿಕೊಂಡು ಬೀದಿ ಸುತ್ತಿ ಶಾಲೆಗೆ ದಾಖಲಿಸುವುದನ್ನು ಕಂಡಿದ್ದೇವೆ. ಆದರೆ, ಜಿಲ್ಲೆಯ ಥಾನುನಾಯ್ಕ ತಾಂಡಾದಲ್ಲಿನ ಸರ್ಕಾರಿ ಶಾಲೆಯ ಮಕ್ಕಳ ಸ್ಥಿತಿ ಮಾತ್ರ ವ್ಯತಿರಿಕ್ತವಾಗಿದೆ! ಇಂದಾದರೂ ಶಿಕ್ಷಕರು ಶಾಲೆಗೆ ಬಂದಾರು.. ಕಲಿಕೆ ಶುರುವಾದೀತು.. ಎಂಬ ಆಶಾಭಾವದಿಂದ ನಿತ್ಯ ಇಲ್ಲಿನ ಮಕ್ಕಳು ಶಿಕ್ಷಕರ ದಾರಿ ಕಾಯುತ್ತಿದ್ದಾರೆ. ಶಿಕ್ಷಕರ ಅನಧಿಕೃತ ಗೈರುಹಾಜರಿಯಿಂದಾಗಿ ಮಕ್ಕಳು ‘ಬನ್ನಿ ಶಿಕ್ಷಕರೇ ಮರಳಿ ತಾಂಡಾದ ಶಾಲೆಗೆ’ ಎನ್ನುವಂತಾಗಿದೆ!

ಥಾನುನಾಯ್ಕ ತಾಂಡಾದಲ್ಲಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 30ರಿಂದ 40ಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದಾರೆ. ಮುಖ್ಯ ಶಿಕ್ಷಕರು ಜತೆಗೆ ಸಹ ಶಿಕ್ಷಕ ಸೇರಿ ಇಬ್ಬರು ಶಿಕ್ಷಕರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ತವ್ಯಕ್ಕೆ ನಿಯೋಜನೆಗೊಳಿಸಿದೆ. ಆದರೆ, ಎಲ್ಲ ಹೊಣೆ ಹೊರಬೇಕಿದ್ದ ಮುಖ್ಯಶಿಕ್ಷಕರೇ ಇಲ್ಲಿ ನಾಪತ್ತೆ! 15 ವರ್ಷಗಳಿಂದ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಶಿಕ್ಷಕರು ಯಾರು ಎಂದು ಇಲ್ಲಿನ ಮಕ್ಕಳಿಗೆ ಕೇಳಿದರೆ ‘ಗೊತ್ತಿಲ್ಲ’ ಎಂಬುದಾಗಿ ಉತ್ತರಿಸುತ್ತಾರೆ!

ಮುಖ್ಯಶಿಕ್ಷಕರು ಅನಧಿಕೃತವಾಗಿ ಗೈರು ಆಗುತ್ತಿರುವುದರಿಂದ ಸಹ ಶಿಕ್ಷಕರಿಗೂ ಲಂಗು ಲಗಾಮಿಲ್ಲ. ಹಾಗಾಗಿ, ಅವರೂ ಅನಧಿಕೃತ ಗೈರು ಹಾಜರಾಗುತ್ತಿದ್ದಾರೆ. ಇದರಿಂದ ಮಕ್ಕಳು ಕಲಿಕೆಯಲ್ಲಿ ಹಿಂದೆಬೀಳುವಂತಾಗಿರುವುದು ವಿದ್ಯಾರ್ಥಿ ಪೋಷಕರ ಬೇಸರಕ್ಕೆ ಕಾರಣವಾಗುತ್ತಿದೆ.

ADVERTISEMENT

ಜಿಲ್ಲೆಯಲ್ಲಿ ಒಟ್ಟು 252 ತಾಂಡಾಗಳಿವೆ. ಕೆಲವೊಂದು ತಾಂಡಾಗಳು ಕಂದಾಯ ಗ್ರಾಮಗಳಾಗಿ ಗುರುತಿಸಲ್ಪಟ್ಟಿಲ್ಲ. ಹಾಗಾಗಿ, ಕುಗ್ರಾಮಗಳಂತೆಯೇ ಇವೆ. ಇಂಥಾ ತಾಂಡಾಗಳಲ್ಲಿ ಸರ್ಕಾರ 1ರಿಂದ 5ನೇ ತರಗತಿಯವರೆಗೆ ಮಕ್ಕಳ ಕಲಿಕೆಗೆ ಪೂರಕವಾಗುವಂತೆ ಕಿರಿಯ ಶಾಲೆಗಳನ್ನು ತೆರೆದಿದೆ. ಆದರೆ, ಶಿಕ್ಷಕರ ಕರ್ತವ್ಯ ನಿಷ್ಠೆ ಇಲ್ಲದೇ ಇರುವುದರಿಂದ ಶೈಕ್ಷಣಿಕ ಪ್ರಗತಿಯ ಕುಂಠಿತಕ್ಕೆ ಕಾರಣವಾಗುತ್ತಿದೆ. ಥಾನುನಾಯ್ಕ ತಾಂಡಾದದಲ್ಲಿನ ಬಹುತೇಕ ಬಡವರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ದಾಖಲಾಗಿದ್ದಾರೆ. ಆದರೆ, ಇಲ್ಲಿನ ಮಕ್ಕಳಿಗೆ ಕನಿಷ್ಠ ಅಕ್ಷರ ಮಾಲೆ ಗುರುತು ಹಿಡಿಯುವಷ್ಟರ ಮಟ್ಟಿಗೆ ಕಲಿಕಾ ತರಬೇತಿ ಮತ್ತು ಬೋಧನೆ ನಡೆದಿಲ್ಲ ಎಂಬುದಾಗಿ ಇಲ್ಲಿನ ಎಸ್‌ಡಿಎಂಸಿ ಅಧ್ಯಕ್ಷ ಬಾಲಚಂದ್ರ ದೂರುತ್ತಾರೆ.

ಗ್ರಾಮಸ್ಥರು ನಿತ್ಯ ಶಿಕ್ಷಕರಿಗೆ ದೂರವಾಣಿ ಕರೆ ಮಾಡಿ ಶಾಲೆಗೆ ಬರುವಂತೆ ಮನವಿ ಸಲ್ಲಿಸುತ್ತಾರೆ. ಎಸ್‌ಡಿಎಂಸಿ ಅಧ್ಯಕ್ಷರು ಸೇರಿದಂತೆ ಸದಸ್ಯರು ಕೂಡ ಶಿಕ್ಷಕರ ಆಗಮನಕ್ಕಾಗಿ ನಿತ್ಯ ದಾರಿ ಕಾಯುತ್ತಾರೆ. ಶಿಕ್ಷಕರು ಬರದೇ ಹೋದಾಗ ಮಕ್ಕಳು ಬಿಸಿಯೂಟ ತಿಂದು ಮನೆಗೆ ಮರಳುತ್ತಾರೆ. ಇದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತವಾಗಿರುವುದು ಕಂಡು ಗ್ರಾಮಸ್ಥರು ಮರುಗುವಂತಾಗಿದೆ.

ಬಿಸಿಯೂಟ ಎಷ್ಟು ಸುರಕ್ಷಿತ?!

ಬಿಸಿಯೂಟ ತಯಾರಿಸುವಾಗ ಮುಖ್ಯ ಶಿಕ್ಷಕರು ಎದುರು ನಿಂತು ಜಾಗ್ರತೆ ವಹಿಸಬೇಕು ಎಂಬುದು ಇಲಾಖೆಯ ನಿಯಮವಾಗಿದೆ. ಆದರೆ, ಥಾನುನಾಯ್ಕ ತಾಂಡಾದಲ್ಲಿಮ ಶಾಲೆಯಲ್ಲಿ ಬಿಸಿಯೂಟ ಕಾರ್ಯಕರ್ತರೇ ಇದರ ಹೊಣೆ ಹೊತ್ತಿದ್ದಾರೆ. ಎಷ್ಟು ಬೇಗ ಮುಗಿಯುತ್ತೋ ಎನ್ನುವ ಧಾವಂತದಲ್ಲಿ ಬಿಸಿಯೂಟ ತಯಾರಿಸುತ್ತಾರೆ. ಶಿಕ್ಷಕರಿಲ್ಲದಿದ್ದರೆ ಮಕ್ಕಳಿಗೆ ಬೇಗ ಬೇಗ ಊಟ ಬಡಿಸಿ ಮನೆಗೆ ಮರಳುತ್ತಾರೆ!

ಒಂದು ವೇಳೆ ಬಿಸಿಯೂಟ ಮಕ್ಕಳ ಪಾಲಿಗೆ ವಿಷಾಹಾರವಾದರೆ ಯಾರು ಹೊಣೆ? ಶಿಕ್ಷಕರ ನೇತೃತ್ವ ಇಲ್ಲದೇ ತಯಾರಿಸುವ ಬಿಸಿಯೂಟ ಮಕ್ಕಳಿಗೆ ಎಷ್ಟು ಸುರಕ್ಷಿತ ಎಂಬುದಾಗಿ ಇಲ್ಲಿನ ಗ್ರಾಮಸ್ಥರಾದ ಶ್ರೀನಿವಾಸ ಪ್ರಶ್ನಿಸುತ್ತಾರೆ.

ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಡಿಡಿಪಿಐ ಅವರ ಗಮನಕ್ಕೆ ತರಲಾಗಿದೆ. ಆದರೂ, ಶಿಕ್ಷಕರ ವಿರುದ್ಧ ಕ್ರಮಕೈಗೊಂಡಿಲ್ಲ. ಜಿಲ್ಲಾಧಿಕಾರಿ ಅವರಿಗೂ ದೂರು ನೀಡಿದ್ದೇವೆ. ಕ್ರಮ ಜರುಗಿಸಿಲ್ಲ. ಕೂಡಲೇ ಶಾಲೆಗೆ ಪರ್ಯಾಯ ಶಿಕ್ಷಕರನ್ನು ನಿಯೋಜನೆಗೊಳಿಸಿ ಮಕ್ಕಳ ಕಲಿಕೆಗೆ ಸಹಕರಿಸಬೇಕು ಎಂಬುದಾಗಿ ಗ್ರಾಮಸ್ಥರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.