ಕೆಂಭಾವಿ: ಪಟ್ಟಣದಲ್ಲಿ ಡಾ.ಬಾಬು ಜಗಜೀವನ ರಾಂ ಭವನ ನಿರ್ಮಾಣಕ್ಕಾಗಿ 4 ಎಕರೆ ಜಮೀನು, ₹10 ಕೋಟಿ ಅನುದಾನ ಮಂಜೂರು ಮಾಡಬೇಕು ಎಂದು ಮಾದಿಗ ಸಮುದಾಯಗಳ ಒಕ್ಕೂಟದ ಮುಖಂಡರು ಸಚಿವರಿಗೆ ಮನವಿ ಮಾಡಿದರು.
ಬಳಿಕ ಮಾತನಾಡಿದ ಮುಖಂಡರು, ‘ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷ ಗತಿಸಿದರೂ ಇನ್ನೂ ಕೊಳಚೆ ಪ್ರದೇಶದಲ್ಲಿಯೇ ದಲಿತ ಕುಟುಂಬಗಳು ವಾಸಿಸುತ್ತಿವೆ. ಮೂಲಸೌಕರ್ಯ ಪಡೆದುಕೊಳ್ಳುವಲ್ಲಿ ವಂಚಿತರಾಗಿದ್ದೆವೆ’ ಎಂದರು.
ಪಟ್ಟಣದ ಸೀಮಾಂತರದಲ್ಲಿ ಬರುವ ಸ.ನಂ 4ರಲ್ಲಿ 47 ಎಕರೆ 31 ಗುಂಟೆ, ಸ.ನಂ512 ರಲ್ಲಿ ಜಮೀನು ಲಭ್ಯವಿದ್ದು ಇಲ್ಲಿ 4 ಎಕರೆ ಜಮೀನು ಮಂಜೂರು ಮಾಡಿ ಸಮುದಾಯ ಭವನ ನಿರ್ಮಾಣ ಮಾಡುವುದಕ್ಕೆ ₹10 ಕೋಟಿ ಅನುದಾನ ಮಂಜೂರು ಮಾಡಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಪ್ರಮುಖ ದೇವಿಂದ್ರಪ್ಪ ವಠಾರ, ಶಿವಪ್ಪ ಮಳಕೇರಿ, ನಾಗರಾಜ ಚಿಂಚೋಳಿ, ಮಲ್ಲು ವಠಾರ, ಬಸಲಿಂಗಪ್ಪ ಐನಾಪುರ, ಶಿವಮಾನಪ್ಪ ಖಾನಾಪುರ, ಧರ್ಮಣ್ಣ, ಸದಾಶಿವ ಬೊಮ್ಮನಹಳ್ಳಿ, ಪರಶುರಾಮ ಸುರಪುರ, ಶೇಖರ ತಳ್ಳಳ್ಳಿ, ಶಂಕರ, ಭೀಮರಾಯ, ನಿಂಗಪ್ಪ ಹಲಗಿ ಸೇರಿದಂತೆ ಅನೇಕರಿದ್ದರು.
‘ಜಾತಿ ಲೆಕ್ಕದಲ್ಲಿ ಬಾಡಿಕೆ ನಿರಾಕರಣೆ’
‘ಪಟ್ಟಣದಲ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಾದಿಗ ಸಮುದಾಯದ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು ಕಾರ್ಯಕ್ರಮಗಳನ್ನು ಮಾಡಲು ಕಷ್ಟವಾಗಿದೆ. ದಲಿತ ಮಾದಿಗ ಸಮಾಜದ ಕುಟುಂಬದವರು ಸುಮಾರು ವರ್ಷಗಳಿಂದ ಚಿಕ್ಕದಾದ ಜಾಗದಲ್ಲಿಯೇ ವಾಸಿಸಿಕೊಂಡು ಬಂದಿರುತ್ತಾರೆ. ಊರಲ್ಲಿರುವ ಕಲ್ಯಾಣ ಮಂಟಗಳನ್ನು ಬಾಡಿಗೆ ಕೊಡುವಲ್ಲಿಯೂ ಜಾತಿ ಲೆಕ್ಕಕ್ಕೆ ತೆಗೆದುಕೊಂಡು ಬಾಡಿಗೆ ಕೊಡಲು ನಿರಾಕರಿಸುತ್ತಾರೆ’ ಎಂದು ಮುಖಂಡರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.