
ಸುರಪುರ: ‘ಬಸವಾದಿ ಶರಣರ ವಚನಗಳು ಮತ್ತು ತತ್ವಾದರ್ಶಗಳು ನಮ್ಮೆಲ್ಲರ ಬದುಕಿಗೆ ಸ್ಪೂರ್ತಿಯಾಗಿವೆ. ಈ ಸ್ಥಾನಕ್ಕೆ ಬರಲು ಶರಣರು ಆದರ್ಶಗಳೇ ಕಾರಣವಾಗಿವೆ’ ಎಂದು ಕೆವೈಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠ್ಠಲ ಯಾದವ ಹೇಳಿದರು.
ಸಮೀಪದ ರಂಗಂಪೇಟೆಯ ಬಸವ ನಿಲಯದ ಆವರಣದಲ್ಲಿ ಶರಣೆ ಬಸವಲಿಂಗಮ್ಮ ಶಿವಲಿಂಗಪ್ಪ ಗುಂಡಾನೋರ ಅವರ ಸ್ಮರಣೋತ್ಸವ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಬಸವ ತತ್ವ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕೆವೈಡಿಸಿಸಿ ಬ್ಯಾಂಕ್‍ನ ನಿರ್ದೇಶಕ ಸುರೇಶ ಸಜ್ಜನ ಮಾತನಾಡಿ, ‘ಬಸವ ತತ್ವ ಎಂದರೆ ಸರಳ ಜೀವನ, ಕಾಯಕ ಮತ್ತು ದಾಸೋಹಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ಆಗಿದೆ. ನಮ್ಮ ಭಾಗದಲ್ಲಿ ಸಹಕಾರಿ ಸಂಘಗಳು ಬೆಳೆಯಬೇಕು. ಬೆಳಗಾವಿ ಮತ್ತು ಉಡುಪಿ ಜಿಲ್ಲೆಗಳ ಸಹಕಾರಿ ಸಂಘಗಳು ನಮಗೆ ಮಾದರಿಯಾಗಬೇಕಿದೆ’ ಎಂದರು.
ಶರಣ ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ ಮಾತನಾಡಿ, ‘ಎಲ್ಲ ತಂದೆ-ತಾಯಿಂದಿರು ಮಕ್ಕಳಿಗೆ ವಚನ ಸಾಹಿತ್ಯವನ್ನು ತಿಳಿಸಬೇಕು. ಮಕ್ಕಳಲ್ಲಿ ವೈಚಾರಿಕ ಪ್ರಜ್ಞೆ ಹಾಗೂ ವೈಜ್ಞಾನಿಕ ತಿಳಿವಳಿಕೆ ಅಗತ್ಯ. ಇದರಿಂದ ಮಕ್ಕಳು ಮೂಢನಂಬಿಕೆಗಳಿಂದ ಹೊರಬರಲು ಸಾಧ್ಯವಿದೆ’ ಎಂದರು.
ಸಾನ್ನಿಧ್ಯ ವಹಿಸಿದ್ದ ಗುರುಮಠಕಲ್ ಖಾಸಾ ಮಠದ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಾ ಪಾಟೀಲ, ರಂಗಂಪೇಟೆ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸುಗೂರೇಶ ವಾರದ, ವಕೀಲ ಮಲ್ಲಿಕಾರ್ಜುನ ಹಿರೇಮಠ, ಲೇಖಕಿ ವಿಶ್ವಪೂರ್ವ ಸತ್ಯಂಪೇಟೆ, ಸಾಹಿತಿ ಶಿವಣ್ಣ ಇಜೇರಿ ಮಾತನಾಡಿದರು.
ನಂತರ ವಿಠ್ಠಲ ಯಾದವ, ಸುರೇಶ ಸಜ್ಜನ, ವಿಶ್ವರಾಧ್ಯ ಸತ್ಯಂಪೇಟೆ ಮತ್ತು ಹೋರಾಟಗಾರ ಮಲ್ಕಣ್ಣ ಚಿಂತಿಗೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಲ್ಲಿಕಾರ್ಜುನ ಸತ್ಯಂಪೇಟೆ ಸ್ವಾಗತಿಸಿದರು. ಚೆನ್ನಮಲ್ಲಿಕಾರ್ಜುನ ಗುಂಡಾನೋರ ವಚನ ಗಾಯನ ಮಾಡಿದರು. ರಾಜು ಕುಂಬಾರ ನಿರೂಪಿಸಿದರು. ಶಿವರುದ್ರ ಉಳ್ಳಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.