
ಯಾದಗಿರಿ: ‘ವಿಶ್ವಾರಾಧ್ಯರ ಆಧ್ಯಾತ್ಮಿಕ ಬದುಕಿನ ಚೇತನ ಶಕ್ತಿಯಾಗಿ ಬಸವಾಂಬೆ ತಾಯಿ ಅವರ ಬಾಳನ್ನು ಬೆಳಗಿದ್ದಾರೆ’ ಎಂದು ಅಬ್ಬೆತುಮಕೂರಿನ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಹೇಳಿದರು.
ಅಬ್ಬೆತುಮಕೂರಿನ ಮಠದಲ್ಲಿ ಈಚೆಗೆ ಬಸಮ್ಮ ತಾಯಿಯ ಜಾತ್ರೆ ಅಂಗವಾಗಿ ನಡೆದ ರಥೋತ್ಸವದ ಬಳಿಕದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
‘ವಿಶ್ವಾರಾಧ್ಯರು ಈ ನಾಡು ಕಂಡ ಅಪರೂಪದ ಸಿದ್ಧಿ ಪುರುಷರು. ಅವರ ಸಿದ್ದಿಯ ಸಾಧನೆಯ ಪಥದಲ್ಲಿ ಪತ್ನಿ ಬಸಮ್ಮ ತಾಯಿ ಪಾತ್ರ ಬಹುಮುಖ್ಯವಾಗಿದೆ. ಸಿದ್ದಿಯ ಶಿಖರವನ್ನು ಮುಟ್ಟಲು ಬಸವಾಂಬೆ ಮೆಟ್ಟಿಲಾಗಿ ನಿಂತಿದ್ದರಿಂದಾಗಿ ಅದು ಸಾಧ್ಯವಾಯಿತು’ ಎಂದರು.
‘ಬಸಮ್ಮ ತಾಯಿ ಗಂಡನಿಗೆ ತಕ್ಕ ಮಡದಿಯಾಗಿದ್ದರು. ಅವರು ನಶ್ವರವಾದ ಬದುಕಿಗೆ ಅಂಟಿಕೊಳ್ಳಲಿಲ್ಲ. ಪತಿ ವಿಶ್ವಾರಾಧ್ಯರು ಪರಮೋನ್ನತ ಅಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದಾಗ ತ್ಯಾಗಮಯಿಯಾದ ಬಸಮ್ಮ ತಾಯಿ, ಎಲ್ಲಾ ಹಂತದಲ್ಲಿಯೂ ಅವರಿಗೆ ಸಹ ಧರ್ಮಣಿಯಾಗಿ ನಿಂತಿದ್ದರು’ ಎಂದು ಹೇಳಿದರು.
‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪುದು ಶಿವಂಗೆ ಎನ್ನುವಂತೆ ವಿಶ್ವಾರಾಧ್ಯರು ಮತ್ತು ಬಸಮ್ಮ ತಾಯಿ ಯಾವತ್ತೂ ಮೋಹದ ಪಾಶಕ್ಕೆ ಒಳಗಾಗಲಿಲ್ಲ’ ಎಂದರು
ವಿಶ್ವಾರಾಧ್ಯರ ಮತ್ತು ಬಸಮ್ಮ ತಾಯಿಯ ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಪ್ರಮುಖ ಬೀದಿಗಳಲ್ಲಿ ಪುರವಂತರ ಸೇವೆಯೊಂದಿಗೆ ಪಲ್ಲಕ್ಕಿ ಉತ್ಸವದ ಬಳಿಕ ಬಸಮ್ಮ ತಾಯಿಯ ರಥೋತ್ಸವ ಸಂಭ್ರಮದಿಂದ ಜರುಗಿತು.
ಬಿಜೆಪಿ ಮುಖಂಡ ಮಹೇಶರೆಡ್ಡಿ ಮುದ್ನಾಳ, ಚನ್ನಪ್ಪಗೌಡ ಮೂಸಂಬಿ, ಸುಭಾಷ್ ಚಂದ್ರ ಕೌಲಗಿ ಸೇರಿದಂತೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.