
ಯಾದಗಿರಿ: ‘ಶಾಸಕ ಶರಣಗೌಡ ಕಂದಕೂರ ಅವರು ನಮ್ಮ ಸಮಾಜದ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಬೆಳಗಾವಿ ಅಧಿವೇಶನದಲ್ಲಿ ರೇಟ್ ಬೋರ್ಡ್ ಬಗ್ಗೆ ಮಾತನಾಡಿ ಆರೋಪಿಸಿರುವುದು ಸರಿಯಲ್ಲ’ ಎಂದು ಜಿಲ್ಲಾ ಕೋಲಿ ಕಬ್ಬಲಿಗ ಸಮಾಜದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಗೋಸಿ ಹೇಳಿದರು.
‘ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ರೇಟ್ ಬೋರ್ಡ್ ಇಟ್ಟುಕೊಂಡು ವ್ಯವಹಾರ ಮಾಡುತ್ತಿದ್ದು, ಅದಕ್ಕೂ ನನಗೂ ಸಂಬಂಧವೂ ಇಲ್ಲ ಎಂಬ ಹೇಳಿಕೆ ಕೊಟ್ಟಿರುವುದು ಖಂಡನೀಯ. ಹಿಂದುಳಿದ ಸಮುದಾಯದ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದಾರೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
‘ಕ್ಷೇತ್ರದಲ್ಲಿ ಭ್ರಷ್ಟಚಾರ ನಡೆದು ಯಾವುದಾದರೂ ಪುರಾವೆಗಳು ಇದ್ದರೆ ಲೋಕಾಯುಕ್ತರು, ಮೇಲಾಧಿಕಾರಿಗಳು, ಗೃಹ ಸಚಿವರು ಅಥವಾ ರಾಜ್ಯಪಾಲರಿಗೆ ದೂರು ಕೊಡಬಹುದಿತ್ತು. ಆದರೆ, ಅಧಿವೇಶನದಲ್ಲಿ ಈ ರೀತಿ ಮಾತನಾಡಿರುವುದು ಸರಿಯಲ್ಲ. ಮುಂದೆಯೂ ಇದೇ ರೀತಿ ಮಾತನಾಡಿದರೆ ಶಾಸಕರ ಮನೆಯ ಮುಂದೆ ಪ್ರತಿಭಟನೆ ಮಾಡಲಾಗುವುದು’ ಎಂದರು.
‘ಜನಪ್ರತಿನಿಧಿ ಆದವರು ಅಭಿವೃದ್ಧಿಯತ್ತ ಗಮನ ಹರಿಸಬೇಕು. ವಿನಾಕರಣ ಅಧಿಕಾರಿಗಳ ಮೇಲೆ ಆಪಾದನೆ ಮಾಡುವುದು ಘನತೆಗೆ ತಕ್ಕದಲ್ಲ’ ಎಂದಿ ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮರೆಡ್ಡಿ ಯರಗೋಳ ಮಾತನಾಡಿ, ‘ಶಾಸಕರು ಕ್ಷೇತ್ರದ ಜನರ ವಿಶ್ವಾಸ ಗಳಿಸುವಲ್ಲಿ ವಿಫಲರಾಗುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿನ ರಸ್ತೆಗಳ ಅಭಿವೃದ್ಧಿ ಕಡೆಗೆ ಗಮನಹರಿಸಲಿ. ಅಧಿಕಾರಿಗಳ ಮೇಲೆ ಆರೋಪ ಮಾಡಿ ವರ್ಗಾವಣೆ ಮಾಡಿಸುವುದು ಸರಿಯಲ್ಲ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಸಣ್ಣ ಹಣಮಂತ ಬಳಿಚಕ್ರ, ಬಸವರಾಜಪ್ಪ ಬಾಗ್ಲಿ, ಶರಣಪ್ಪ ಮೋಟ್ನಳ್ಳಿ ಹೂನಿಗೇರ, ಮಲ್ಲು ಪೂಜಾರಿ, ಬಸವರಾಜ್ ಕೋಲ್ಕರ್, ಅಯ್ಯಪ್ಪ ಹಾಲಿಗೇರ, ಮಹಾದೇವಪ್ಪ ಗಣಪುರ, ರಾಜಪ್ಪ, ಮಹೇಶ ಬಾಡಿಯಾಳ, ಲಕ್ಷ್ಮೀನಾರಾಯಣ ಪೂಜಾರಿ, ಶಿವಣ್ಣ ಬಳಚಕ್ರ, ಮುದಕಪ್ಪ ಚಾಮನಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.