ADVERTISEMENT

ಯಾದಗಿರಿ: ಸಂಚಾರಿ ಡಿಜಿಟಲ್ ತಾರಾಲಯಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2022, 16:12 IST
Last Updated 18 ನವೆಂಬರ್ 2022, 16:12 IST
ಯಾದಗಿರಿ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ‘ಶಾಲೆಯ ಅಂಗಳದಲ್ಲೇ ಸಂಚಾರಿ ಡಿಜಿಟಲ್ ತಾರಾಲಯ’ಕ್ಕೆ ಜಿಲ್ಲಾಧಿಕಾರಿ ಸ್ನೇಹಲ್ ಆರ್., ಚಾಲನೆ ನೀಡಿದರು
ಯಾದಗಿರಿ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ‘ಶಾಲೆಯ ಅಂಗಳದಲ್ಲೇ ಸಂಚಾರಿ ಡಿಜಿಟಲ್ ತಾರಾಲಯ’ಕ್ಕೆ ಜಿಲ್ಲಾಧಿಕಾರಿ ಸ್ನೇಹಲ್ ಆರ್., ಚಾಲನೆ ನೀಡಿದರು   

ಯಾದಗಿರಿ: ವಿದ್ಯಾರ್ಥಿಗಳು ಖಗೋಳಶಾಸ್ತ್ರದ ಬಗ್ಗೆ ತಿಳಿದು ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ವಿಜ್ಞಾನಿಗಳಾಗಿ ಹೊರ ಹೊಮ್ಮಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್., ಸಲಹೆ ನೀಡಿದರು.

ನಗರದ ಸರ್ಕಾರಿ ಪ್ರೌಢಶಾಲೆ ಸ್ಟೇಷನ್‌ ಬಜಾರ್‌ ಶಾಲೆಯಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಎಸ್‌ಟಿಇಪಿಎಸ್), ವರ್ಣಾಜ್ ಟೆಕ್ನಾಲಜಿಸ್ ತಾರೇ ಜಮೀನ್ ಪರ್ ಸಂಸ್ಥೆ ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಹಯೋಗದ ‘ಶಾಲೆಯ ಅಂಗಳದಲ್ಲೇ ಸಂಚಾರಿ ಡಿಜಿಟಲ್ ತಾರಾಲಯ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮತ್ತು ಸಂಚಾರಿ ತಾರಾಲಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಖಗೋಳಶಾಸ್ತ್ರ ಬಗ್ಗೆ ಅರಿವು ಮೂಡಿಸಲು ಈ ಯೋಜನೆ ಉಪಯುಕ್ತವಾಗಿದೆ. ಮಕ್ಕಳಿಗೆ ನಕ್ಷತ್ರಪುಂಜ, ನಕ್ಷತ್ರಗಳು, ಆಕಾಶಕಾಯಗಳ ಪರಿಚಯ ಹಾಗೂ ನಭೋಮಂಡಲದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ ಎಂದರು.

ADVERTISEMENT

ರಾಜ್ಯದಲ್ಲಿ ಒಟ್ಟು 11 ಸಂಚಾರಿ ಸಂಚಾರಿ ತಾರಾಲಯಗಳು ಕಾರ್ಯವನ್ನು ನಿರ್ವಹಿಸುತ್ತಿವೆ. ಅದರಲ್ಲಿಯೂ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ 7 ಇವೆ. ಈ ಕಾರ್ಯಕ್ರಮದ ಸದುಪಯೋಗವನ್ನು ನಮ್ಮ ಭಾಗದ ವಿದ್ಯಾರ್ಥಿಗಳು ಪಡೆದುಕೊಳ್ಳಲಿ. ಅದರಲ್ಲಿಯೂ ಗ್ರಾಮೀಣ ಭಾಗದ ಮಕ್ಕಳಿಗೆ ಗ್ರಹಗಳು ನಕ್ಷತ್ರಗಳ ಲೋಕವನ್ನು ಸಂಚಾರಿ ತಾರಾಲಯವೂ ಪರಿಚಯಿಸುತ್ತಿದೆ ಎಂದು ನುಡಿದರು.

ಖಗೋಳ ಶಾಸ್ತ್ರದ ಕುರಿತಂತೆ ಶಾಲೆಯ ವಿದ್ಯಾರ್ಥಿಗಳು ರಂಗೋಲಿ ಬಿಡಿಸಿದ್ದನ್ನು ಜಿಲ್ಲಾಧಿಕಾರಿ ವಿಕ್ಷೀಸಿ ಮಕ್ಕಳ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಚಾರಿ ತಾರಾಲಯದ ರಾಜ್ಯ ವ್ಯವಸ್ಥಾಪಕ ವಿರೇಶ ಹಂಚಿನಾಳ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಲ್ಲಿ ಖಗೋಳಶಾಸ್ತ್ರದ ಕೌತುಗಳನ್ನು ಸಂಚಾರಿ ತಾರಾಲಯದ ಮೂಲಕ ತೋರಿಸಲಾಗುತ್ತಿದೆ. ಪ್ರತಿದಿನ ಒಂದು ಶಾಲೆಗೆ ಸಂಚಾರಿ ತಾರಾಲಯವೂ ಭೇಟಿ ನೀಡಿ ಮಕ್ಕಳ ಪಠ್ಯಪುಸ್ತಕದಲ್ಲಿ ಇರುವ ಖಗೋಳಶಾಸ್ತ್ರದ ಬಗ್ಗೆ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ತಾರಾಲಯದ ನಿರ್ವಹಣಾ ಸಂಸ್ಥೆಯಾದ ತಾರೇ ಜಮೀನ್‌ ಪರ್ ಸಂಸ್ಥೆಯ ಮುಖ್ಯ ಉದ್ದೇಶ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಖಗೋಳಶಾಸ್ತ್ರದ ಬಗ್ಗೆ ಕಿಡಿಯನ್ನು ಹೊತ್ತಿಸಿ ಗ್ರಾಮೀಣ ಪ್ರತಿಭೆಗಳು ವಿಜ್ಞಾನಿಗಳಾಗುವಂತೆ ಮಾಡುವುದಾಗಿದೆ ಎಂದರು.

ಈ ಸಂದರ್ಭದಲ್ಲಿ ಡಿಡಿಪಿಐ ಶಾಂತಗೌಡ ಪಾಟೀಲ, ಶಿಕ್ಷಣಾಧಿಕಾರಿ ಅಮೃತಾಬಾಯಿ, ಸಂಚಾರಿ ತಾರಾಲಯ ಜಿಲ್ಲಾ ಸಂಯೋಜಕ ಮಲ್ಲಿಕಾರ್ಜುನ ಕಲಾಕಾರ, ತಾಂತ್ರಿಕ ಸಲಹೆಗಾರ ಹುಸೇನ್‌ ಹಾಗೂ ಶಾಲೆಯ ಸಿಬ್ಬಂದಿ ಇದ್ದರು.

****

ದೇಶದಲ್ಲಿಯೇ ಈ ಯೋಜನೆಯು ಒಂದು ವಿನೂತನವಾದ ಯೋಜನೆಯಾಗಿದ್ದು, ಅದರಲ್ಲಿಯೂ ಕರ್ನಾಟಕದಲ್ಲಿ ಆರಂಭವಾಗಿದೆ
–ಸ್ನೇಹಲ್‌ ಆರ್‌., ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.